Advertisement

‘ಬೂಡು’ಚರಂಡಿಗೆ ಸ್ಲ್ಯಾಬ್  ‘ಬೋಡು’..!

11:09 AM Mar 28, 2018 | Team Udayavani |

ಸುಳ್ಯ: ನಗರದ ರಥಬೀದಿಯಲ್ಲಿರುವ ಚೆನ್ನಕೇಶವ ದೇಗುಲದ ಮಗ್ಗುಲಿನಿಂದ ಬೂಡುವಿಗೆ ಸಂಪರ್ಕ ಕಲ್ಪಿಸಿರುವ ರಸ್ತೆ ಬದಿಯ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿದು ಜನರು ಮೂಗು ಮುಚ್ಚಿ ಕೊಂಡೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ನಗರದ ಒಳಗೆಯೇ ಇರುವ ರಸ್ತೆಯೊಂದರ ದುಸ್ಥಿತಿಗೆ ಸ್ಪಂದಿಸುವಂತೆ ಸ್ಥಳೀಯ ನಿವಾಸಿಗಳು ನ. ಪಂ.ಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ, ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ದುರ್ನಾತದಿಂದ ಇಲ್ಲಿನವರಿಗೆ ಮುಕ್ತಿ ಸಿಕ್ಕಿಲ್ಲ. ಇಲ್ಲಿ ನಗರ ಪಂಚಾಯತ್‌ನ ನಿರ್ಲಕ್ಷ್ಯ  ಬಟಾಬಯಲಾಗಿದೆ.

ಬೂಡು ಪರಿಸರದಲ್ಲಿ 250ಕ್ಕೂ ಅಧಿಕ ಮನೆಗಳಿವೆ. 80ಕ್ಕೂ ಅಧಿಕ ಮನೆಗಳು ಇರುವ ಪರಿಶಿಷ್ಟ ಜಾತಿ ಕಾಲನಿ ಇದೆ. ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ ಇದೆ. ಅಲ್ಲಿ 75ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ದಾರೆ. ದಿನಂಪ್ರತಿ ನೂರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. 300 ಮೀಟರ್‌ ದೂರದ ತನಕ ಮೂಗು ಮುಚ್ಚಿ ಪ್ರಯಾ ಣಿಸಬೇಕು. ಇಲ್ಲದಿದ್ದರೆ ದುರ್ನಾತ ಸಹಿಸಲು ಸಾಧ್ಯವೇ ಇಲ್ಲ. ಚರಂಡಿ ಪಕ್ಕದಲ್ಲೇ ಹಲವು ಮನೆಗಳು ಇದ್ದು, ಮನೆ ಮಂದಿಯ ಪಾಡಂತೂ ಹೇಳ ತೀರದು ಅನ್ನುತ್ತಾರೆ ಬೂಡು ರಾಧಾಕೃಷ್ಣ ರೈ.

ದಿನನಿತ್ಯ ಈ ರಸ್ತೆಯಲ್ಲೇ ಸಾಗಬೇಕು. ದುರ್ನಾತದಿಂದ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ಅನ್ನುತ್ತಾರೆ ಹಾಸ್ಟೆಲ್‌ನ ಹರ್ಷಿತಾ, ವಿದ್ಯಾರ್ಥಿನಿಯರಾದ ಶ್ರೀಜಾ ಮತ್ತು ತೇಜಸ್ವಿ.

ಪಯಸ್ವಿನಿಗೆ ಸೇರುವ ತ್ಯಾಜ್ಯ
ಚರಂಡಿಯಲ್ಲಿ ದಿನಂಪ್ರತಿ ಹರಿದು ಬರುವ ತ್ಯಾಜ್ಯ ಬೂಡು ಬಳಿಯಲ್ಲಿ ಹಾದು ಹೋಗುವ, ಮುಖ್ಯ ರಸ್ತೆಯಿಂದ 300 ಮೀಟರ್‌ ದೂರದಲ್ಲಿರುವ ಪಯಸ್ವಿನಿ ನದಿಗೆ ಸೇರುತ್ತಿದೆ. ಬೇಸಗೆ ಕಾಲದಲ್ಲಿ ನಿಂತ ನೀರಿಗೆ ಸಂಸ್ಕರಿಸದ ತ್ಯಾಜ್ಯ ಸೇರುವುದರಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.

Advertisement

ಏನು ಸಮಸ್ಯೆ?
ರಥಬೀದಿಯ ಚರಂಡಿ ಬಳಿಯಿಂದ ಹರಿದು ಬರುವ ತ್ಯಾಜ್ಯ ಬೂಡು ರಸ್ತೆಯಲ್ಲಿ ಹರಿದು ಹಾಸ್ಟೆಲ್‌ ಬಳಿಯಿಂದ ಸಾಗಿ ಕಾಲನಿಯತ್ತ ಹರಿಯುತ್ತದೆ. ಹಾಸ್ಟೆಲ್‌ ತನಕ ನಿರ್ಮಿಸಿದ ಚರಂಡಿಗೆ ಸ್ಲ್ಯಾಬ್  ಹಾಕದೇ ಇರುವುದು ಮತ್ತು ಹಾಸ್ಟೆಲ್‌ನಿಂದ ಕಾಲನಿ ತನಕ ಚರಂಡಿ ನಿರ್ಮಿಸದೇ ಇರುವುದು ದುರ್ವಾಸನೆಗೆ ಮುಖ್ಯ ಕಾರಣ. ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ, ಭರವಸೆ ಮಾತ್ರ ಸಿಕ್ಕಿದೆ. ಕನಿಷ್ಠ ಸ್ಲ್ಯಾಬ್ ಅಳವಡಿಸಲು ಮುಂದಾಗಿಲ್ಲ ಅನ್ನುತ್ತಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next