Advertisement
ಐಎಎಸ್ ಮೊದಲಾದ ಅಧಿಕಾರಿಗಳನ್ನು ರಾಜಕೀಯ ನಾಯಕರೇ ಬಲಹೀನ ಮಾಡಿದ್ದಾರೆ. ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಅಧಿಕಾರಿಗಳನ್ನು ದೂರುವುದು ಸರಿಯಲ್ಲ. 10 ಮಂದಿ ಜಂಟಿ ಕಾರ್ಯದರ್ಶಿಯನ್ನು ನೇಮಕ ಮಾಡಿ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಉದ್ದೇಶ ಉತ್ಕೃಷ್ಟವಾಗಿರಬಹುದು. ಆದರೆ, ಅಧಿಕಾರಿಗಳಿಗೆ ಒಂದೇ ಇಲಾಖೆಯಲ್ಲಿ ಕನಿಷ್ಠ ಮೂರ್‍ನಾಲ್ಕು ವರ್ಷ ಅಧಿಕಾರ ನೀಡಿ, ಪದೇಪದೇ ವರ್ಗಾವಣೆ ಮಾಡುವುದನ್ನು ನಿಲ್ಲಿಸಿ. ತರಬೇತಿ ಪಡೆದ ಕ್ಷೇತ್ರ ಅಥವಾ ವಿಷಯದಲ್ಲಿ ಹುದ್ದೆ ನೀಡದೇ ತರಬೇತಿಗೆ ಅರ್ಥ ಇಲ್ಲದಂತೆ ಮಾಡುತ್ತಾರೆ. ನಿವೃತ್ತ ಅಥವಾ ಹಿರಿಯ ಅಧಿಕಾರಿಗಳ ಸದ್ಬಳಕೆ ಆಗುತ್ತಿಲ್ಲ ಮತ್ತು ಗುರುತಿಸುವಿಕೆಯೂ ಸರಿಯಾಗುತ್ತಿಲ್ಲ. ಇದೊಂದು ಇಂಡಿಯನ್ ಆಶೀರ್ವಾದ್ ಸರ್ವಿಸ್ ಅಥವಾ ಇಂಡಿಯನ್ ಅಡೆjಸ್ಟ್‌ಮೆಂಟ್ ಸರ್ವಿಸ್ ಆಗಬಾರದು. ನೇರ ನೇಮಕಾತಿಯಲ್ಲೂ ಮೀಸಲಾತಿ ಕೇಳಿದರೆ ಏನು ಮಾಡುವುದು?
ಇದು ಪಕ್ಷಾತೀತವಾಗಿ ವಿಮರ್ಶಿಸಬೇಕಾದ ವಿಷಯ. ರಾಜಕೀಯ ಅಥವಾ ಅಧಿಕಾರಿಗಳ ಬಡ್ತಿ ಕುಂಠಿತವಾಗುತ್ತದೆ ಎಂದು ವಿರೋಧಿಸುವುದು ಸರಿಯಲ್ಲ. ಈ ನೇಮಕಾತಿಯಿಂದ ದೇಶ ಹಾಗೂ ಆಡಳಿತ ವ್ಯವಸ್ಥೆಗೆ ಒಳಿತಿದೆಯೇ ಎಂಬುದನ್ನು ಗಮನಿಸಬೇಕು. ದೇಶದ ಅಭಿವೃದ್ಧಿ, ಪ್ರಗತಿ, ಸಾಮಾಜಿಕ, ಆರ್ಥಿಕ ಕ್ಷೇತ್ರಕ್ಕೆ ಬೇಕಾದ ನಾಯಕತ್ವ ಹಾಗೂ ಬದಲಾವಣೆ ತರಲು ಸಾಧ್ಯವೇ ಎಂಬ ದೃಷ್ಟಿಯಿಂದ ವಿಮರ್ಶೆ ಮಾಡಬೇಕು. ನಾಗರಿಕ ಸೇವಾ ವಿಭಾಗದಲ್ಲಿ (ಸಿವಿಲ್ ಸರ್ವಿಸ್) ಐಎಎಸ್ ಮಾತ್ರವಲ್ಲ, ಅಖೀಲ ಭಾರತೀಯ ಸೇವೆ, ಕೇಂದ್ರಸೇವೆ, ರಾಜ್ಯ ಸೇವೆ ಹೀಗೆ ಮೂರು ವಿಭಾಗ ಇದ್ದು, ಇದು ಬ್ರಿಟಿಷ್ ಆಳ್ವಿಕೆಯಿಂದ ಸೃಷ್ಟಿಯಾದ ವ್ಯವಸ್ಥೆ. ಬ್ರಿಟಿಷ್ ಇಂಪಿರಿಯಲ್ ಸಿವಿಲ್ ಸರ್ವಿಸ್ ಎಂದು ಕರೆಯುತ್ತಿದ್ದ ವ್ಯವಸ್ಥೆ ಈಗ ನಾಗರಿಕ ಸೇವೆಯಾಗಿ ಬದಲಾಗಿದೆ.
