ಪುತ್ತೂರು: ಆಧಾರ್ ಕಾರ್ಡ್ ಇಲ್ಲದವರು, ನವೀಕರಣ ಆಗದೇ ಇರುವವರ ಸಂಖ್ಯೆ ದೊಡ್ಡದಾಗಿ ಬೆಳೆದು ನಿಂತಿದೆ. ಹಾಗಿದ್ದರೂ, ಸೌಲಭ್ಯಗಳಿಗೆ ಏಕಾ ಏಕಿ ಆಧಾರ್ ಕಡ್ಡಾಯ ಮಾಡಿರುವುದು ತಲೆನೋವು. ಅದರಲ್ಲೂ ಸ್ಕ್ಯಾನಿಂಗ್‌ಗೂ ಆಧಾರ್ ಕಡ್ಡಾಯ ಎನ್ನುತ್ತಿರುವ ಹೊಸ ಬೆಳವಣಿಗೆ, ಜನಸಾಮಾನ್ಯ ರನ್ನು ಪೇಚಿಗೆ ಸಿಲುಕಿಸುತ್ತಿದೆ.
ಗರ್ಭಿಣಿಯರ ಸ್ಕ್ಯಾನಿಂಗ್‌ಗೆ ಮಾತ್ರ ಆಧಾರ್ ಲಿಂಕ್ ಮಾಡಿಸಬೇಕೆಂಬ ಕಾನೂನು ಜಾರಿಯಲ್ಲಿದೆ. ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕಾನೂನನ್ನು 1994ರಲ್ಲಿ ಜಾರಿಗೆ ತರಲಾಗಿದೆ. ಪ್ರಿ- ಕನ್ಸೆಪ್ಶನ್ ಆ್ಯಂಡ್ ಪ್ರಿ- ನ್ಯಾಟಲ್ ಡಯಾಗ್ನಸ್ಟಿಕ್ ಟೆಕ್ನಿಕ್ಸ್ ಆ್ಯಕ್ಟ್ (ಪಿಸಿಪಿಎನ್‌ಡಿಟಿ) ಎಂಬ ಹೆಸರಿನಲ್ಲಿ ಇದು ಜಾರಿಯಲ್ಲಿದೆ. ಇದರ ಪ್ರಕಾರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಚಾಲನಾ ಪರವಾನಿಗೆ, ಟೆಲಿಫೋನ್ ಬಿಲ್ ಹಾಗೂ ತಾಯಿ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಸಬೇಕು. ಆದರೆ ಇದನ್ನು ಇತರ ರೋಗಿಗಳಿಗೂ ಅನ್ವಯಿಸುತ್ತಿ ರುವುದರಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ.
2018ರ ಫೆಬ್ರವರಿ 1 ರಂದು ಇಂತಹದೊಂದು ಸುತ್ತೋಲೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ಹೊರಡಿಸಲಾಯಿತು. ಸ್ಕ್ಯಾನಿಂಗ್‌ಗೆ ಆಗಮಿಸಿದ ಹೆಚ್ಚಿನ ಗರ್ಭಿಣಿಯರು ಈ ಯಾವುದೇ ಕಾರ್ಡನ್ನು ತಾರದೇ ಇರುವುದರಿಂದ ಸ್ಕ್ಯಾನಿಂಗ್ ಮಾಡಿಸದೇ ಕಳುಹಿಸಲಾಯಿತು. ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ಬರುತ್ತಿದ್ದಂತೆ, ಸ್ಕ್ಯಾನಿಂಗ್ ಮಾಡದೇ ಹಿಂದೆ ಕಳುಹಿಸಬೇಡಿ. ಈ ಬಗ್ಗೆ ತಿಳಿವಳಿಕೆ ನೀಡಿ, ಮುಂದಿನ ಬಾರಿ ತೆಗೆದುಕೊಂಡು ಬರುವಂತೆ ಮಾಹಿತಿ ನೀಡಿ ಎಂದು ಸುತ್ತೋಲೆ ಹೊರಡಿಸಲಾಯಿತು. ಆದರೆ ಇದರ ಬೆನ್ನಿಗೇ ಸ್ಕ್ಯಾನಿಂಗ್ ಅರ್ಜಿ ಫಾರಂ ಅನ್ನು ಆನ್‌ಲೈನ್ ಮಾಡಲಾಯಿತು. ಇದರಿಂದಾಗಿ 13 ಗುರುತು ಚೀಟಿಗಳ ಪೈಕಿ ಒಂದರ ಸಂಖ್ಯೆಯನ್ನು ತುಂಬುವುದು ಅನಿವಾರ್ಯ. ಇಲ್ಲದೇ ಹೋದರೆ, ಸ್ಕ್ಯಾನಿಂಗ್ ಮಾಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ.
