Advertisement

ದೇಶ ಶುದ್ಧಿಗೆ ಬೇಕಿದೆ 15 ವರ್ಷ: ಕರಂದ್ಲಾಜೆ

12:55 PM Apr 25, 2017 | Team Udayavani |

ದಾವಣಗೆರೆ: ದೇಶದಲ್ಲಿ ಕಾಂಗ್ರೆಸ್‌ ನಡೆಸಿರುವ ಭ್ರಷ್ಟಾಚಾರ, ಹಗರಣದಿಂದಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ 5 ವರ್ಷ ಸಾಕಾಗಲ್ಲ. ಕನಿಷ್ಠ 15 ವರ್ಷ ಬೇಕಿದೆ ಎಂದು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

Advertisement

ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, 15 ವರ್ಷದ ನಂತರ ಇಡೀ ದೇಶ ಗುಜರಾತ್‌ ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿದೆ.

ಇದೀಗ ದೇಶದ ಜನ ಸಹ ಇದೇ ಕನಸು ಕಾಣುತ್ತಿದ್ದಾರೆ. ಉತ್ತರ ಪ್ರದೇಶದ ಚುನಾವಣೆ ಇದಕ್ಕೆ ಉತ್ತಮ ನಿದರ್ಶನ ಎಂದರು. ನರೇಂದ್ರ ಮೋದಿ ನೇತೃತ್ವದ ಎಸ್‌ಡಿಎ ಸರ್ಕಾರ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿದೆ. ಚುನಾವಣೆಗೂ ಮುನ್ನ ನೀಡಿದ್ದ ಆಶ್ವಾಸನೆಗಳನ್ನು ಪ್ರಧಾನಿ ಮೋದಿ ಈಡೇರಿಸುತ್ತಾ ಬಂದಿದ್ದಾರೆ. 

ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಹೇಳಿದ್ದ ಅವರು ಅದರಂತೆ ನಡೆದುಕೊಂಡಿದ್ದಾರೆ. ದೇಶದ ರಕ್ಷಣೆ ವಿಷಯದಲ್ಲಿ ಗಂಭೀರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಅದನ್ನೂ ಸಹ ಮಾಡಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಜನಪರ ಆಡಳಿತವನ್ನ ಜನತೆ ಮರೆತಿಲ್ಲ.

ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ ಯೋಜನೆಗಳು ಜನಪರವಾಗಿದ್ದವು. ಇಂದು ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಬ್ಬರೂ ಆ ಯೋಜನೆಗಳ ಸವಲತ್ತು ಪಡೆದಿದ್ದಾರೆ. ಈಗಲೂ ಸಹ ಜನ ಅಂದಿನ ಸರ್ಕಾರದ ಕಾರ್ಯಕ್ರಮ ಮರೆತಿಲ್ಲ ಎಂದು ತಿಳಿಸಿದರು.

Advertisement

ಈಗಿನ ರಾಜ್ಯ ಸರ್ಕಾರ ಜನರನ್ನು ಮರೆತಿದೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಹಿತ ಮರೆತಿದ್ದಾರೆ. ಅಹಿಂದ ವರ್ಗವನ್ನು ಕೇವಲ ಅಧಿಕಾರಕ್ಕೆ ಏಣಿ ಮಾಡಿಕೊಂಡ ಅವರು ಇಂದು ಜಾರಿ ಮಾಡಿದ ಯೋಜನೆಗಳು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಸಿಗುವಂತಾಗಿದೆ.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ನಾನೂ ಸೇರಿದಂತೆ ಹಲವರು ಖುಷಿಪಟ್ಟಿದ್ದೆವು. ಅಹಿಂದ ನಾಯಕರೊಬ್ಬರು ಅಧಿಕಾರಕ್ಕೆ ಬಂದಿದ್ದು, ಮುಂದೆ ಈ ವರ್ಗಕ್ಕೆ ಸಾಕಷ್ಟು ಉಪಯೋಗ ಆಗಲಿದೆ ಎಂಬ ಭಾವನೆ ಇತ್ತು. ಆದರೆ, ಇದೆಲ್ಲಾ ಸುಳ್ಳಾಯಿತು ಎಂದರು. 

ರಾಜ್ಯ ಸರ್ಕಾರ ಜಾರಿ ಮಾಡುತ್ತಿರುವ ಯೋಜನೆ ಯಾರನ್ನೂ ಸರಿಯಾಗಿ ತಲುಪುತ್ತಿಲ್ಲ. ಶಾದಿ ಭಾಗ್ಯ ಜಾರಿ ಮಾಡಿ, ಕೆಲವೇ ಕೆಲವು ಮುಸ್ಲಿಮರಿಗೆ ಈ ಸವಲತ್ತು ಕಲ್ಪಿಸಿದರು. ಅನ್ನಭಾಗ್ಯ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಪ್ರತಿ ತಿಂಗಳು ರಾಜ್ಯದಲ್ಲಿ ಜಾರಿ ಇರುವ ಅನ್ನಭಾಗ್ಯ ಯೋಜನೆಗೆ 400 ಕೋಟಿ ರೂ. ಅನುದಾನ ನೀಡುತ್ತದೆ.

ಇದನ್ನು ಸಿದ್ದರಾಮಯ್ಯನವರಾಗಲಿ, ಅವರ ಸರ್ಕಾರದ ಸಚಿವರಾಗಲಿ ಎಲ್ಲೂ ಹೇಳಿ ಕೊಳ್ಳುವುದಿಲ್ಲ. ಇದರ ಜೊತೆಗೆ ಇದೇ ಅಕ್ಕಿಯನ್ನು ಕಾಂಗ್ರೆಸ್‌ನ ಕೆಲ ಪುಡಾರಿಗಳು ಪಾಲಿಶ್‌ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಮೋರ್ಚಾದ ಜಿಲ್ಲಾಧ್ಯಕ್ಷೆ ಎಚ್‌.ಸಿ. ಜಯಮ್ಮ ಧ್ಯಕ್ಷತೆ ವಹಿಸಿದ್ದರು.

ಸಂಸದ ಜಿ.ಎಂ. ಸಿದ್ದೇಶ್ವರ್‌, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾಜಿ ಶಾಸಕರಾದ ಎಸ್‌.ವಿ. ರಾಮಚಂದ್ರ, ಕೆ. ಮಾಡಾಳು ವಿರುಪಾಕ್ಷಪ್ಪ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌, ತಾಪಂ ಅಧ್ಯಕ್ಷರಾದ ಮಮತ ಮಲ್ಲೇಶಪ್ಪ, ಪುಷ್ಪ, ಸುಲೋಚನಮ್ಮ, 

ಜಿಪಂ ಉಪಾಧ್ಯಕ್ಷ ಸಿದ್ದಪ್ಪ, ಸದಸ್ಯರಾದ ಸುವರ್ಣ, ಕವಿತಾ, ಶಾಂತಕುಮಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಜಿಪಂ ಮಾಜಿ ಅಧ್ಯಕ್ಷರಾದ ಸಹನಾ ರವಿ, ಜಯಲಕ್ಷ್ಮಿ ಮಹೇಶ್‌ ಇತರರು ವೇದಿಕೆಯಲ್ಲಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಮೆರವಣಿಗೆ ನಡೆಯಿತು.  

Advertisement

Udayavani is now on Telegram. Click here to join our channel and stay updated with the latest news.

Next