Advertisement

ನಾಡಗೀತೆಯಂತೆ ಪ್ರತ್ಯೇಕ ನಾಡಧ್ವಜವೂ ಬೇಕು: ಸಿಎಂ

09:08 AM Nov 25, 2017 | Team Udayavani |

ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ: “ಮಾತೃಭಾಷೆಯ ಶಿಕ್ಷಣ ಹಾಗೂ ಕರ್ನಾಟಕ ಪ್ರತ್ಯೇಕ ನಾಡಧ್ವಜ ಹೊಂದಬೇಕೆಂಬ ವಿಚಾರದಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Advertisement

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮಾತೃಭಾಷೆಯ ಶಿಕ್ಷಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗೆಗೆ ಇರುವ ಕಾನೂನು ತೊಡಕನ್ನು ನಿವಾರಿಸಲು ವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುವುದಾಗಿ ಹೇಳಿದರು.

ಭಾರತದ ಒಕ್ಕೂಟ ತತ್ವವನ್ನು ಒಪ್ಪಿಕೊಂಡು ಕನ್ನಡದ ಅನನ್ಯತೆಯನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ. ಆದುದ ರಿಂದಲೇ ನಾಡಗೀತೆ ಇರುವಂತೆ, ನಾಡಧ್ವಜವೂ ಇರಬೇಕು. ನಾಡಗೀತೆ-ರಾಷ್ಟ್ರಗೀತೆ, ನಾಡಧ್ವಜ- ರಾಷ್ಟ್ರಧ್ವಜ ಇವೆರಡೂ ಪರಸ್ಪರ ಪೂರಕ, ಪರಸ್ಪರ ವಿರೋಧಿ ಅಲ್ಲ. ರಾಷ್ಟ್ರಕವಿ ಕುವೆಂಪು ಅವರು “ಜಯ ಭಾರತ ಜನನಿಯ ತನುಜಾತೆ; ಜಯಹೇ zಕರ್ನಾಟಕ ಮಾತೆ’ ಎಂದು ಹಾಡಿದ್ದಾರೆ. ಈ ಆದರ್ಶಕ್ಕೆ ನಾವು ಬದ್ಧರಾಗಿ ದ್ದೇವೆ. ಇದನ್ನು ವಿರೋಧಿಸುವುದು ನಾಡು-ನುಡಿಗೆ ತೋರುವ ಅಗೌರವವಾಗುತ್ತದೆ ಎಂದರು.

ಕನ್ನಡದಿಂದ ರಾಜಕೀಯ ಮಾಡಲ್ಲ: ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ. ಅದು ನನ್ನ ಬದುಕು. ನಾನು ಹುಟ್ಟು ಕನ್ನಡ ಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಸಾರ್ವತ್ರಿಕ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯವರೆಗೆ ನೆಲ-ಜಲ-ನುಡಿ ಬಗ್ಗೆ ಎಂದೂ ರಾಜಿ ಮಾಡಿಕೊಂಡಿಲ್ಲ, ರಾಜಕೀಯವನ್ನೂ ಮಾಡಿಲ್ಲ  ಎಂದು ಹೇಳಿದರು.

ಮಾನವ ಧರ್ಮ: ಧರ್ಮ ಎಂಬುದು ಸಂಕುಚಿತ ಅರ್ಥಕ್ಕೆ ಸೀಮಿತಗೊಳ್ಳದೆ, ಧರ್ಮ- ಮಾನವಧರ್ಮ ಎಂದು ನಂಬಿದ ಪರಂಪರೆ ನಮ್ಮದು. ದೇವರು ಗುಡಿಯಲ್ಲಿ ಇಲ್ಲ, ಮನುಷ್ಯನ ಅಂತರಂಗದಲ್ಲಿದ್ದಾನೆ, ದೇಹವೇ ದೇಗುಲ ಎಂದು ವಚನಕಾರರು ಘೋಷಿಸಿದರು. ದೇಹವೇ ದೇವಾಲಯ ಎಂದಾಗ, ಎಲ್ಲಾ ಮನುಷ್ಯರು ಅವರ ದೇಹವೂ ದೇವನ ಆವಾಸ ಸ್ಥಾನವಾಗುತ್ತದೆ. ಅಲ್ಲಿ ಒಬ್ಬರನ್ನು ಮತ್ತೂಬ್ಬರು ಹಿಂಸಿಸಲು ಅವಕಾಶವಿಲ್ಲ ಎಂದು ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌, ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಚಿವರು, ಶಾಸಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.

ಅಕ್ಷರ ಜಾತ್ರೆಯಲ್ಲಿ ಕಳ್ಳರ ಕೈ ಚಳಕ
ಸಾಹಿತ್ಯ ಸಮ್ಮೇಳನದ ಮೊದಲ ದಿನವೇ ತಮ್ಮ ಕೈಚಳಕ ತೋರಿರುವ ಖದೀಮರು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ರವಿಕುಮಾರ್‌ ಎಂಬುವರ ಬಳಿಯಿದ್ದ 90 ಸಾವಿರ ರೂ.ನಗದು ಹಾಗೂ ಒಂದು ಚಿನ್ನದ ಉಂಗುರ ಕಳೆದುಕೊಂಡಿದ್ದು, ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಈ ಘಟನೆ ನಡೆದಿದೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ನಗರಕ್ಕಾಗಮಿಸಿದ್ದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಸಾರ್ವಜನಿಕರಿಗಾಗಿ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಊಟಕ್ಕೆಂದು ತೆರಳಿದ ಸಂದರ್ಭದಲ್ಲಿ ತಮ್ಮ ಕೈಚಳಕ ತೋರಿರುವ ಕಳ್ಳರು, ನಗದು ಹಾಗೂ ಚಿನ್ನದ ಉಂಗುರ ದೋಚಿದ್ದಾರೆ. 

ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next