Related Articles
Advertisement
ಸಂವಿಧಾನ ಸಭೆಯಲ್ಲೂ ಇದರ ಚರ್ಚೆಯಾಗಿತ್ತು. ನಾಗರಿಕ ಸೇವೆ ರಚನೆಯ ನಿರ್ಧಾರವನ್ನು ಏಕಾಏಕಿ ತೆಗೆದುಕೊಂಡಿದ್ದಲ್ಲ. ಸ್ವಾತಂತ್ರ್ಯ ಬಂದಾಗಲೇ ಇದನ್ನು ತರಾತುರಿಯಲ್ಲಿ ರಚನೆ ಮಾಡಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. 10 ಜಂಟಿ ಕಾರ್ಯದರ್ಶಿ ಹುದ್ದೆಗೆ ಲ್ಯಾಟರಲ್ ಎಂಟ್ರಿ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹುದ್ದೆ ಹತ್ತಾದರೂ, ಅದರಿಂದಾಗುವ ಅನು ಕೂಲ, ಅನಾನುಕೂಲದ ಜತೆಗೆ ದೀರ್ಘಾವಧಿಯ ಪರಿಣಾಮದ ಬಗ್ಗೆಯೂ ಯೋಚಿಸುವ ಅಗತ್ಯವಿದೆ.
ಲ್ಯಾಟರಲ್ ಎಂಟ್ರಿ ಮೂಲಕ ಅಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದಾಗಲೇ ಆರಂಭವಾಗಿತ್ತು. ಕಮಿಟೆಡ್ ಬ್ಯೂರೊ àಕ್ರಸಿ ಎಂಬ ಸಂದೇಶದ ಮೂಲಕ ನೇರವಾಗಿ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ನಡೆದಿತ್ತು. ಈ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿಲ್ಲ, ನಿರ್ದಿಷ್ಟ ಮಾನದಂಡ ಇರಲಿಲ್ಲ ಎಂದು ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರು ಕಟುವಾಗಿ ಟೀಕಿಸಿದ್ದರು. ರಾಜೀವ್ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗ ತಾಂತ್ರಿಕ್ ಮಿಷನ್(ಟೆಕ್ನಾಲಜಿ ಮಿಷನ್) ಆರಂಭಿಸಿ, ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ತಜ್ಞರನ್ನು ಗುರುತಿಸಿ ಹುದ್ದೆ ನೀಡಿದ್ದರು. ಸ್ಯಾಮ್ ಪಿತ್ರೋಡ್, ನಂದನ್ ನಿಲೇಕಣಿ, ರಘುರಾಮ್ ರಾಜನ್, ಜೆ.ಪಿ.ನಾಯಕ್, ಹುಮಾಯಿನ್ ಕಬೀರ್ ಮೊದಲಾದವರು ಇಂತಹ ವ್ಯವಸ್ಥೆ ಯಲ್ಲೇ ಆಯ್ಕೆಯಾಗಿದ್ದರು.
ಜಂಟಿ ಕಾರ್ಯದರ್ಶಿ ಹುದ್ದೆಗೆ ತಜ್ಞರು ಎಂದರೆ, ಖಾಸಗಿಯವರು ಮಾತ್ರವಲ್ಲ, ಸರ್ಕಾರಿ ಅಧಿಕಾರಿಗಳಿಗೂ ಅವಕಾಶ ಇದೆ. ಆದರೆ, ಆಡಳಿತ ವ್ಯವಸ್ಥೆ ನಿಷ್ಕ್ರಿಯವಾಗಲು ಕಾರಣ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಿವಿಲ್ ಸರ್ವಿಸ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕಾರಣ, ನಮ್ಮಲ್ಲಿ ಬ್ರಹ್ಮದೇವ ಶರ್ಮಾ, ಶಂಕರನ್, ಎಂ.ಎನ್.ಬುಸ್, ಅನಿಲ್ ಬೊಡಿಯಾ, ಕರ್ನಾಟಕದಲ್ಲಿ ಚಿರಂಜೀವಿಸಿಂಗ್ ಮೊದಲಾದ ದಕ್ಷ ಅಧಿಕಾರಿಗಳು ಇದ್ದರು.