ಪೇಟೆಗೆ ಬಂದಿದ್ದ ಯುವಕನೊಬ್ಬನಿಗೆ ಅಪಘಾತ ಸಂಭವಿಸಿತು. ಆತನನ್ನು ನೇರವಾಗಿ ಸ್ಥಳೀಯರೇ ಸಮೀಪದ ಆಸ್ಪತ್ರೆಗೆ ದಾಖಲಿಸುತ್ತಾರೆ. ಅಲ್ಲಿ ಆತನ ಸ್ಕ್ಯಾನಿಂಗ್ ಅಗತ್ಯ ಎಂದು ಕಂಡುಬಂದರೆ, ತಕ್ಷಣ ಸ್ಕ್ಯಾನಿಂಗ್ ಮಾಡಿಸುವಂತಿಲ್ಲ. ಕಾರಣ ಆತನಲ್ಲಿ ಆಧಾರ್ ಕಾರ್ಡೆ ಇರುವುದಿಲ್ಲ. ಇಂತಹ ತುರ್ತು ಸಂದರ್ಭದಲ್ಲಿ ಮನೆಗೆ ಹೋಗಿ ಆಧಾರ್ ಕಾರ್ಡ್ ಹುಡುಕಿ ತರುವ ಪರಿಸ್ಥಿತಿಯೂ ಇರುವುದಿಲ್ಲ.
ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಹಾದಿ ಹಿಡಿದ ಬಡ ಕುಟುಂಬವೊಂದು ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಸ್ಕ್ಯಾನಿಂಗ್ ನಿರಾಕರಿಸಿದಾಗ ಪೇಚಿಗೆ ಸಿಲುಕಿದ ಘಟನೆಯೂ ವರದಿಯಾಗಿದೆ. ಆಸ್ಪತ್ರೆಗೆ ಬರುವವರು ಆಧಾರ್ ಕಾರ್ಡನ್ನು ಹಿಡಿದು ಕೊಂಡು ಬಂದಿರುವುದಿಲ್ಲ. ಇದ್ದಕ್ಕಿದ್ದಂತೆ ಆಧಾರ್ ಕಾರ್ಡ್ ಬೇಕು ಎಂದು ಹೇಳಿದರೆ, ತರುವುದಾದರೂ ಹೇಗೆ? ಅತ್ತ ಚಿಕಿತ್ಸೆಯೂ ಇಲ್ಲ, ಇತ್ತ ಆಧಾರ್ ಕಾರ್ಡೂ ಇಲ್ಲ ಎಂಬಂತಹ ಸ್ಥಿತಿ.
ತುರ್ತು ಸಂದರ್ಭದಲ್ಲಿ
ಬರಬರುತ್ತಾ ಆಧಾರ್ ಕಾರ್ಡನ್ನು ಎಲ್ಲ ವಿಷಯಗಳಿಗೂ ಕಡ್ಡಾಯ ಮಾಡಿರುವುದು ಹೊಸ ಹೊಸ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ. ವಾಸ್ತವದಲ್ಲಿ, ಆಧಾರ್ ಕಡ್ಡಾಯ ಮಾಡುವುದು ಉತ್ತಮ ಬೆಳವಣಿಗೆ ಎಂಬ ಪ್ರಶಂಸೆಯೂ ಇದೆ. ಆದರೆ ತುರ್ತು ಸಂದರ್ಭ ಹಾಗೂ ತುರ್ತು ಕೆಲಸಗಳಿಗೂ ಆಧಾರ್ ಕಡ್ಡಾಯ ಮಾಡುವುದು ಉತ್ತಮ ಲಕ್ಷಣವಲ್ಲ.
ಇತರ ಸ್ಕ್ಯಾನಿಂಗ್‌ಗೆ ಅನ್ವಯಿಸುವುದಿಲ್ಲ
ಆಧಾರ್ ಸೇರಿದಂತೆ 13 ಕಾರ್ಡ್‌ಗಳ ಪೈಕಿ ಒಂದರ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಗೆ ಭರ್ತಿ ಮಾಡಿದ ಬಳಿಕವಷ್ಟೇ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡಬೇಕು. ಪ್ರತಿಯೊಂದು ವಿಚಾರಕ್ಕೂ ದಾಖಲೆ ಬೇಕೆನ್ನುವ ಈ ಕಾಲಘಟ್ಟದಲ್ಲಿ ಸ್ಕ್ಯಾನಿಂಗ್‌ಗೂ ದಾಖಲೆ ನೀಡಬೇಕೆಂಬ ಕಾನೂನು ತಪ್ಪೇನಲ್ಲ. ಹಾಗೆಂದು ಇದು ಗರ್ಭಿಣಿಯರ ಸ್ಕ್ಯಾನಿಂಗ್‌ಗೆ ಮಾತ್ರ ಅನ್ವಯ. ಇತರ ಸ್ಕ್ಯಾನಿಂಗ್‌ಗೆ ಅನ್ವಯಿಸುವುದಿಲ್ಲ.
– ಡಾ| ಅಶೋಕ್ ಜಿ.,
ಅಧ್ಯಕ್ಷ, ಪುತ್ತೂರು ಡಾಕ್ಟರ್ಸ್ ಫೋರಮ್
ಗಣೇಶ್ ಎನ್. ಕಲ್ಲರ್ಪೆ