Advertisement

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

07:35 PM Oct 20, 2021 | Team Udayavani |

ಕಾರ್ಕಳ: ನಗರದ‌ ಅಭಿವೃದ್ಧಿ ಜತೆಗೆ ಹೊರವಲಯದ ಜೋಡುರಸ್ತೆ ಉಪನಗರ ವಾಗಿ ಬೆಳೆಯುತ್ತಿದೆ. ಜನಸಂಚಾರ, ವಾಹನ ಓಡಾಟವೂ ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಭದ್ರತೆಯೂ ಇಲ್ಲಿ ಆವಶ್ಯಕ. ಹೀಗಾಗಿ ಜಂಕ್ಷನ್‌ಗೆ ಸಂಬಂಧಪಟ್ಟವರು ಸುರಕ್ಷತೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಹಿಂದೆಯೂ ಇತ್ತು. ಈಗ ಅದು ಗಟ್ಟಿ ಧ್ವನಿಯಾಗಿದೆ.

Advertisement

ಜೋಡುರಸ್ತೆ ಮೂಲಕ ಕಾರ್ಕಳ-ಉಡುಪಿ ಹೆದ್ದಾರಿ ಹಾದುಹೋಗಿದ್ದು, ಜತೆಗೆ ಹೆಬ್ರಿ ಭಾಗದಿಂದ ಆಗಮಿಸುವ ಪ್ರಮುಖ ರಸ್ತೆ ಜೋಡುರಸ್ತೆ ಜಂಕ್ಷನ್‌ನಲ್ಲಿ ಸೇರುವುದರಿಂದ ದಿನದ ಎಲ್ಲ ಹೊತ್ತು ಸಹಸ್ರಾರು ವಾಹನಗಳು ಓಡಾಡುತ್ತಲೇ ಇರುತ್ತವೆ.

ಅಪಾಯಕಾರಿ ಜಂಕ್ಷನ್‌ !
ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ವಾಹನ ಸಾಗುವುದಕ್ಕೆ ಯಾವುದೇ ಸಿಗ್ನಲ್‌ ಇಲ್ಲದೆ ಇರುವುದರಿಂದ ಚಾಲಕರು, ವಾಹನ ಸವಾರರು, ಕಾಲ್ನಡಿಗೆಯಲ್ಲಿ ತೆರಳುವವರು ಗೊಂದಲಕ್ಕೆ ಈಡಾಗುತ್ತಿರುತ್ತಾರೆ. ಜತೆಗೆ ಅಪಘಾತಗಳು ಇಲ್ಲಿ ನಡೆಯುತ್ತಿರುತ್ತದೆ. ನಿತ್ಯವೂ ಸಂಭವಿಸುತ್ತಿರುವ ಅಪಘಾತಗಳು ಸಣ್ಣ ಮಟ್ಟದ್ದಾಗಿರುವುದರಿಂದ ಸಂಬಂಧಪಟ್ಟ ಸ್ಥಳೀಯಾಡಳಿತ, ಪೊಲೀಸ್‌ ಇಲಾಖೆ, ಹೆದ್ದಾರಿ ಇಲಾಖೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಜೋಡುರಸ್ತೆ ಜಂಕ್ಷನ್‌ನಲ್ಲಿ ಇಂದಿನ ದಿನಗಳಲ್ಲಿ ಹೊರಠಾಣೆಯ ಆವಶ್ಯಕತೆ ಇದೆ. ಠಾಣೆ ತೆರೆದು ಸಿಬಂದಿ ನಿಯೋಜಿಸಬೇಕು, ಹೆಚ್ಚು ವಾಹನ ದೊತ್ತಡ ಇದ್ದಾಗ ಪೊಲೀಸರು ಎಲ್ಲ ರಸ್ತೆಗಳಲ್ಲೂ ಕ್ರಮವಾಗಿ ವಾಹನಗಳನ್ನು ಬಿಡುವುದಕ್ಕೆ ಅನುಕೂಲವಾಗುತ್ತದೆ. ಜತೆಗೆ ಜನರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ರಸ್ತೆ ದಾಟುವ ವೇಳೆಯೂ ಸಹಕಾರಿಯಾಗಲಿದೆ.

