Advertisement

ಕೆಲಸ ಮಾಡುವ ಸೇವಕ ಬೇಕೋ, ಆಳುವ ನಾಯಕ ಬೇಕೋ: ಉಪೇಂದ್ರ

09:52 PM Apr 07, 2019 | Lakshmi GovindaRaju |

ರಾಮನಗರ: ಮತದಾರರಿಗೆ ಕೆಲಸ ಮಾಡುವ ಒಬ್ಬ ಸೇವಕ ಬೇಕಾದರೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿ, ಇಂದು ನಮಗೆ ನಮ್ಮ ಕೆಲಸ ಮಾಡುವ ಸೇವಕರ ಅಗತ್ಯವಿದೆಯೇ ಹೊರತು, ಆಳುವ ನಾಯಕರು ಅಲ್ಲ ಎಂದು ಉತ್ತಮ ಪ್ರಜಾಕಿಯ ಪಕ್ಷದ ವರಿಷ್ಠ ಹಾಗೂ ಚಿತ್ರನಟ ಉಪೇಂದ್ರ ಹೇಳಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಮಂಜುನಾಥ್‌ ಪ್ರಜಾ ಸೇವಕರನ್ನಾಗಿ ಮತದಾರರು ನಿಯೋಜಿಸಬೇಕು. ಹಾಗೊಮ್ಮೆ ಅವರು ಜನರ ನಿರೀಕ್ಷೆಗಳಂತೆ ಕಾರ್ಯನಿರ್ವಹಿಸದಿದ್ದರೆ ತಾವೇ ಸ್ವತಃ ತಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಪ್ರತಿಭಟಿಸುವುದಾಗಿ ಭರವಸೆ ನೀಡಿದರು.

ಸೇವಕರನ್ನು ಆಯ್ಕೆ ಮಾಡಿ: ಬ್ರಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈಗ ಆಡಳಿತದಲ್ಲಿ ರಾಜಕೀಯದವರು ಕುಳಿತಿದ್ದಾರೆ. ಇವರ ತೋಳ್ಬಲ, ಹಣಬಲ ಇದೆ. ಹೀಗಾಗಿ ಇವರ ವಿರುದ್ಧ ಹೋರಾಡಲು ಸಾಧ್ಯವಿಲ್ಲ. 72 ವರ್ಷಗಳಿಂದ ರಾಜಕೀಯ ನಾಯಕರನ್ನು ಜನ ನೋಡಿದ್ದಾಗಿದೆ. ಸಂಪೂರ್ಣ ಬದಲಾವಣೆ ಬೇಕಾಗಿದೆ. ಜನರಿಗೆ ಪ್ರಜಾಪ್ರಭುತ್ವದ ಶಕ್ತಿ ನೀಡಬೇಕಾಗಿದೆ. ಅಲ್ಲದೇ, 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದು ಬಂದರೆ ಪ್ರಜಾ ಕಾರ್ಮಿಕರಾಗಿ ದುಡಿಯುತ್ತಾರೆ ಎಂದು ಭರವಸೆ ನೀಡಿದರು.

ಪ್ರಣಾಳಿಕೆ ಇಲ್ಲ: ಉತ್ತಮ ಪ್ರಜಾಕೀಯ ಪಕ್ಷದ ವತಿಯಿಂದ ಸೇವಕರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ತಮ್ಮ ಪಕ್ಷದಿಂದ ಯಾವ ಪ್ರಣಾಳಿಕೆ ಹೊರ ತಂದಿಲ್ಲ, ಸುಳ್ಳು, ಪೊಳ್ಳು ಭರವಸೆ ನೀಡುತ್ತಿಲ್ಲ. ಜನರು ಸಲ್ಲಿಸುವ ಬೇಡಿಕೆಗಳೇ ತಮ್ಮ ಪಕ್ಷದ ಪ್ರಣಾಳಿಕೆ. ಜನರ ಬೇಡಿಕೆಗಳನ್ನೇ ತಮ್ಮ ಪಕ್ಷ “ಮೈಕ್ರೋ ಮ್ಯಾನಿಫೆಸ್ಟೊ’ ಆಗಿ ಪರಿಗಣಿಸುವುದಾಗಿ ಹೇಳಿದರು.

ಖಾಸಗಿ ಕಂಪನಿಗಳು ತಮ್ಮ ವ್ಯವಹಾರಕ್ಕೆ ಟಾರ್ಗೆಟ್‌ ನಿಗದಿ ಮಾಡಿಕೊಳ್ಳುತ್ತಾರೆ. ಜನರ ಬೇಡಿಕೆ ಈಡೇರಿಸುವುದೇ ಪ್ರಜಾ ಸೇವಕರ ಟಾರ್ಗೆಟ್‌ ಹೀಗಾಗಿ ಪ್ರಣಾಳಿಕೆ ಇಲ್ಲ ಎಂದರು. ಇತರ ಪಕ್ಷಗಳಂತೆ ತಮ್ಮ ಪಕ್ಷದ ಅಭ್ಯರ್ಥಿಗಳು ಸಹ ಗೆಲ್ಲಲೇ ಬೇಕು ಎಂದಿದ್ದರೆ, ತಮ್ಮ ಸ್ಟ್ರಾಟಜಿಗಳು ಬದಲಾಗುತ್ತಿದ್ದವು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉಪೇಂದ್ರ ಪ್ರತಿಕ್ರಿಯಿಸಿದರು.

