Advertisement
ಶಿರಾ ಹೊಟೇಲ್ ಎಂದೇ ಹುಬ್ಬಳ್ಳಿಯಲ್ಲಿ ಖ್ಯಾತಿ ಪಡೆದಿರುವುದು ರೈಲು ನಿಲ್ದಾಣ ರಸ್ತೆಯ ಪೂರ್ಣಿಮಾ ಬ್ರಾಹ್ಮಣರ ರೆಸ್ಟೋರೆಂಟ್. ಮಂಗಳೂರು ತಾಲೂಕಿನ ಅಶ್ವತ್ಥಪುರದ ನಾರಾಯಣರಾವ ನೂಜಿ 54 ವರ್ಷಗಳ ಹಿಂದೆ ಆರಂಭಿಸಿದ ಈ ಹೋಟೆಲನ್ನು ಪ್ರಸ್ತುತ ಅವರ ಮಕ್ಕಳು ಮುನ್ನಡೆಸುತ್ತಿದ್ದಾರೆ.
Related Articles
Advertisement
ತಂದೆಯ ನಿಧನದ ನಂತರ ಮೂವರು ಪುತ್ರರು ಹೋಟೆಲ್ ನಿರ್ವಹಣೆ ಮಾಡುತ್ತಿದ್ದಾರೆ. ಹೋಟೆಲ್‌ನಲ್ಲಿ ಜನಸಂದಣಿ ಹೆಚ್ಚಾದರೆ ಯಾವುದೇ ಹಿಂಜರಿಕೆ ಇಲ್ಲದೆ ಮನೆಯ ಸದಸ್ಯರೆಲ್ಲ ಬಂದು ಕೆಲಸಮಾಡುತ್ತಾರೆ. ತಂದೆ ಆರಂಭಿಸಿದ, ತಮ್ಮ ಶ್ರೇಯಸ್ಸಿಗೆ ಕಾರಣವಾದ ಹೋಟೆಲ್ ಉಳಿಸಿಕೊಂಡು ಹೋಗಬೇಕೆಂಬುದು ಕುಟುಂಬದ ಸದಸ್ಯರ ಅಭಿಲಾಷೆ. ಈಗ ಹಿರಿಯ ಸೋದರ ಜಯಕೃಷ್ಣ ನೂಜಿ ಅವರ ನೇತೃತ್ವದಲ್ಲಿ ಹೋಟೆಲ್ ನಡೆಯುತ್ತಿದೆ.
ಇಲ್ಲಿ ಶಿರಾ ಅಲ್ಲದೇ ಮಿಕ್ಸಚರ್ ಖಾರಾ (ಅವಲಕ್ಕಿ ಚೂಡಾ ಮಿಶ್ರಣ), ಪೂರಿ-ಪಾತಾಳಭಾಜಿ ಕೂಡ ಫೇಮಸ್ಸು. ಹಿರಿಯ ರಾಜಕಾರಣಿ ಎಚ್.ಕೆ.ಪಾಟೀಲರು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಇದೇ ಹೊಟೇಲ್‌ಗೆ ಬರುತ್ತಿದ್ದರು. ಈಗಲೂ ಅವರು ಹುಬ್ಬಳ್ಳಿಗೆ ಬಂದಾಗ ಇಲ್ಲಿಗೆ ಬಂದು, ತಿಂದು ಹೋಗುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಹಲವು ಬಾರಿ ಇಲ್ಲಿನ ಭೋಜನ ಸವಿದಿದ್ದಾರೆ.
ಒಂದು ಕಾಲದಲ್ಲಿ ಪೂರ್ಣಿಮಾ ರೆಸ್ಟೋರೆಂಟ್‌ನಲ್ಲಿ ಪೇಡ ಕೂಡ ತಯಾರಾಗುತ್ತಿತ್ತು. ಆದರೆ ಗುಣಮಟ್ಟದ ಹಾಲಿನ ಕೊರತೆಯಿಂದಾಗಿ ನಿಲ್ಲಿಸಲಾಯಿತು. ಮಂದ ಮಸಾಲೆಯ ಸಾಂಬಾರ್‌ಗಾಗಿಯೇ ಇಲ್ಲಿ ಊಟಕ್ಕೆ ಬರುವವರಿದ್ದಾರೆ. ರೊಟ್ಟಿ-ಚಪಾತಿ ಊಟ ಕೂಡ ಲಭ್ಯ. ಬೇಸಿಗೆಯಲ್ಲಿ ಪುದಿನಾ ಮಜ್ಜಿಗೆ ಮಾಡಲಾಗುತ್ತದೆ.
ರೈಲ್ವೆ ನಿಲ್ದಾಣದ ಸಮೀಪ ಇರುವುದರಿಂದ ಪ್ರಯಾಣಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ರೈಲ್ವೆ ಸಿಬ್ಬಂದಿ, ಮಹಾನಗರ ಪಾಲಿಕೆ ಅಧಿಕಾರಿಗಳು, ಎಲ್‌ಐಸಿ ಸಿಬ್ಬಂದಿ, ಸಮೀಪದ ಕಚೇರಿಗಳ ನೌಕರರು ಇಲ್ಲಿನ ಖಾಯಂ ಗ್ರಾಹಕರು. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಗ್ರಾಹಕರಿಗೆ ಉತ್ತಮ ಖಾದ್ಯಗಳನ್ನು ನೀಡಬೇಕೆಂಬುದು ನೂಜಿ ಸೋದರರ ಉದ್ದೇಶ. ಪ್ರತಿ ಪ್ಲೇಟ್ ಶಿರಾಕ್ಕೆ 20 ರೂ. ನಿಗದಿಪಡಿಸಿದ್ದರೆ, ರೊಟ್ಟಿ ಊಟಕ್ಕೆ 75 ರೂ. ಇದೆ.
* ವಿಶ್ವನಾಥ ಕೋಟಿ