ವಿಜಯಪುರ: ನಗರದ ಭೂತನಾಳ ಕೆರೆ ಸಮಗ್ರ ಅಭಿವೃದ್ಧಿ ಹಾಗೂ ಸೌಂದಯೀಕರಣಕ್ಕೆ 11 ಕೋಟಿ ವೆಚ್ಚದಲ್ಲಿ ಯೋಜನೆಯ ನೀಲನಕ್ಷೆ ಸಿದ್ಧವಾಗಿದೆ.
ರಾಜ್ಯದ ಜಲಸಂಪನ್ಮೂಲ ಇಲಾಖೆ ಕೃಷ್ಣಾ ಭಾಗ್ಯ ಜಲ ನಿಗಮದಿಂದ ತಯಾರಿಸಿದ್ದು, 250 ಎಕರೆ ಪ್ರದೇಶದ ಭೂತನಾಳ ಕೆರೆ 105 ವರ್ಷಗಳ ಹಿಂದೆ ನಿರ್ಮಿಸಿದ್ದು, ಇಂದಿಗೂ ವಿಜಯಪುರ ನಗರಕ್ಕೆ ಕುಡಿಯುವ ನೀರಿನ
ಆಧಾರವಾಗಿದೆ. ಕೆರೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ತೆಗೆದು, ಕಳೆದ ವರ್ಷದಿಂದ ಕೃಷ್ಣಾ ನದಿಯಿಂದ ನೀರೆತ್ತಿ ತುಂಬಿಸುತ್ತಿದೆ.
ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ, ನಗರ ಶಾಸಕ ಡಾ| ಎಂ.ಎಸ್. ಬಾಗವಾನ ಅವರ ಆಸಕ್ತಿ ಪರಿಣಾಮ ಈ ಪ್ರದೇಶದಲ್ಲಿ ಸುಂದರ ವಾತಾವರಣ ಸೃಷ್ಟಿಯಾಗಿದೆ. ಕೆರೆಯ ಮುಂಭಾಗದ 8.12 ಎಕರೆ ಪ್ರದೇಶವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿ, ಪ್ರವಾಸಿಗರಿಗೆ, ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸಲು ಮುಂದಾಗಿದೆ. ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ 9 ಕೋಟಿ ರೂ. ಅನುದಾನ ನೀಡಲು ಮುಂದೆ ಬಂದಿದೆ.
ಭೂತನಾಳ ಕೆರೆಯ ಏರಿಯ ಮುಂದಿನ ನೀರಿನ ರಂಜಿಗಳು, ಚಿಣ್ಣರ ಆಟದ ಮೈದಾನ, ಮೆಡಿಟೇಶನ್ ಹಾಲ್, ಆಹಾರ ಮಳಿಗೆಗಳು, ಶೌಚಾಲಯಗಳು ಹಾಗೂ ಸುತ್ತಲೂ ವಾಕಿಂಗ್ ಟ್ರಾಫಿಕ್ ನಿರ್ಮಾಣ, ಜಿಮ್ ವ್ಯವಸ್ಥೆ ಸೇರಿದಂತೆ ಹಲವಾರು ಸೌಕರ್ಯ ಕಲ್ಪಿಸುವುದಕ್ಕಾಗಿ ನೀಲನಕ್ಷೆ ಸಿದ್ದಪಡಿಸಲಾಗಿದೆ.