ಕೊಪ್ಪಳ: ಜಿಲ್ಲೆಯಲ್ಲಿ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಾಲ್ಕು ಗೋ ಶಾಲೆಗಳು ಮುನ್ನಡೆಯುತ್ತಿದ್ದು, ಅವುಗಳ ನಿರ್ವಹಣೆಗೆ ಟ್ರಸ್ಟ್‌ಗಳು ಹರಸಾಹಸ ಪಡುವಂತಹ ಸ್ಥಿತಿ ಎದುರಾಗಿದೆ. ಗೋ ಶಾಲೆಗಳು ಸರ್ಕಾರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿವೆ. ಜಿಲ್ಲೆಯಲ್ಲಿ ಮಹಾವೀರ ಜೈನ ಗೋ ಶಾಲೆ, ಯಲಬುರ್ಗಾದ ಶ್ರೀ ಬಸವಲಿಂಗೇಶ್ವರ ಶ್ರೀಧರ ಮುರಡಿ ಹಿರೇಮಠ ಗೋಶಾಲೆ, ಕುಷ್ಟಗಿಯ ಜಯಮಾಲ ಜೈನ ಗೋ ಶಾಲೆ ಹಾಗೂ ಗಂಗಾವತಿ ತಾಲೂಕಿನ ಆನೆಗೊಂದಿಯ ದುರ್ಗಾಮಾತಾ ಗೋ ಶಾಲೆ ಟ್ರಸ್ಟ್‌ನಡಿ ಒಟ್ಟು 1625 ಗೋವುಗಳ ರಕ್ಷಣೆ ಮಾಡಿ ಸಾಕಾಣಿಕೆ ಮಾಡಲಾಗುತ್ತಿದೆ.
ಈ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪ್ರತಿವರ್ಷ ಗೋ ಶಾಲೆಯ ನಿರ್ವಹಣೆಗೆ ತಾವೇ ಹಣ ವಿನಿಯೋಗ ಮಾಡುತ್ತಿದ್ದಾರೆ. ನಿರ್ವಹಣೆಗೆ ಹೆಚ್ಚಿನ ಹೊರೆಯಾಗಿದ್ದರೂ ಟ್ರಸ್ಟ್ ಹಾಗೂ ಮಠಮಾನ್ಯಗಳು ದನಕರುಗಳ ಸಾಕಾಣಿಕೆ ಮುಂದುವರಿಸಿವೆ. ಪ್ರತಿ ಬೇಸಿಗೆ ವೇಳೆ ಗೋ ಶಾಲೆಗಳು ಮೇವಿಗೆ ತುಂಬ ತೊಂದರೆ ಎದುರಿಸುತ್ತವೆ. ಹಾಗಾಗಿ ಪೂರ್ವದಲ್ಲಿಯೇ ರೈತರಿಂದ ಮೇವಿನ ಗೂಡುಗಳನ್ನು ಖರೀದಿಸಿ ದನಗಳಿಗೆ ಸಂಗ್ರಹಣೆ ಮಾಡಿಟ್ಟುಕೊಳ್ಳುತ್ತಿವೆ. ಗೋವುಗಳ ನಿರ್ವಹಣೆಗೆ ಟ್ರಸ್ಟ್ ಹಾಗೂ ಮಠದ ಆಸ್ತಿಯು ವಿಶಾಲವಾಗಿವೆ.
ಕುಡಿಯಲು ನೀರಿನ ತೊಟ್ಟಿಯ ವ್ಯವಸ್ಥೆ ಸೇರಿದಂತೆ ಮೇವು ಕತ್ತರಿಸುವ ಯಂತ್ರವನ್ನೂ ಇಡಲಾಗಿದೆ. ಆದರೆ ನಿತ್ಯವು ಅವುಗಳಿಗೆ ಮೇವು ಹಾಕುವುದು, ಮಕ್ಕಳಂತೆ ಜೋಪಾನ ಮಾಡಬೇಕು. ಕೂಲಿ ಕಾರ್ಮಿಕರಿಂದ ನಿರ್ವಹಣೆ ಮಾಡಬೇಕಾಗಿದೆ.
ಇದನ್ನೂ ಓದಿ:ಗ್ರಾಮಗಳ ಸಮಗ್ರ ಅಭಿವೃದಿಗೆ ಶ್ರಮಿಸಿ: ಸಚಿವ ಪಾಟೀಲ
ತೀವ್ರ ಬರದಂತಹ ಸಂದರ್ಭದಲ್ಲಿ ಈ ಭಾಗದ ರೈತರು ಗೋವುಗಳನ್ನು ಕಸಾಯಿಖಾನೆಗೆ ಕೊಡಲು ಮನಸ್ಸು ಮಾಡದೇ ಇಂತಹ ಗೋ ಶಾಲೆಗಳಿಗೆ ಕೊಡುತ್ತಾರೆ. ಆದರೆ ಇಲ್ಲಿನ ಗೋ ಶಾಲೆಗಳು ಒಮ್ಮೆ ದನಗಳನ್ನು ಪಡೆದರೆ ಅವು ಗೋ ಶಾಲೆ ವಶವಾದಂತೆ, ಮಠಗಳಡಿ ನಡೆಯುವ ಗೋ ಶಾಲೆಗಳಿಂದ ಮಾತ್ರ ರೈತರಿಗೆ ಸಾಕಲು ದನಕರು ಕೊಡುವ ಪದ್ಧತಿ ಇದೆ. ಇನ್ನೂ ಸರ್ಕಾರವು ಈ ಹಿಂದೆಲ್ಲ ಗೋ ಶಾಲೆಗಳಲ್ಲಿ ಮೂಲಸೌಕರ್ಯಕ್ಕೆ ಅಂದಾಜು 10 ಲಕ್ಷ ರೂ. ನೆರವು ನೀಡುತ್ತಿತ್ತು. ಆದರೆ ಇತ್ತೀಚೆಗೆ ಗೋ ಶಾಲೆಗಳಿಗೆ ಅನುದಾನ ನೀಡುವುದು ಕಡಿಮೆಯಾಗಿದೆ. ನಮ್ಮಂತ ಗೋ ಶಾಲೆಗಳಿಗೆ ಸರ್ಕಾರ ನೆರವು ಹೆಚ್ಚು ನೀಡಿದರೆ ನಿರ್ವಹಣೆಗೆ ನೆರವಾಗುತ್ತದೆ. ಇಲ್ಲಿನ ನಿರ್ವಹಣೆಯನ್ನು ನೋಡುವ ರೈತರು ಸಹ ತಮ್ಮ ರಾಸುಗಳನ್ನು ಕಸಾಯಿಖಾನೆಗೆ ಕೊಡದೇ ಇಲ್ಲಿಯೇ ಬಂದು ಬಿಟ್ಟು ಹೋಗುತ್ತಾರೆ ಎಂದೆನ್ನುವ ಮಾತುಗಳು ಗೋ ಶಾಲೆ ನಿರ್ವಹಣೆ ಮಾಡುವವರಿಂದ ಕೇಳಿ ಬಂದಿದೆ.
ದತ್ತು ಕಮ್ಮಾರ