Advertisement

ಬೇಕೇ ಬೇಕು ಐಸ್‌ ಕ್ರೀಮ್‌ ಬೇಕು…

09:10 AM May 06, 2020 | mahesh |

ರಾಮಾಯಣ ಮಹಾಭಾರತ ಸೀರಿಯಲ್‌ಗ‌ಳು ಪ್ರಸಾರವಾದದ್ದು ಖುಷಿಯ ವಿಚಾರ. ಆದರೆ, ಅವುಗಳ ಜೊತೆಯಲ್ಲಿ ಐಸ್‌ಕ್ರೀಮ್‌ ಜಾಹೀರಾತು ಕೂಡ ಪ್ರಸಾರ ಆಗಬೇಕೇ?

Advertisement

ಐಸ್‌ಕ್ರೀಮ್‌ ಅಂದ್ರೆ ನನಗೆ ಬಹಳ ಇಷ್ಟ. ಈ ಲಾಕ್‌ಡೌನ್‌ ಸಮಯದಲ್ಲಿ ದಿನಸಿ, ಔಷಧಿ, ಹಾಲು, ತರಕಾರಿ ಮುಂತಾದ ಅತ್ಯವಶ್ಯ ವಸ್ತುಗಳು ಸಿಗ್ತಿರೋದೇ ನಮ್ಮ ಪುಣ್ಯ. ಇಂಥದ್ದರಲ್ಲಿ ನಾನು, ಐಸ್‌ಕ್ರೀಮ್‌ ಐಸ್‌ಕ್ರೀಮ್‌ ಅಂತ ಬಾಯಿ ಬಡಿದುಕೊಂಡರೆ, ಕೇಳಿದವರು ಏನೆಂದುಕೊಂಡಾರು? ತಿಂಗಳಿಗೊಮ್ಮೆ ಎರಡು ಲೀಟರ್‌ ಫ್ಯಾಮಿಲಿ ಪ್ಯಾಕ್‌ ಐಸ್‌ಕ್ರೀಮ್‌ ತಂದು , ಅರ್ಧ ಲೀಟರ್‌ ಐಸ್‌ಕ್ರೀಮನ್ನು ಒಮ್ಮೆಲೇ ತಿಂದು ತೇಗುವ ನಾನು, ಮತ್ತೆ ಐಸ್‌ ಕ್ರೀಮ್‌ ನೆನಪಾದಾಗಲೆಲ್ಲ ಕೋನು, ಕ್ಯಾಂಡಿ, ಕುಲ್ಫಿಗಳ ಆಕರ್ಷಣೆಗೆ ಒಳಗಾಗುತ್ತೇನೆ.

ಲಾಕ್‌ಡೌನ್‌, ನನ್ನ ಈ ದುರಭ್ಯಾಸದ ಮೇಲೂ ಪರಿಣಾಮ ಬೀರಿತ್ತು. ಲಾಕ್‌ ಡೌನ್‌ ಕಾರಣಕ್ಕೆ ತುಟಿಪಿಟಕ್‌ ಎನ್ನದೆ ಮನೆಯೊಳಗೆ ಇದ್ದದ್ದಾಗಿತ್ತು. ಈ ಮಧ್ಯೆ, ಡಿಡಿಯಲ್ಲಿ ರಾಮಾಯಣ-  ಮಹಾಭಾರತಗಳು ಪ್ರಸಾರವಾಗತೊಡಗಿದವು. ಅಷ್ಟೇ ಆಗಿದ್ದರೆ ಸಮಸ್ಯೆಯೇನೂ ಇರಲಿಲ್ಲ. ಡಿಡಿಯವರು, ಈ ಧಾರಾವಾಹಿಗಳ ಜೊತೆಯಲ್ಲಿ, ಅಮೂಲ್‌ ಐಸ್‌ ಕ್ರೀಮ್‌ ಜಾಹೀರಾತನ್ನು, ಪುನಃ ಪುನಃ ಪ್ರಸಾರ ಮಾಡತೊಡಗಿದರು. ನನ್ನ ಕಥೆ ಏನಾಗಿರಬಹುದು ಊಹಿಸಿಕೊಳ್ಳಿ! ನನ್ನ ಸಂಕಟ ನೋಡಲಾಗದೆ,  ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಅಂಗಡಿಗೆ, ಹಾಲು ತರಲು ಹೋದ ರಾಯರು, ಅಲ್ಲಿ ಐಸ್‌ಕ್ರೀಮ್‌ ಇದೆಯೇ ಎಂದು ವಿಚಾರಿಸಿದರು. ಮತ್ತು ಅಲ್ಲಿ ಕೋನ್‌- ಕುಲ್ಫಿ ಇರುವ ವಿಷಯವನ್ನಷ್ಟೇ ತಂದರು! ಅಷ್ಟೇ ಅಲ್ಲ, ಅದು  ಯಾವಾಗ ಬೇಕಾದರೂ ಖಾಲಿಯಾಗುವ
ಸಂಭವನೀಯತೆಯನ್ನೂ ತೆರೆದಿಟ್ಟರು! ಮಧ್ಯಾಹ್ನದ ನಂತರ ಮಗ ಹೋದಾಗ, ಅಂಗಡಿಗೆ ಬಾಗಿಲು ಹಾಕಿತ್ತು. ಸುಖಾಸುಮ್ಮನೆ ತಿರುಗುವ ಹುಡುಗರಿಗೆ ಪೊಲೀಸರು ಹೊಡೆಯುವ ವಿಷಯ ತಿಳಿದಿದ್ದ ಮಗನಿಗೆ, ಮನೆಯಿಂದ ಹೆಚ್ಚು ದೂರದ ಅಂಗಡಿಗೆ ಹೋಗಲು ಭಯ!

ಜೋಲು ಮೋರೆ ಹೊತ್ತು ಹಿಂದಿರುಗಿದ. ಬೇರೆ ದಾರಿಯಿಲ್ಲದೆ “ಯಾವ ಐಸ್‌ ಕ್ರೀಮ್‌ ತಂದರೂ ಕಮಕ್‌ ಕಿಮಕ್‌ ಅನ್ನದೆ ತಿನ್ನುತ್ತೇನೆ’ ಎಂಬ ಭರವಸೆ ಕೊಟ್ಟಮೇಲೆ, ರಾಯರೇ ಮರುದಿನ ನಾಲ್ಕು ಕೋನ್‌ ಮತ್ತು ನಾಲ್ಕು ಕುಲ್ಫಿ ತಂದರು. ಆದರೆ, ಇದು ಉರಿಯುತ್ತಿದ್ದ ಹೋಮಾಗ್ನಿಗೆ ತುಪ್ಪ ಸುರಿದಂತಾಗಿದೆ. ನನ್ನ ಅವಸ್ಥೆಯನ್ನು ಯಾರಿಗೆ ಹೇಳಲಿ?

ಸುರೇಖಾ ಭೀಮಗುಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next