ಬೆಂಗಳೂರು: ಭೂಮಿಯ ಫಲವತ್ತತೆಯನ್ನು ನಾಶಗೊಳಿಸುವ ಬಿಟಿ ಸಾಸಿವೆ ವಿರುದ್ಧ ಮತ್ತೂಂದು ಸುತ್ತಿನ ಹೋರಾಟಕ್ಕೆ ರೈತರು ಸಜ್ಜಾಗಬೇಕಿದೆ ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ತಿಳಿಸಿದರು. ಗ್ರೀನ್‌ಪಾಥ್ ಆಗ್ಯಾನಿಕ್ ಸ್ಟೇಟ್ ಶನಿವಾರ ಹಮ್ಮಿಕೊಂಡಿದ್ದ “ಕುಲಾಂತರಿ ಸಾಸಿವೆ ಬೇಕೆ? ಅದು ಆರೋಗ್ಯಕ್ಕೆ ಸುರಕ್ಷಿತವೇ? ಮುಂದೇನು?’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅಂತರರಾಷ್ಟ್ರೀಯ ಕಂಪೆನಿಗಳು ಭಾರತೀಯ ಕೃಷಿ ಕ್ಷೇತ್ರವನ್ನು ವಶಕ್ಕೆ ಪಡೆಯಲು ಹಂತ ಹಂತವಾಗಿ ಪ್ರಯತ್ನಿಸುತ್ತಿವೆ. ಕಳೆದ 17 ವರ್ಷಗಳ ಹಿಂದೆ ಬಿಟಿ ಹತ್ತಿ ಬೀಜ ರೈತರಿಗೆ ವಿತರಿಸಲಾಗಿತ್ತು. ಬಳಿಕ ಬಿಟಿ ಬದನೆ ಈಗ ಬಿಟಿ ಸಾಸಿವೆಯನ್ನು ಮಾರುಕಟ್ಟೆಗೆ ಬಿಡಲಾಗಿದೆ.
ಇದನ್ನು ನಮ್ಮ ರೈತರು ಬಿತ್ತಿದಲ್ಲಿ ಹಂತ-ಹಂತವಾಗಿ ಭೂಮಿಯ ಫಲವತ್ತತೆ ನಾಶವಾಗಲಿದ್ದು, ಅನಿವಾರ್ಯವಾಗಿ ರೈತರು ಉದ್ಯೋಗವನ್ನರಸಿ ನಗರಗಳತ್ತ ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣ ಆಗಲಿದೆ. ಆದ್ದರಿಂದ ಬಿಟಿ ಬದನೆ ವಿರುದ್ಧ ನಡೆಸಿದ ಹೋರಾಟದ ಮಾದರಿಯಲ್ಲಿ ಮತ್ತೂಂದು ಸುತ್ತಿನ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಉತ್ತರ ಭಾರತದಲ್ಲಿ ಸಾಸಿವೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಅಲ್ಲಿನ ರೈತರು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕ ದನಿಗೂಡಿಸಬೇಕು ಎಂದ ಅವರು, ರೈತರನ್ನು ಒಕ್ಕಲೆಬ್ಬಿಸಿ ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ಪಡೆಯಲು ಅಂತರರಾಷ್ಟ್ರೀಯ ಕಂಪೆನಿಗಳು ಹವಣಿಸುತ್ತಿವೆ. ರಾಜಕೀಯ ಪಕ್ಷಗಳು ಇದಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತಿವೆ ಎಂದು ಆರೋಪಿಸಿದರು.
ಆಹಾರ ತಜ್ಞ ಕೆ.ಸಿ. ರಘು ಮಾತನಾಡಿ, ಬಿಟಿ ಸಾಸಿವೆಯಿಂದ ರೈತರಿಗೆ ಯಾವುದೇ ರೀತಿಯ ಲಾಭವಿಲ್ಲ. ಭಾರತದಲ್ಲಿ ಸಾಸಿವೆ ಎಣ್ಣೆ ಬಳಸುವುದು ಅತ್ಯಂತ ಕಡಿಮೆ ಪ್ರಮಾಣ. ಈ ಸಂಬಂಧ ನಡೆದಿರುವ ಸಂಶೋಧನೆಯಲ್ಲಿ ಖಾಸಗಿ ಕೈವಾಡ ಕಾಣುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರಿಗೆ ಅನ್ಯಾಯವಾದಲ್ಲಿ ಆಹಾರ ಸೇವಿಸುವ ಎಲ್ಲರೂ ಹೋರಾಟ ಮಾಡಿದಲ್ಲಿ ಮಾತ್ರ ರೈತರ ಸಂಕಷ್ಟಗಳಿಗೆ ಪರಿಹಾರ ಸಿಗಲು ಸಾಧ್ಯ. ವಿದೇಶಿ ಕಂಪೆನಿಗಳು ಬ್ರಹ್ಮ ರಾಕ್ಷಸರಂತೆ ಭಾರತೀಯ ರೈತರ ಮೇಲೆ ದಾಳಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಟ ಕಿಶೋರ್, ರೈತರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ ಮತ್ತಿತರರು ಉಪಸ್ಥಿತರಿದ್ದರು.