ಸಂವಿಧಾನದ ನಾಲ್ಕು ಅಂಗಗಳಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಮಾಧ್ಯಮ ರಂಗ 30 ವರ್ಷದಲ್ಲಿ ಸಾಕಷ್ಟು ಬದಲಾಗಿದೆ. ಶಾಶ್ವತ ಕಾರ್ಯಾಂಗ(ಅಧಿಕಾರಿ ವರ್ಗ) ಮಾಡುವ ಕೆಲಸವನ್ನು ರಾಜಕೀಯ ರಂಗ ಮಾಡುತ್ತಿದೆ. ಶಾಶ್ವತ ಕಾರ್ಯಾಂಗಕ್ಕೆ ರಾಜಕೀಯ ನಾಯಕರು ಕೈ ಹಾಕಿದ್ದಾರೆ. ಕಾರ್ಯಾಂಗಕ್ಕೆ ಸೀಮಿತವಾಗಿದ್ದ ಅಧಿಕಾರಿಗಳ ವರ್ಗಾವಣೆ, ಸರ್ಕಾರದ ಯೋಜನೆಗೆ ಫಲಾನುಭವಿಗಳನ್ನು ಗುರುತಿಸುವುದು ಸೇರಿ ಇತ್ಯಾದಿ ಎಲ್ಲವೂ ರಾಜಕೀಯ ಪ್ರೇರಿತವಾಗಿದೆ.
ಕಾರ್ಯಾಂಗ ಮಾಡಬೇಕಾದ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿರುವುದಿಂದಲೇ ಸಿವಿಲ್ ಸರ್ವಿಸ್ ಪ್ರಾಬಲ್ಯ ತಗ್ಗಿದೆ. ಅಧಿಕಾರಿಗಳಿಗೆ ಆರೋಗ್ಯ ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದಿರುತ್ತದೆ. ಆದರೆ, ಅಧಿಕಾರಿಗೆ ಬೇರೆ ಯಾವುದೋ ಇಲಾಖೆ ನೀಡುತ್ತಾರೆ. ಲಾಜಿಕ್ ಇಲ್ಲದೇ ನೇಮಕ ಮಾಡುತ್ತಾರೆ. ಶಿಕ್ಷಣ ತಜ್ಞರಾಗಿರುವ ಅಧಿಕಾರಿಗೆ ಶಿಕ್ಷಣ ಇಲಾಖೆಯ ಹುದ್ದೆ ನೀಡುವುದಿಲ್ಲ. ನಿರ್ದಿಷ್ಟ ವಿಷಯದ ಮೇಲೆ ಜ್ಞಾನಹೊಂದಿರುವವರಿಗೆ ಅವಕಾಶ ಇರುವುದಿಲ್ಲ. ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಮಕ್ಕಳ ಕಲ್ಯಾಣ, ವಸತಿ ತಜ್ಞ ಅಧಿಕಾರಿಗಳಿಗೆ ಬೇರೆ ಬೇರೆ ಇಲಾಖೆ ನೀಡುತ್ತಾರೆ.
