ಮುದ್ದೇಬಿಹಾಳ: ಪ್ರತಿಭಾ ಕಾರಂಜಿ ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದ್ದು ಇದರ ಸಮರ್ಥ ಬಳಕೆ ಆಗಬೇಕು ಎಂದು ವಿಜಯಪುರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಇಲ್ಲಿನ ಎಂಜಿಎಂಕೆ ಶಾಲೆಯಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ 2017-18ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾಕ್ಟರ್, ಎಂಜಿನೀಯರ್, ಐಎಎಸ್ ಆಗಬೇಕು ಎಂದು ಪಾಲಕರು ಕನಸು ಕಂಡು ಅವರ ಅಭಿರುಚಿಗೆ ವಿರುದ್ಧವಾಗಿ ಒತ್ತಡ ಹೇರಬಾರದು. ಇದರಿಂದ ಮಕ್ಕಳಲ್ಲಿ ಗೊಂದಲ ಉಂಟಾಗಿ ಪರಿಪೂರ್ಣತೆ ಸಾಧ್ಯವಾಗೊಲ್ಲ. ಪಾಲಕರು ಮಕ್ಕಳ ಅಭಿರುಚಿಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರ ಮೇಲೆ ಇಲ್ಲದ ಒತ್ತಡ ಹಾಕಿ ಅವರ ಮನಸ್ಸಲ್ಲಿ ಗೊಂದಲ ಹುಟ್ಟು ಹಾಕಬಾರದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಂಜಿಎಂಕೆವಿವಿ ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಶೈಲಗೌಡ ಬಿರಾದಾರ ಮಿಣಜಗಿ, ಮುಖ್ಯ ಅತಿಥಿಗಳಾಗಿದ್ದ ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ
ಇನ್ನಿತರರು ಮಕ್ಕಳ ಪ್ರತಿಭೆ ಕುರಿತು ಮಾತನಾಡಿ ಸಲಹೆ ಸೂಚನೆ ನೀಡಿದರು.
ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಸರ್ಕಾರಿ ಪಪೂ ಕಾಲೇಜು ಪ್ರಾಚಾರ್ಯ ಎಸ್.ಎಸ್. ಅಂಗಡಿ, ಎಂಜಿಎಂಕೆ ಪಪೂ ಕಾಲೇಜು ಪ್ರಾಂಶುಪಾಲ ಕೆ.ಐ. ಖೋದಾನಪುರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಕಟ್ಟಿಮನಿ, ಶಿಕ್ಷಕರ ಸಂಘಟನೆ ಅಧ್ಯಕ್ಷರುಗಳಾದ ಎಸ್.ಎಸ್. ಬಾಣಿ, ಬಿ.ಎಸ್. ಶಾಂತಪ್ಪನವರ, ಎಸ್.ಜಿ.ಕೂಡಗಿ, ಎಸ್.ಬಿ.ಬಿದ್ನಾಳಮಠ, ಎಂ.ಜಿ.ಹೊಕ್ರಾಣಿ, ಬಿ.ಎಸ್.ಹಿರೇಮಠ, ಬಿ.ಎಸ್ .ನಾಡಗೌಡ, ಜಿ.ಎನ್.ಹೂಗಾರ, ಎಂಜಿಎಂಕೆ ಶಾಲೆ ಮುಖ್ಯಾಧ್ಯಾಪಕಿ ರಾಜೇಶ್ವರಿ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ. ಬೆಳಗಲ್ಲ, ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮ ಸಂಘಟನೆಗೆ ಸ್ಥಳಾವಕಾಶ ಮಾಡಿಕೊಟ್ಟ ಎಂಜಿಎಂಕೆ ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಶೈಲಗೌಡ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ಒಟ್ಟು 25 ಕ್ಲಸ್ಟರ್‌ನಿಂದ ಆಗಮಿಸಿದ್ದ ಅಂದಾಜು 1,500 ಮಕ್ಕಳು ವೈಯುಕ್ತಿಕ ಮತ್ತು ಸಾಮೂಹಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಎಂ.ಎಂ. ಬೆಳಗಲ್ಲ ಸ್ವಾಗತಿಸಿದರು. ಎಸ್.ಬಿ. ಚಲವಾದಿ ಪ್ರಾಸ್ತಾವಿಕ ಮಾತನಾಡಿದರು. ಟಿ.ಡಿ. ಲಮಾಣಿ ನಿರೂಪಿಸಿದರು. ಆರ್.ಜಿ. ಕಿತ್ತೂರ ವಂದಿಸಿದರು.