Advertisement

ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಿ; ಸಾಹಿತಿ ಎ.ಕೆ.ಆದವಾನಿಮಠ

06:17 PM Mar 30, 2022 | Team Udayavani |

ಬಂಕಾಪುರ: ಸರ್ಕಾರದಿಂದ ನೇಮಕಗೊಂಡಿದ್ದ ಅಧಿಕಾರಿ ಸೂರ್ಯನಾಥ ಕಾಮತ್‌ ವರದಿ ಆಧಾರದ ಮೇಲೆ ಸಂವಿಧಾನಬದ್ಧವಾಗಿ ಬೇಡ ಜಂಗಮರಿಗೆ ಸಿಗಬೇಕಾದ ಎಸ್‌ಸಿ ಪ್ರಮಾಣ ಪತ್ರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಹಿರಿಯ ಸಾಹಿತಿ ಎ.ಕೆ. ಆದವಾನಿಮಠ ಅವರು ಸರ್ಕಾರವನ್ನು ಒತ್ತಾಯಿಸಿದರು.

Advertisement

ಪಟ್ಟಣದ ಅರಳೆಲೆಮಠದ ಆವರಣದಲ್ಲಿ ನಡೆದ ಬೇಡ ಜಂಗಮರ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಜಂಗಮರು ಸರ್ವ ಸಮಾಜದವರ ಏಳ್ಗೆಗಾಗಿ ಅನಾದಿ ಕಾಲದಿಂದಲೂ ಶ್ರಮಿಸುತ್ತಿದ್ದಾರೆ. ಎಲ್ಲ ಸಮಾಜಗಳ ಶುಭ, ಅಶುಭ ಕಾರ್ಯಗಳಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಂದಿದ್ದಾರೆ. ಆದರೆ, ಜಂಗಮರ ಕುಟುಂಬ ಈಗ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ.ಹಾಗಾಗಿ, ಅವರಿಗೆ ಲಭಿಸಬೇಕಾದ ನ್ಯಾಯಯುತ ಹಕ್ಕನ್ನು ನೀಡಬೇಕು. ಇಲ್ಲದೇ ಹೋದರೆ, ಹೋರಾಟದ ಹಾದಿ ಹಿಡಿಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಾ|ಆರ್‌.ಎಸ್‌.ಅರಳೆಲೆಮಠ ಮಾತನಾಡಿ, ಬೇಡ ಜಂಗಮರ ಸಭೆ ಕೇವಲ ಪ್ರಮಾಣ ಪತ್ರ ಪಡೆಯುವುದಕ್ಕೆ ಸೀಮಿತವಾಗಿರದೇ ಜಂಗಮ ಕುಟುಂಬಗಳ ಸಮಸ್ಯೆ, ಪರಿಹಾರ, ಮಕ್ಕಳ ಶೈಕ್ಷಣಿಕ ಚಿಂತನೆ ಸೇರಿದಂತೆ ಸಮುದಾಯದ ಏಳ್ಗೆಗಾಗಿ ಸಂಘಟನಾತ್ಮಕ ಸಭೆ ನಡೆಸಲಾಗುತ್ತಿದೆ ಎಂದರು.

ಜಂಗಮರು ಬ್ರಿಟಿಷರ ಕಾಲದಿಂದಲೂ ಬೇಡಿ ತಿನ್ನುವ ಕಾಯಕದಿಂದ ಬಂದವರಾಗಿದ್ದಾರೆ. ನಿಜಾಮರ ಕಾಲದಲ್ಲಿಯೇ ಬೇಡ ಜಂಗಮರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಹೀಗಿದ್ದರೂ, ಜಾತಿ ಪ್ರಮಾಣ ಪತ್ರ ಪಡೆಯಲು ಬೇಡ ಜಂಗಮರು ಪರದಾಡುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರೊ|ಎಲ್‌.ಎ.ಹಿರೇಮಠ ಮಾತನಾಡಿ, ಸೂರ್ಯನಾಥ ಕಾಮತ್‌ ಅವರ ವರದಿಯಲ್ಲಿ ಬೇಡ ಜಂಗಮರ ಆಚಾರ, ವಿಚಾರ, ಕಾಯಕದ ಬಗ್ಗೆ ಹೇಳಲಾಗಿದೆ. ಸರ್ಕಾರ ಹೊರಡಿಸಿರುವ ಮಿಸಲಾತಿ ಪಟ್ಟಿಯಲ್ಲೂ ಬೇಡ ಜಂಗಮರ ಜಾತಿಯನ್ನು ಸೇರಿಸಲಾಗಿದೆ. ಸರ್ಕಾರದ ಆದೇಶವೂ ಇದೆ. ಇಷ್ಟೆಲ್ಲ ಇದ್ದರೂ, ಬೇಡ ಜಂಗಮರಿಗೆ ಅಧಿ ಕಾರಿಗಳು ಎಸ್‌ಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿರುವುದು ನ್ಯಾಯಾಲಯ ಹಾಗೂ ಸಂವಿಧಾನ ಶಿಲ್ಪಿ  ಡಾ|ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಮಾಡುವ ಅವಮಾನವಾಗಿದೆ ಎಂದರು.

Advertisement

ಇತ್ತೀಚೆಗೆ ವಿಧಾನಸಭೆಯಲ್ಲಿ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಪುತ್ರಿ ಎಸ್‌ಸಿ ಪ್ರಮಾಣ ಪತ್ರ ಪಡೆದಿರುವುದನ್ನು ವಾಪಸ್‌ ಮಾಡುವುದಾಗಿ ಹೇಳಿಕೆ ನೀಡಿರುವುದನ್ನು ಹಾಗೂ ಪಿ.ರಾಜೀವ್‌ ಅವರ ಹೇಳಿಕೆಯನ್ನು ಸಭೆಯಲ್ಲಿ ಬೇಡ ಜಂಗಮ ಸಮಾಜ ಒಕ್ಕೊರೊಲಿನಿಂದ ಖಂಡಿಸಿತು. ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಎಫ್‌.ಎಸ್‌.ಹಿರೇಮಠ, ಸೋಮಶೇಖರ ಗೌರಿಮಠ, ಚಪ್ಪನಮಠ, ಎಸ್‌.ಬಿ.ಆದವಾನಿಮಠ ಉಳವಯ್ಯ ಹಿರೇಮಠ, ಚನವೀರಯ್ಯ ಹಿರೇಮಠ, ಗದಿಗಯ್ಯ ಹುಣಸಿಕಟ್ಟಿಮಠ, ಬಾಪುಗೌಡ್ರ ಪಾಟೀಲ, ಶೇಖಯ್ಯ ಕಟಗಿಮಠ, ವೀರಯ್ಯ ಹಿರೇಮಠ, ಗದಿಗಯ್ಯ ಮಹಾಂತಿನಮಠ, ಚಂದ್ರಶೇಖರ ಛಬ್ಬಿಮಠ, ಮಣಿಕಂಠ ಕಟಗಿಮಠ  ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next