ಇದನ್ನೂ ಓದಿ:ಸಫಾಯಿ ಕರ್ಮಚಾರಿ ಸಾವು; ಸಾಂತ್ವನ ಹೇಳಲು ಬಂದ ಪ್ರಿಯಾಂಕಾಗೆ ತಡೆ

Advertisement

ಮಾರ್ಗಸೂಚಿ ಬೋರ್ಡ್‌ ಎಲ್ಲಿದೆ?
ಮಲೆನಾಡು ಭಾಗದಿಂದ ಕರಾವಳಿ ಪ್ರವೇಶಿಸಿ, ಅನೇಕ ಪ್ರೇಕ್ಷಣೀಯ ಸ್ಥಳ, ಪ್ರವಾಸಿ ಮಂದಿರಗಳನ್ನು ಸಂದರ್ಶಿಸುವವರು ಈ ಮಾರ್ಗವಾಗಿ ತೆರಳುತ್ತಿರುತ್ತಾರೆ. ಉಡುಪಿ, ಹೆಬ್ರಿ ಭಾಗಕ್ಕೆ ರಸ್ತೆ ವಿಭಜಿಸುವ ಹೆಬ್ಟಾಗಿಲಿನಲ್ಲಿ ಕನಿಷ್ಠ ಒಂದು ಮಾರ್ಗಸೂಚಿ ಬೋರ್ಡ್‌ ಕಾಣುವ ರೀತಿಯಲ್ಲಿ ಇಲ್ಲ.

ತುಕ್ಕು ಹಿಡಿದ ಮಾಹಿತಿ ಕಮಾನು
ಬಾಹುಬಲಿ ಮಸ್ತಾಕಾಭಿಷೇಕದ ವೇಳೆ 20 ಲಕ್ಷ ರೂ. ವೆಚ್ಚದಲ್ಲಿ ಮಾರ್ಗಸೂಚಿಯ ಕಮಾನು ಸಿದ್ಧಪಡಿಸಲಾಗಿತ್ತು. ಆದರೆ ಇದು ಜೋಡುರಸ್ತೆಯ ಪೆಟ್ರೋಲ್‌ ಪಂಪ್‌ ಹಿಂಭಾಗ ವರ್ಷಗಳಿಂದ ತುಕ್ಕು ಹಿಡಿದು ಬಿದ್ದಿದೆ. ಜಂಕ್ಷನ್‌ ಪ್ರವೇಶಿಸುವಲ್ಲಿ ಕಮಾನು ಬೋರ್ಡ್‌ ಹಾಕಿದರೆ ಉಡುಪಿ, ಹೆಬ್ರಿ ಕಡೆಗೆ ತೆರಳುವವರಿಗೆ ಅನುಕೂಲವಾಗುತ್ತದೆ.

ಹೊರಠಾಣೆ ಆವಶ್ಯಕ
ಜೋಡುರಸ್ತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದು ಪುರಸಭೆ, ಕುಕ್ಕುಂದೂರು ಗ್ರಾ.ಪಂ. ಗಡಿಭಾಗದ ಅಂಚಿನಲ್ಲಿದ್ದು ಅರ್ಧಭಾಗ ಗ್ರಾ.ಪಂ.ಗೆ ಸೇರುತ್ತದೆ. ಪ್ರಮುಖ ಮಳಿಗೆಗಳು ಇಲ್ಲಿ ತೆರೆದಿದ್ದು, ವ್ಯಾಪಾರ ವಹಿವಾಟು ಹೆಚ್ಚಾಗಿ ಜನ-ವಾಹನ ಸಂದಣಿ ಹೆಚ್ಚಿದೆ. ಇನ್ನಷ್ಟು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ನಗರ ಬೆಳೆದಂತೆಲ್ಲ ಅಲ್ಲಿ ಮೂಲ ಸೌಕರ್ಯ ಒದಗಿಸುವ ಕಡೆಗೂ ಗಮನ ಹರಿಸಬೇಕಿದೆ. ಬಹುಮುಖ್ಯವಾಗಿ ಜೋಡುರಸ್ತೆ ಪರಿಸರದಲ್ಲಿ ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿಗಳಿದ್ದು, ಸಿಸಿ ಕೆಮರಾ, ಪೊಲೀಸ್‌ ಹೊರಠಾಣೆ ಇತ್ಯಾದಿ ನಿರ್ಮಿಸಿ, ಎಲ್ಲ ಚಟುವಟಿಕೆ, ಚಲನವಲನದ ಮೇಲೆ ಹದ್ದಿನ ಕಣ್ಣು ಇರಿಸಬೇಕಿದೆ.

