ಮೈಸೂರು: ಬ್ರಿಟಿಷರ ದೌರ್ಜನ್ಯ, ದಬ್ಟಾಳಿಕೆ ವಿರುದ್ಧ ಹೋರಾಡಿದ ದಂಡಿ ಸತ್ಯಾಗ್ರಹವನ್ನು ಸ್ಮರಿಸುವಂತಹ ಕಾರ್ಯಕ್ರಮಗಳು ಸಾಂಕೇತಿಕವಾಗಿರದೆ ಯುವಜನರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಬೇಕು ಎಂದು ಗಾಂಧಿವಾದಿ ಸುರೇಂದ್ರ ಕೌಲಗಿ ಹೇಳಿದರು.
ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಶೇಷಾದ್ರಿಪುರಂ ಪದವಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ 88ನೇ ದಂಡಿಯಾತ್ರೆ ನೆನಪು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ಜನರಲ್ಲಿ ಇಂತಹ ಸತ್ಯಾಗ್ರಹದ ಪ್ರಭಾವ ಬೀರಬೇಕಿದೆ ಎಂದರು.
ಸಬರಮತಿ ಆಶ್ರಮದಲ್ಲಿ 78 ಮಂದಿಯಿಂದ ಆರಂಭಗೊಂಡ ಸತ್ಯಾಗ್ರಹಕ್ಕೆ 10 ಸಾವಿರಕ್ಕಿಂತಲೂ ಹೆಚ್ಚು ಮಂದಿ ಸೇರಿಕೊಂಡರು, ಜನತೆಯ ಏಳಿಗೆ ಉದ್ದೇಶವನ್ನಿಟ್ಟುಕೊಂಡು ಸತ್ಯಾಗ್ರಹ ನಡೆಸಿದರೆ, ಜನಬೆಂಬಲ ತಾನಾಗಿಯೇ ದೊರೆಯುತ್ತದೆ ದಂಡಿ ಸತ್ಯಾಗ್ರಹ ಉತ್ತಮ ಉದಾಹರಣೆ ಎಂದು ತಿಳಿಸಿದರು.
ಸರಕು ಮತ್ತು ಸೇವಾ ತೆರಿಗೆ ಮೂಲಕ ಸಂಗ್ರಹವಾಗುವ ಕರ ಸದ್ಬಳಕೆ ಯಾಗುತ್ತಿದೆಯೇ ಎಂಬುದನ್ನು ಪ್ರಶ್ನಿಸುವುದು ಕೂಡ ನಮ್ಮ ಹಕ್ಕಾಗಿದೆ. ಜಿಎಸ್‌ಟಿ ಹಣ ಜನರಿಗೆ ಸಹಾಯ ಆಗಬೇಕಿದೆ. ಪ್ರಶ್ನಿಸುವ ಹಕ್ಕನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಮೈಸೂರು ವಿವಿ ಗಾಂಧಿ ಭವನದ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ಮಾತನಾಡಿ, ಗಾಂಧಿಜೀ ದಿನಕ್ಕೆ 10 ಮೈಲಿಯಂತೆ 24 ದಿನಗಳ ಕಾಲ 240 ಮೈಲಿ ನಡೆದು ಸತ್ಯಾಗ್ರಹದ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು ಎಂದು ಹೇಳಿದರು.
ಗಾಂಧಿ ವಿಚಾರಗಳ ಚಿಂತಕ ವೇಮಗಲ್ ಸೋಮಶೇಖರ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ.ಕೃಷ್ಣ, ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ ಸ್ವಾಮಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ.ಅನಂತರಾಮ್, ಪೊ›.ಕೆ.ಸೌಮ್ಯ ಈರಪ್ಪ ಇತರರು ಇದ್ದರು.
ಜಾಗೃತಿ ಜಾಥಾ: ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನಡೆದ ಪ್ರಮುಖ ಸತ್ಯಾಗ್ರಹಗಳ ಕುರಿತು ಅರಿವು ಮೂಡಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.