1990ರ ನಂತರ ಸಿವಿಲ್ ಸರ್ವಿಸ್ ನೇಮಕಾತಿ ಶೇ.60-ಶೇ.70ರಷ್ಟು ಇಳಿದಿದೆ. ನಿವೃತ್ತ ಅಧಿಕಾರಿಗಳ ಮಾಹಿತಿ ಮತ್ತು ಬಡ್ತಿ ಆಧಾರದಲ್ಲಿ ಮಾನವ ಸಂಪನ್ಮೂಲದ ಸದ್ಬಳಕೆಗೆ ಬೇಕಾದ ದೀರ್ಘಕಾಲದ ನೀತಿ ರೂಪಿಸಿಲ್ಲ. ಐಎಎಸ್, ಐಪಿಎಸ್, ಕಂದಾಯ ಸೇವೆ, ವಿದೇಶಿ ಸೇವೆ ಸೇರಿ 28 ಸೇವಾ ವಿಭಾಗದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದೆ. ದೀರ್ಘ ಕಾಲದ ಪಾಲಿಸಿ ಇಲ್ಲದೇ ಇರುವುದರಿಂದ ಹೀಗಾಗಿದೆ. ಒಬ್ಬ ದಕ್ಷ ಅಧಿಕಾರಿಯಿಂದ ಸಾಕಷ್ಟು ಬದಲಾವಣೆಗಳು ಆಗಿರುವ ಉದಾಹರಣೆ ಇದೆ. ಕೇಸ್ ಸ್ಟಡೀಸ್ ಆಧಾರದಲ್ಲಿ ರಚಿಸಿರುವ “Reinventing public service delivery in india’ ಎಂಬ ಪುಸ್ತಕದಲ್ಲಿ ಶಿಕ್ಷಣ, ಮೂಲ ಸೌಕರ್ಯ, ಆರೋಗ್ಯ ವಿಭಾಗದಲ್ಲಿ ಅಧಿಕಾರಿಗಳು ಮಾಡಿರುವ 75ಕ್ಕೂ ಅಧಿಕ ಉತ್ಕೃಷ್ಟ ಉದಾಹರಣೆ ಇದೆ. ನಾಗರಿಕ ಸೇವೆಯ ಬಲವರ್ಧನೆಯ ಬಗ್ಗೆ ಪದ್ಮಭೂಷಣ ಜಗಮೋಹನ್ ಅವರ “Soul and structure of governance in india’ ಕೃತಿ ಹಾಗೂ ಟಿ.ಎಸ್.ಆರ್ ಸುಬ್ರಹ್ಮಣ್ಯನ್ ಅವರ “Government in India – An Inside View’ ಪುಸ್ತಕದಲ್ಲಿ ಸಾಕಷ್ಟು ವಿವರಣೆ ನೀಡಿದ್ದಾರೆ.
ಕಾನೂನು, ಪೊಲೀಸ್, ಶಿಕ್ಷಣ, ಆರೋಗ್ಯ ಮೊದಲಾದ ಇಲಾಖೆಯಲ್ಲಿ ಸಲಹೆಗಾರರ ನೇಮಕ ಎಂಬ ಹೊಸ ಪ್ರವೃತ್ತಿ ಆರಂಭವಾಗಿದೆ. ಇದರಿಂದ ಅಧಿಕಾರಿ ವರ್ಗದ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಸಲಹೆಗಾರರು ಯಾವತ್ತೂ ರಾಜಕೀಯ ನಾಯಕರಿಗೆ ಹತ್ತಿರವಾಗಿರುತ್ತಾರೆ.
ಕೇಂದ್ರ ಸರ್ಕಾರ ಲ್ಯಾಟರಲ್ ಎಂಟ್ರಿ ಮೂಲಕ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಒಂದು ಸಮಿತಿಯ ಮೂಲಕ ನೇರ ನೇಮಕಾತಿ ಮಾಡುವ ಬದಲು, ಇದರ ಜವಾಬ್ದಾರಿಯನ್ನು ಯುಪಿಎಸ್‌ಇಗೆ ವಹಿಸಲಿ. ಈ ಸಂಸ್ಥೆ ಬಗ್ಗೆ ಯಾರಿಗೂ ಸಂಶಯ ಇಲ್ಲ. ಯುಪಿಎಸ್‌ಇ ಮೂಲಕ ಕೆಲವು ಇಲಾಖೆಗೆ ಸಲಹೆಗಾರರನ್ನು ನೇಮಕ ಮಾಡುತ್ತಾರೆ. ಸಮಿತಿ ಮೂಲಕ ಮಾಡಿದರೆ, ಜನರಿಗೆ ಸಂಶಯ ಬರುತ್ತದೆ. ಕಾರಣ, ಸಮಿತಿಯೊಂದು ರಾಜಕೀಯ ಒತ್ತಡಕ್ಕೆ ಒಳಪಡದೇ ಇರಲು ಸಾಧ್ಯವಿಲ್ಲ. ಕುಲಪತಿ ನೇಮಕಾತಿ ಸೇರಿದಂತೆ ಅನೇಕ ನೇಮಕಾತಿಯಲ್ಲೂ ಸಮಿತಿಯನ್ನು ಮೂಲೆಗುಂಪು ಮಾಡಿ ರಾಜಕೀಯ ನಾಯಕರು ತಮಗೆ ಬೇಕಾದ ನೇಮಕಾತಿ ಮಾಡಿಕೊಂಡಿದ್ದ ನಿದರ್ಶನ ಸಾಕಷ್ಟಿವೆ.