ಅಪರಾಧ ತಡೆಗೆ ಸಹಕಾರಿ
ಜೋಡುರಸ್ತೆ ಕಾರ್ಕಳದ ಹೆಬ್ಟಾಗಿಲು, ಉಡುಪಿ, ಹೆಬ್ರಿ ಭಾಗದಿಂದ ನಗರವನ್ನು ಪ್ರವೇಶಿಸುವ ದ್ವಾರವಿದು. ನಗರದೊಳಗೆ ನಡೆಯುವ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರು ಇದೇ ಜಂಕ್ಷನ್‌ ಮೂಲಕ ಪರಾರಿಯಾಗಲು ಯತ್ನಿಸು ತ್ತಾರೆ. ಕುಕೃತ್ಯ ನಡೆಸಿದವರನ್ನು ಅಡ್ಡ ಹಾಕಲು ಇದೇ ಜಂಕ್ಷನ್‌ ಪೊಲೀಸರಿಗೆ ನೆರವಾಗುತ್ತದೆ. ಇಲ್ಲಿ ಪೊಲೀಸ್‌ ಹೊರಠಾಣೆ ನಿರ್ಮಿಸಿ ಹಗಲು-ರಾತ್ರಿ ಕಾವಲು ನಿರತರಾದಲ್ಲಿ ಅಪರಾಧಿಗಳ ಪತ್ತೆ ಜತೆಗೆ ನಗರದೊಳಗಿನ ಬಹುತೇಕ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಬೀಳುತ್ತದೆ.

ಮೇಲಧಿಕಾರಿ ಗಮನಕ್ಕೆ
ಹೊರಠಾಣೆ ತೆರೆಯುವ ಬಗ್ಗೆ ಈ ವರೆಗೆ ಪ್ರಸ್ತಾವನೆಯಲ್ಲಿ ಇಲ್ಲ, ಈ ಪ್ರದೇಶ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವುದರಿಂದ ಭೌಗೋಳಿಕ ಸ್ಥಿತಿಗತಿ ಅಧ್ಯಯನ ನಡೆಸಿ, ಮೇಲಧಿಕಾರಿಗಳ ಗಮನಕ್ಕೆ ತರುವ
ಪ್ರಯತ್ನ ನಡೆಸುತ್ತೇನೆ.
-ವಿಜಯಪ್ರಸಾದ್‌, ಡಿವೈಎಸ್ಪಿ ಕಾರ್ಕಳ

ಪೊಲೀಸ್‌ ಚೌಕಿ ನಿರ್ಮಿಸಿ ಕೊಡಲು ಸಿದ್ಧ
ಜೋಡುರಸ್ತೆಯಲ್ಲಿ ಅಪಘಾತ ತಡೆ ಜತೆಗೆ ಭದ್ರತೆ ಬಹುಮುಖವಾಗಿ ಬೇಕಿದೆ. ಅವಕಾಶ ನೀಡಿದರೆ ಲಯನ್ಸ್‌ ಸಂಸ್ಥೆಯಿಂದ ಪೊಲೀಸ್‌ ಚೌಕಿ ನಿರ್ಮಿಸಿ ಕೊಡಲು ಸಿದ್ಧರಿದ್ದೇವೆ.
– ರಾಜೇಶ್‌ ಶೆಣೈ, ಲಯನ್ಸ್‌ ಅಧ್ಯಕ್ಷ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next