Advertisement
ಪಾಲಿಕೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಕಡ್ಡಾಯವಾಗಿ ಪರವಾನಗಿ ನೀಡುವ ಸಂಬಂಧ ಪಾಲಿಕೆಯಿಂದ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ಆ ಹಿನ್ನೆಲೆಯಲ್ಲಿ ನಾಯಿ ಸಾಕುವ ಸಂಬಂಧ ನೂತನ ನಿಯಮಾವಳಿಗಳನ್ನು ಜೂನ್‌ನಿಂದಲೇ ಅನುಷ್ಠಾನಗೊಳಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.
Related Articles
Advertisement
ಫ್ಲ್ಯಾಟ್‌ಗೊಂದು, ಮನೆಗೆ ಮೂರು: ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳಲ್ಲಿ ನೆಲೆಸಿದವರಿಗೆ ಒಂದು ನಾಯಿ ಹಾಗೂ ಇತರೆಡೆ ಮನೆಗೆ 3 ನಾಯಿ ಸಾಕಲು ಬಿಬಿಎಂಪಿ ಅವಕಾಶ ನೀಡಿದೆ. ಇನ್ನು ನಾಯಿ ಮಾರಾಟಗಾರರಿಗೆ ಗರಿಷ್ಠ 10 ನಾಯಿ ಸಾಕಲು ಅವಕಾಶ ನೀಡಿದ್ದು, ನಗರದ ಕೇಂದ್ರ ಭಾಗದಲ್ಲಿ ಸಂತಾನ ವೃದ್ಧಿಗೆ ಕಡಿವಾಣ ಹಾಕಲಾಗಿದೆ. ನಾಯಿ ಸಾಕುವವರು ಪ್ರತಿ ನಾಯಿಗೆ 110 ರೂ. ವಾರ್ಷಿಕ ಶುಲ್ಕ ಪಾವತಿಸಿ ಪರವಾನಗಿ ಪಡೆಯಬೇಕಿದೆ.
ಲೈಸೆನ್ಸ್ ಇಲ್ಲದ ನಾಯಿಗಳು ಪಾಲಿಕೆ ವಶಕ್ಕೆ: ನಾಯಿಗಳಿಗೆ ಪರವಾನಗಿ ಕಡ್ಡಾಯ ನಿಯಮ ಜಾರಿ ಬಳಿಕ ಪರವಾನಗಿ ಪಡೆಯಲು ನಿಗದಿತ ಕಾಲಾವಕಾಶ ನೀಡಲಾಗುತ್ತದೆ. ಅದರ ನಂತರವೂ ಮಾಲೀಕರು ಪರವಾನಗಿ ಪಡೆಯದಿದ್ದರೆ, ಅಂತಹವರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ಇಲ್ಲದಿದ್ದರೆ ನಾಯಿಯನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ಪಶುಪಾಲನಾ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಾಯಿಗಳಿಗೆ ಕಾಲರ್ ಐಡಿ: ನಿಯಮ ಜಾರಿಯಾದ ಬಳಿಕ ಪ್ರತಿಯೊಂದು ವಲಯದಲ್ಲಿಯೂ ಪಾಲಿಕೆಯ ಸಿಬ್ಬಂದಿ ತಪಾಸಣೆ ನಡೆಸಲಿದ್ದು, ನಾಯಿ ಸಾಕಣೆದಾರರು ಪರವಾನಗಿ ಪಡೆದಿರುವ ಕುರಿತು ಪರಿಶೀಲಿಸಲಿದ್ದಾರೆ. ಈ ವೇಳೆ ನಾಯಿ ವಿವರ ಹಾಗೂ ಮಾಲೀಕರ ವಿವರ ಪಡೆದು ಕಾಲರ್ ಐಡಿ ನೀಡಲು ಪಾಲಿಕೆ ಯೋಜನೆ ರೂಪಿಸಿದೆ.
ಪರವಾನಗಿ ಉದ್ದೇಶವೇನು?: ಬಿಬಿಎಂಪಿಯಿಂದ ಕಾರ್ಯಾಚರಣೆ ನಡೆಸಿದ ವೇಳೆ ಸಾಕು ನಾಯಿಗಳನ್ನು ಹಿಡಿದಿರುವುದು ಹೆಚ್ಚಿನ ಪ್ರಕರಣಗಳಲ್ಲಿ ನಡೆದಿದೆ. ಹೀಗಾಗಿ ನಾಯಿಗಳಿಗೆ ಪರವಾನಗಿ ಕೊಟ್ಟು ಕಾಲರ್ ಐಡಿ ಹಾಕಿದರೆ ಅದು ಸಾಕು ನಾಯಿ ಎಂಬುದು ಗೊತ್ತಾಗಲಿದೆ. ಜತೆಗೆ ನಾಯಿಗಳು ಕಾಣೆಯಾದರೆ ಮಾಲೀಕರಿಗೆ ನಾಯಿಗಳನ್ನು ತಲುಪಿಸಲು ಅನುಕೂಲವಾಗಲಿದೆ. ಪ್ರತಿವರ್ಷ ಪರವಾನಗಿ ನವೀಕರಣದ ವೇಳೆ ನಾಯಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿರುವ ಮಾಹಿತಿ ತಿಳಿಯಬಹುದಾಗಿದೆ ಎಂಬುದು ಪಾಲಿಕೆಯ ಅಧಿಕಾರಿಗಳ ವಾದವಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ್ದು, ನಿಯಮ ಜಾರಿಗೆ ಅನುಮತಿ ಕೋರಿ ಕಡತವನ್ನು ಆಯುಕ್ತರಿಗೆ ಕಳುಹಿಸಲಾಗಿದೆ. ಆಯುಕ್ತರು ಅನುಮತಿ ನೀಡಿದ ಕೂಡಲೇ ಪರವಾನಗಿ ಕಡ್ಡಾಯ ಕುರಿತು ಸಾರ್ವಜನಿಕ ಪ್ರಕಟಣೆ ನೀಡಲಾಗುವುದು. -ಡಾ.ಆನಂದ್, ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ * ವೆಂ.ಸುನೀಲ್‌ಕುಮಾರ್