Advertisement

ಸಿನೆಮಾ ಕ್ಷೇತ್ರ ರಂಗೇರಲು ಬೇಕಿದೆ ಹಲವು ತಿಂಗಳು

01:18 AM Feb 07, 2022 | Team Udayavani |

ಉಡುಪಿ: ರಾಜ್ಯ ಸರಕಾರ ಚಿತ್ರಮಂದಿರಗಳಿಗೆ ಶೇ.100 ಆಸನಭರ್ತಿ ಮಾಡಿ ಸಿನೆಮಾ ನೋಡಬಹುದು ಎಂದು ಪರಿಷ್ಕೃತ ಆದೇಶ ಹೊರಡಿಸಿದ್ದರೂ ಚಿತ್ರಮಂದಿರಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಲಾಕ್‌ಡೌನ್‌ ಹಾಗೂ ಕೋವಿಡ್‌ ಸಂದರ್ಭದಲ್ಲಿ ಥಿಯೇಟರ್‌ಗಳಿಗೆ ಹಲವಾರು ಬಾರಿ ನಿರ್ಬಂಧ ವಿಧಿಸಲಾಗಿತ್ತು. ಶೇ. 50 ಆಸನ ಮಿತಿ ಮಾಡಿದರೂ ಅದೂ ಭರ್ತಿ ಯಾಗುತ್ತಿರಲಿಲ್ಲ. ಸದ್ಯಕ್ಕೆ ಉತ್ತಮ ಚಿತ್ರಗಳೂ ಬಿಡುಗಡೆಯಾಗುತ್ತಿಲ್ಲ. ಈ ಕಾರಣಕ್ಕೆ ಹಲವಾರು ಚಿತ್ರಮಂದಿರದ ಮಾಲಕರು ಚಿತ್ರಮಂದಿರಗಳನ್ನೇ ಬಂದ್‌ ಮಾಡಿದ್ದಾರೆ.

ಹೈ ಬಜೆಟ್‌ ಚಿತ್ರಗಳ ನಿರೀಕ್ಷೆ
ಪ್ರಸ್ತುತ ಯಾವ ಸಿನೆಮಾಗಳಿಗೂ ಉತ್ತಮ ಮಾರುಕಟ್ಟೆ ಲಭಿಸುತ್ತಿಲ್ಲ. ಕೋವಿಡ್‌ ಕಾರಣದಿಂದಾಗಿ ಹೈ ಬಜೆಟ್‌ ಸಿನೆಮಾಗಳು ದಿನಾಂಕವನ್ನೂ ಮುಂದೂಡುತ್ತಲೇ ಬಂದಿದೆ. ಕೆಜಿಎಫ್ 2, ವಿಕ್ರಾಂತ್‌ ರೋಣ, ಚಾರ್ಲಿ 007, ಜೇಮ್ಸ್‌, ಆರ್‌ಆರ್‌ಆರ್‌ ಸಿನೆಮಾಗಳು ಪೂರ್ಣಪ್ರಮಾಣದಲ್ಲಿ ಸಿದ್ದಗೊಂಡಿದ್ದರೂ ಬಿಡುಗಡೆ ಮಾಡಿಲ್ಲ.

ವೆಬ್‌ಸೀರೀಸ್‌ನತ್ತ ಯುವಜನತೆ
ಈ ನಡುವೆ ಯುವಜನತೆ ತಿಂಗಳಿಗೆ ಇಂತಿಷ್ಟ ಮೊತ್ತ ವಿನಿಯೋಗಿಸಿ ನೆಟ್‌ಫ್ಲಿಕ್ಸ್‌, ಅಮೇಜಾನ್‌ ಪ್ರೈಮ್‌, ಹಾಟ್‌ಸ್ಟಾರ್‌ ಮೂಲಕ ವೆಬ್‌ಸೀರೀಸ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಹಲವಾರು ಚಲನಚಿತ್ರಗಳನ್ನೂ ಈಗ ಆನ್‌ಲೈನ್‌ ಮೂಲಕವೇ ನೋಡಲಾಗುತ್ತಿದೆ. ಇದು ಕೂಡ ಚಿತ್ರಮಂದಿರಗಳಿಗೆ ಬಹುದೊಡ್ಡ ಹೊಡೆತ ನೀಡುತ್ತಿದೆ.

ಬಹುದೊಡ್ಡ ಹೊಡೆತ
ಸುಮಾರು 1 ವರ್ಷಕ್ಕೂ ಅಧಿಕ ಕಾಲ ಚಿತ್ರಮಂದಿರಗಳಿಗೆ ಜನರೂ ಸುಳಿಯುತ್ತಿಲ್ಲ. 8ರಿಂದ 10 ಮಂದಿ ಪ್ರೇಕ್ಷಕರು ಕಂಡುಬರುತ್ತಿದ್ದಾರೆ. ಬಹುತೇಕ ಚಿತ್ರಮಂದಿರಗಳು ರಾತ್ರಿ ಪ್ರದರ್ಶನಗಳನ್ನೂ ರದ್ದುಮಾಡಿವೆ. ಸಿಬಂದಿ ವೇತನ ಪಾವತಿ, ವಿದ್ಯುತ್‌ ಶುಲ್ಕ ಸಹಿತ ಇತರ ಶುಲ್ಕ ಪಾವತಿಗೆ ತಿಂಗಳಿಗೆ ಲಕ್ಷಾಂತರ ರೂ.ಬೇಕಾಗುತ್ತದೆ. ಲಾಭ ಬೇಡ ಮಾಡಿದ ಖರ್ಚಾದರೂ ಸಿಕ್ಕಿದರೆ ಉಪಯೋಗವಾಗುತ್ತಿತ್ತು ಎನ್ನುತ್ತಾರೆ ಚಿತ್ರಮಂದಿರದ ಮಾಲಕರು.

Advertisement

6 ತಿಂಗಳು ಅಗತ್ಯ
ಜಿಲ್ಲೆಯ ಕಲ್ಪನಾ ಚಿತ್ರಮಂದಿರ ಶೇ.50 ಆಸನ ಸಾಮರ್ಥ್ಯವಿದ್ದಾಗಲೇ ಚಿತ್ರಮಂದಿರಕ್ಕೆ ಜನವಿಲ್ಲದ ಕಾರಣ ಬಂದ್‌ ಮಾಡಲಾಗಿತ್ತು. ಮುಂದಿನ ಶುಕ್ರವಾರದಿಂದ ಮತ್ತೆ ಆರಂಭಿಸಲಾಗುವುದು. ಹಿಂದಿನಂತೆ ಚಿತ್ರಮಂದಿರಗಳಿಗೆ ಜನ ಆಗಮಿಸಲು ಇನ್ನೂ 6 ತಿಂಗಳ ಆವಶ್ಯಕತೆ ಇದೆ.
-ವಿ.ಎಸ್‌.ಸಿ.ಹೊಳ್ಳ,
ಮ್ಯಾನೇಜರ್‌, ಕಲ್ಪನಾ ಚಿತ್ರಮಂದಿರ, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next