Advertisement

ಸಂಪೂರ್ಣ ಬದಲಾದ ವ್ಯವಸ್ಥೆಗೆ ಆದ್ಯತೆ: ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸಂಪೂರ್ಣ ಬದಲಾಯಿಸಬೇಕಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನವನ್ನು ಯಥೇಚ್ಚವಾಗಿ ಬಳಸಿಕೊಳ್ಳಲು ಅವಕಾಶವಿದೆ. ಆಡಳಿತಗಾರರು ತಮ್ಮ ಹೊಣೆಗಾರಿಕೆ ನಿರೂಪಿಸಬೇಕಾಗಿದೆ. ಜನರೇ ಹೇಳುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕಾಗಿದೆ ಎಂದರು.

ನೀವೇಕೆ ಸ್ಪರ್ಧಿಯಲ್ಲ?: ವ್ಯವಸ್ಥೆಯ ಸಂಪೂರ್ಣ ಬದಲಾವಣೆಗೆ ಮುಂದಾಗಿರುವ ನೀವು, ಚುನಾವಣೆಯಲ್ಲಿ ಸ್ಪರ್ಧಿಸಿಲ್ಲವೇಕೆ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಉಪೇಂದ್ರ, 28 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮತ್ತು ತಮ್ಮ ಪಕ್ಷದ ಉದ್ದೇಶಗಳ ಬಗ್ಗೆ ಪ್ರಚಾರ ಮಾಡುವ ದೊಡ್ಡ ಹೊಣೆ ತಮ್ಮ ಮೇಲಿದೆ. ಹೀಗಾಗಿ ತಾವು ಚುನಾವಣೆಗೆ ನಿಂತಿಲ್ಲ ಎಂದರು. ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಪ್ರಕಟಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ತಮ್ಮ ಬಳಿ ಹಣ ಇಲ್ಲ, ಕೇವಲ ಕರಪತ್ರ ಕೊಟ್ಟು ಮನವಿ ಮಾಡಿಕೊಳ್ಳುತ್ತೇವೆಂದರು.

ಜನರ ಮೇಲೆ ಒತ್ತಡವಿಲ್ಲ: ನಿಮ್ಮ ಆಲೋಚನೆಗಳನ್ನು ಜನರ ಮೇಲೆ ಹೇರುತ್ತಿದ್ದೀರ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ತಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸಿ ಎಂಬ ಒತ್ತಡವನ್ನು ತಾವು ಹೇರುತ್ತಿಲ್ಲ. ತಮಗೊಬ್ಬ ಸೇವಕ ಬೇಕಿದ್ದರೆ ಆರಿಸಿ ಎಂದಷ್ಟೇ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಗೆದ್ದರೆ ತಲೆ ತಗ್ಗಿಸಿ ಕೆಲಸ ಮಾಡ್ತೀವಿ: ತಮ್ಮ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ ತಲೆತಗ್ಗಿಸಿ ಕೆಲಸ ಮಾಡುವುದಾಗಿ ತಿಳಿಸಿ, ಸೋತರೆ ತಲೆ ಎತ್ತಿ ನಡೆಯುತ್ತೇವೆ. ತಮ್ಮ ಪಕ್ಷದ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಜೆಗಳು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. 200 ಮತ ಬಂದರೂ ಅಷ್ಟು ಮಂದಿಯನ್ನು ಬದಲಾಯಿಸಿರುವ ಸಂತಸ ತಮ್ಮ ಪಾಲಿಗಿರುತ್ತದೆ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್‌ ಮಾತನಾಡಿ, ವರ್ಷವಿಡೀ ದುಡಿದ ಹಣ ಮಕ್ಕಳ ಶಾಲೆ ಶುಲ್ಕ ಭರಿಸಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿಗಳು ಹಲವಾರಿವೆ. ಎಲ್ಲವನ್ನು ಬದಲಾಯಿಸುವ ಉದ್ದೇಶ. ಹೀಗಾಗಿ ಉತ್ತಮ ಪ್ರಜಾಕಿಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದಾಗಿ ಹೇಳಿದರು. ಸರ್ಕಾರ ಎಂಪಿಗಳಿಗೆ ನೀಡುವ ಸಂಬಳಕ್ಕೆ ಸೇವೆ ಮಾಡಲು ಬಂದಿರುವುದಾಗಿ ಹೇಳಿದರು.

ಭ್ರಷ್ಟಾಚಾರ ಮುಕ್ತಿಗೊಳಿಸಲು ಲೋಕಪಾಲ್‌ ವ್ಯವಸ್ಥೆ ಜಾರಿಗೆ ಬಂದರೆ ಲೋಕಪಾಲದಲ್ಲಿರುವ ಅಧಿಕಾರಿಗಳು ಭ್ರಷ್ಟಾಚಾರ ಮಾಡುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಏನಿದೆ?. ಗೂಗಲ್‌ನಲ್ಲಿ ಅದೆಷ್ಟೋ ಮಾಹಿತಿ ಸಿಗುವುದಾದರೆ, ನಮ್ಮ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲು ಆರ್‌ಟಿಐ ಕಾಯ್ದೆ ಬೇಕಾ. ಟೆಕ್ನಾಲಜಿ ಬಳಸಿ ವ್ಯವಸ್ಥೆಯನ್ನು ಪಾರದರ್ಶಕವಾಗಿಸುವುದು ತಮ್ಮ ಉದ್ದೇಶ.
-ಉಪೇಂದ್ರ, ನಟ

Advertisement

Udayavani is now on Telegram. Click here to join our channel and stay updated with the latest news.

Next