ಯುಪಿಎಸ್‌ಇ ಮೂಲಕ ಆಯ್ಕೆಯಾದ ಒಬ್ಬ ಅಧಿಕಾರಿ ಎರಡು ವರ್ಷದ ಆರಂಭಿಕ ತರಬೇತಿ, ನಂತರ 8-10 ವರ್ಷ ರಾಜ್ಯ ಸೇವೆ, ಆನಂತರ ಕೇಂದ್ರ ಸೇವೆ, ಈ ಎಲ್ಲ ಅನುಭವದ ನಂತರ ಮತ್ತೆ ರಾಜ್ಯ ಸೇವೆಗೆ ಬರುತ್ತಾರೆ. ಜಂಟಿ ಕಾರ್ಯದರ್ಶಿಯಲ್ಲಿ ಐಎಎಸ್ ಮಾತ್ರವಲ್ಲ. ಪೋಸ್ಟಲ್ ಸರ್ವಿಸ್, ಡಿಫೆನ್ಸ್ ಸರ್ವಿಸ್, ಐಆರ್‌ಎಸ್ ಹೀಗೆ ಅನೇಕ ಸೇವೆ ಇದೆ. ದೇಶದಲ್ಲಿ 300 -350ಜಂಟಿ ಕಾರ್ಯದರ್ಶಿ ಹುದ್ದೆಯಿದೆ. ಇದರಲ್ಲಿ ಶೇ.30-35ರಷ್ಟು ಬೇರೆ ಕೇಡರ್ ಅಧಿಕಾರಿಗಳಿದ್ದಾರೆ.
ಕೇಂದ್ರ ಸರ್ಕಾರ ನೇರ ನೇಮಕಾತಿ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗುತ್ತಿದೆ. ಏಕೆಂದರೆ, ಹುದ್ದೆಯ ಜವಾಬ್ದಾರಿ, ಕಾನೂನಿನ ಅರಿವು ಹಾಗೂ ಅನುಭವ ಇಲ್ಲದ ವ್ಯಕ್ತಿಯನ್ನು ಜಂಟಿ ಕಾರ್ಯದರ್ಶಿ ಮಾಡಿದರೆ, ಜನರಿಗೆ ವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿಯಲು ಸಾಧ್ಯವೇ?
ಆಡಳಿತ ಸುಧಾರಣಾ ಸಮಿತಿ 10ನೇ ವರದಿಯಲ್ಲಿ ಹೇಳಿರುವ ಪ್ರಕಾರ, ಇಂತಹ ನೇಮಕಾತಿಗೆ ಪ್ರಧಾನ ಮಂತ್ರಿ, ಸ್ರುಪೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ವಿರೋಧ ಪಕ್ಷದ ನಾಯಕರ ಜತೆಗೆ ತಜ್ಞರನ್ನು ಸೇರಿರುವ ಆಡಳಿತಾತ್ಮಕ ಪ್ರಾಧಿಕಾರ ರಚನೆ ಮಾಡಬೇಕು. ಇದನ್ನೆಲ್ಲ ಗಾಳಿಗೆ ತೂರಿ ಸಮಿತಿ ಮೂಲಕವೇ ನೇರ ನೇಮಕಾತಿ ಮಾಡಿದರೆ, ಸಮಿತಿಯ ವಿಶ್ವಾಸಾರ್ಹತೆ ಉಳಿಯುವುದೇ? ಈ ನೇಮಕಾತಿ ಸಮಿತಿ ಮೇಲೆ ಜನರಿಗೆ ವಿಶ್ವಾಸ ಬರಲು ಸಾಧ್ಯವೇ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಅಧಿಕಾರ ನೇಮಕ ಹೊಸದಲ್ಲ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಯು.ಕೆ, ಬೆಲ್ಜಿಯಂ, ಯುಎಸ್‌ಎ ಮೊದಲಾದ ದೇಶದಲ್ಲಿ ಹಿರಿಯ ಕಾರ್ಯನಿರ್ವಾಹಕ ಹುದ್ದೆಯನ್ನು ಲ್ಯಾಟರಲ್ ಎಂಟ್ರಿ ಮೂಲಕ ಭರ್ತಿ ಮಾಡುತ್ತಾರೆ. ವಿದ್ಯಾರ್ಹತೆ, ಗುಣಮಟ್ಟ ಸೇರಿ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮೊದಲಾದ ದೇಶದಲ್ಲಿ ಇಂತಹ ಅಧಿಕಾರಿಯಿಂದ ದೊಡ್ಡ ಮಟ್ಟದ ಅಕ್ರಮ ನಡೆದು, ಜೈಲು ಸೇರಿರುವ ಉದಾಹರಣೆಗಳು ಇವೆ.
