Advertisement

ಉಳಿಸಿಕೊಳ್ಳಬೇಕಿದೆ ತೆಂಕನಿಡಿಯೂರು ಗ್ರಾಮದ ಪೊಟ್ಟುಕೆರೆ

08:23 PM Jun 10, 2019 | Team Udayavani |

ಮಲ್ಪೆ: ಒಂದು ಕಾಲದಲ್ಲಿ ಗ್ರಾಮ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ತೆಂಕನಿಡಿಯೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಳಾರ್ಕಳಬೆಟ್ಟು ಸಮೀಪದ ಪೊಟ್ಟುಕೆರೆ ನಿರ್ವಹಣೆ ಇಲ್ಲದೆ ಹೂಳು ತುಂಬಿಕೊಂಡು ಬರಡಾಗಿದ್ದು, ಕೃಷಿ ಭೂಮಿಗೆ ನೀರು ಇಲ್ಲದಂತಾಗಿದೆ. ಇದರ ಒಂದು ಭಾಗ ಗ್ರಾ.ಪಂ.ಗೆ ಸೇರಿದರೆ ಇನ್ನೊಂದು ಭಾಗ ನಗರಸಭೆಗೆ ಸೇರಿದೆ.

Advertisement

ಅಕ್ಷರಶಃ ಪೊಟ್ಟುಕೆರೆ
ಗ್ರಾಮದ ಸುತ್ತಮುತ್ತ ಹಲವಾರು ಕೆರೆಗಳಿದ್ದರೂ ಪೊಟ್ಟುಕೆರೆ ಐತಿಹಾಸಿಕ ಹಿನ್ನೆಲೆಯೊಂದಿಗೆ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹೂಳಿನಿಂದಾಗಿ ಒರತೆಯಿಲ್ಲದೆ 30 ವರ್ಷಗಳಿಂದ ಇದು ಹೆಸರಿಗೆ ತಕ್ಕಂತೆ ಪೊಟ್ಟುಕೆರೆಯಾಗಿಯೇ ಉಳಿದಿದೆ. ಕೃಷಿಕರ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಈ ಕೆರೆಯನ್ನು ಉಳಿಸಿಕೊಳ್ಳುವ ಗೋಜಿಗೂ ಯಾರೂ ಮುಂದಾಗಿಲ್ಲ ಎನ್ನಲಾಗುತ್ತಿದೆ.

ಒತ್ತುವರಿ
ನಗರಸಭಾ ವ್ಯಾಪ್ತಿಯ ಗೋಪಾಲಪುರ ವಾರ್ಡ್‌ ಮತ್ತು ತೆಂಕನಿಡಿಯೂರು ಕೆಳಾರ್ಕಳಬೆಟ್ಟು ಗ್ರಾಮವನ್ನು ಸಂಧಿಸುವಲ್ಲಿ ಇರುವ ಈ ಕೆರೆ ಹಿಂದೆ 8 ಎಕ್ರೆಯಷ್ಟು ವಿಸ್ತೀರ್ಣ ಹೊಂದಿತ್ತು. ಇದೀಗ ಒತ್ತುವರಿಯಾಗಿ 3 ಎಕ್ರೆ (ತೆಂಕನಿಡಿಯೂರು ಗ್ರಾಮದ ಭಾಗದಲ್ಲಿ ಒಂದು ಎಕ್ರೆ, ಗೋಪಾಲಪುರ ವಾರ್ಡ್‌ 2 ಎಕ್ರೆ)ಯಷ್ಟು ಮಾತ್ರ ಉಳಿದಿದೆ.

ಪಾಳುಬಿದ್ದ ಕೃಷಿಭೂಮಿಗಳು
ಹಿಂದೆ ಮೇ ಕೊನೆಯವರೆಗೂ ಈ ಕೆರೆಯಲ್ಲಿ ನೀರು ತುಂಬಿಕೊಂಡಿದ್ದು 200 ಎಕ್ರೆ ಕೃಷಿ ಭೂಮಿಗೆ ಇದೇ ಕೆರೆಯ ನೀರನ್ನು ಉಪಯೋಗಿಸಿ ರೈತರು ಹಿಂಗಾರು ಬೆಳೆ ಬೆಳೆಯುತ್ತಿದ್ದರು. ಇಂದು ನೀರಿನ ಕೊರತೆಯಿಂದ ಕೃಷಿ ಭೂಮಿಯೂ ಪಾಳುಬಿದ್ದಿದೆ. ಕೆಲವು ವರ್ಷದ ಹಿಂದೆ ಪಂಚಾಯತ್‌ ವತಿಯಿಂದ ಬಾವಿಯನ್ನು ನಿರ್ಮಿಸಲಾಗಿದ್ದು ಈ ಬಾವಿಯ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದೆ.

ಕೆರೆ ಕೆರೆಯಾಗಿಯೇ ಉಳಿಯಲಿ
ಕೆರೆ ಅಭಿವೃದ್ಧಿ ಪಡಿಸಿದರೆ ಸಂಜೆ ಕಳೆಯಲು ಈ ಭಾಗದ ಜನರಿಗೆ ಉತ್ತಮ ಜಾಗ. ಈ ಕೆರೆಯಲ್ಲಿ ನೀರು ನಿಲ್ಲಿಸುವ ಕೆಲಸ ಮಾಡಿದರೆ ಸಮೀಪದ ನೂರಾರು ಬಾವಿಗಳಲ್ಲಿ ಸದಾ ನೀರು ತುಂಬುತ್ತದೆ. ಈ ಕೆರೆ ಕೆರೆಯಾಗಿಯೇ ಉಳಿಯಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ.

Advertisement

ಪ್ರಾಮಾಣಿಕ ಪ್ರಯತ್ನ ಅಗತ್ಯ
ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಎದುರಾಗಿದ್ದರೂ ಇಲ್ಲಿರುವ ಪೊಟ್ಟುಕೆರೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಯಾರೂ ಮುಂದಾಗಿಲ್ಲ. ಕೆರೆ ಅಭಿವೃದ್ಧಿ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಇಲಾಖೆಗೆ ಮನವಿ ಮಾಡಲಾಗುತ್ತಿದೆಯಾದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆರೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
-ಕೃಷ್ಣ ಶೆಟ್ಟಿ ಅಧ್ಯಕ್ಷರು, ತೆಂಕನಿಡಿಯೂರು ಗ್ರಾ. ಪಂ.

ಯೋಜನೆ ಇದೆ
ಕೆರೆಯ ಹೂಳೆತ್ತಿ ಅಂತರ್ಜಲ ವೃದ್ಧಿಸುವುದು ಮತ್ತು ಸುತ್ತ ದಂಡೆ ನಿರ್ಮಿಸಿ ವಾಕಿಂಗ್‌ ಟ್ರಾÂಕ್‌ ಮಾಡಿದ ಅಭಿವೃದ್ಧಿ ಪಡಿಸುವ ಯೋಜನೆ ಇದೆ. ಉಡುಪಿ ಶಾಸಕ ರಘುಪತಿ ಭಟ್‌, ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಮಾಡಿದ್ದು ಭರವಸೆಯನ್ನು ನೀಡಿದ್ದಾರೆ.
-ಉಮೇಶ್‌ ಶೆಟ್ಟಿ,ಗೋಪಾಲಪುರ

-ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next