ಐಐಎಸ್ ಅಧಿಕಾರಿಗಳು ತಪ್ಪು ಮಾಡಿದರೆ, ಕಾರ್ಯಾಂಗ ನ್ಯಾಯಾಲಯ, ನ್ಯಾಯಾಲಯ, ಮಾಧ್ಯಮ, ಲೋಕಾಯುಕ್ತ, ಜಾಗೃತಿ ಆಯೋಗ, ಸಿಬಿಐ ಹೀಗೆ ಅನೇಕ ಸಂಸ್ಥೆ ಇದೆ. ಖಾಸಗಿ ವಲಯದಲ್ಲಿ ಈ ರೀತಿಯ ತನಿಖಾ ಸಂಸ್ಥೆಗಳಿವೆಯೇ? ದೇಶದಲ್ಲಿ ಚುನಾವಣೆ ನಡೆಸುವುದು ಸುಲಭದ ಕೆಲಸವೇ? ರೈಲ್ವೆ ಇಲಾಖೆ ನಿರ್ವಹಣೆ ಖಾಸಗಿ ವ್ಯಕ್ತಿಯಿಂದ ಸಾಧ್ಯವೇ?ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾಗಾಂಧಿ, ವಾಜಪೇಯಿ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ವಿರೇಂದ್ರ ಪಾಟೀಲ್, ದೇವರಾಜ್ ಅರಸು ಮೊದಲಾದವರ ಕಾಲದಲ್ಲಿ ನೀತಿ-ನಿಯಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಮ್ಮ ನಿಲುವನ್ನು ಧೈರ್ಯದಿಂದ ಹೇಳುತ್ತಿದ್ದರು. ಈಗಿನ ಅಧಿಕಾರಿಗಳು ಅಷ್ಟು ಧೈರ್ಯ ತೋರಿದರೆ, ಸರ್ಕಾರಿ ವಿರೋಧಿ ಹಣೆಪಟ್ಟಿ ಸಿಗುತ್ತದೆ, ವರ್ಗಾವಣೆ ಶಿಕ್ಷೆ ನೀಡುತ್ತಾರೆ. ಎಲ್ಲದಕ್ಕೂ ಸರಿ ಎನ್ನುವ ಅಧಿಕಾರಿಗಳೇ ರಾಜಕೀಯ ನಾಯಕರಿಗೂ ಬೇಕಾಗಿದೆ. 10 ಮಂದಿ ಜಂಟಿ ಕಾರ್ಯದರ್ಶಿ ನೇಮಕ ಮಾಡಿ, ಮೂರ್‍ನಾಲ್ಕು ವರ್ಷ ಅವರಿಗೆ ಅಧಿಕಾರ ನೀಡುವುದರಿಂದ ಬದಲಾವಣೆ ತರಲು ಸಾಧ್ಯವಿಲ್ಲ. ದೀರ್ಘ ಕಾಲದ ಆಲೋಚನೆ ಮತ್ತು ನೀತಿ ನಿಯಮದ ಅಗತ್ಯವಿದೆ. ಐಎಎಸ್ ಅಧಿಕಾರಿ ಮತ್ತು ಜಂಟಿ ಕಾರ್ಯದರ್ಶಿ ನಡುವೆ ಸಮನ್ವಯ ಹೇಗೆ ಎಂಬುದು ಮುಖ್ಯವಾಗುತ್ತದೆ. ಯಾವುದೇ ಹೊಸ ಪದ್ಧತಿಯಿಂದ ಸಮಸ್ಯೆ ಬಗೆಹರಿಯಬೇಕೇ ಹೊರತು ಹೆಚ್ಚಾಗಬಾರದು. – ಮದನಗೋಪಾಲ್, ನಿವೃತ್ತ ಐಎಎಸ್ ಅಧಿಕಾರಿ