Advertisement

ಬಜಗೋಳಿ ಪೇಟೆಗೆ ಬೇಕಿದೆ ವ್ಯವಸ್ಥಿತ ಪಾರ್ಕಿಂಗ್‌ ವ್ಯವಸ್ಥೆ

12:17 AM Oct 01, 2019 | Team Udayavani |

ಬಜಗೋಳಿ (ಪಳ್ಳಿ): ದಿನೇ ದಿನೇ ಹೆಚ್ಚುತ್ತಿರುವ ವಾಹನಗಳು ಹಾಗೂ ಜನಸಂದಣಿಯ ಕಾರಣ ಬಜಗೋಳಿ ಪೇಟೆಗೆ ವ್ಯವಸ್ಥಿತ ಪಾರ್ಕಿಂಗ್‌ ವ್ಯವಸ್ಥೆ ಅಗತ್ಯವಿದೆ.

Advertisement

ಕೇರಳದಿಂದ ಸೋಲಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌-13 ಮತ್ತು ಕುಂದಾಪುರದಿಂದ ಧರ್ಮಸ್ಥಳಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿ ಎಸ್‌ಎಚ್‌ 69 ಬಜಗೋಳಿ ಪೇಟೆಯ ಮೂಲಕವೇ ಹಾದು ಹೋಗುತ್ತದೆ. ಧರ್ಮಸ್ಥಳ, ಶೃಂಗೇರಿ, ಹೊರನಾಡು ಮುಂತಾದ ಯಾತ್ರಾ ಸ್ಥಳಗಳಿಗೆ ತೆರಳುವವರೂ ಬಜಗೋಳಿ ಮೂಲಕ ಸಂಚರಿಸುವುದರಿಂದ ಪೆಟೆಯಲ್ಲಿ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಸಂಕಷ್ಟಪಡುವಂತಾಗಿದೆ.

ಹೊಸ್ಮಾರ್‌, ನೆಲ್ಲಿಕಾರ್‌, ನಲ್ಲೂರು, ಮುಡಾರು, ಮಾಳ, ಹುಕ್ರಟ್ಟೆ, ಮಲ್ಲಾರ್‌, ಕಡಾರಿ, ಕೆರ್ವಾಶೆ, ಮಿಯ್ನಾರು ಭಾಗದ ಸ್ಥಳೀಯರು ದೈನಂದಿನ ವ್ಯವಹಾರ ಗಳಿಗೆ ಬಜಗೋಳಿ ಪೇಟೆಯನ್ನೇ ಅವಲಂಬಿಸಿದ್ದಾರೆ. ಬಸ್‌ಗಳೂ ಪೇಟೆ ಮೂಲಕವೇ ಹಾದುಹೋಗುತ್ತಿದ್ದು, ರಸ್ತೆಗಳಲ್ಲಿಯೇ ವಾಹನಗಳನ್ನು ನಿಲ್ಲಿಸುವ ಕಾರಣ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

ಪ್ರತೀ ಗುರುವಾರ ನಡೆಯುವ ವಾರದ ಸಂತೆಯ ದಿನ ಎಂದಿನಿಗಿಂತ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಸುತ್ತಲ 7-8 ಗ್ರಾಮಗಳ ಕೃಷಿಕರು ಹಾಗೂ ವ್ಯಾಪರಸ್ಥರು ಕೃಷಿ ಉತ್ಪನ್ನಗಳನ್ನು, ತಾವು ಬೆಳೆದ ತರಕಾರಿಗಳನ್ನು ಮಾರಲೆಂದು ಬರುವ ಕಾರಣ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ತೊಂದರೆ ಆಗುತ್ತಿದೆ.

ನಲ್ಲೂರು ಹಾಗೂ ಮುಡಾರು ಗ್ರಾ.ಪಂ. ಕಚೇರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ನ್ಯಾಯಬೆಲೆ ಅಂಗಡಿ, ಶಾಲಾ ಕಾಲೇಜುಗಳು ಬಜಗೋಳಿ ಪೇಟೆಯಲ್ಲಿಯೇ ಇರುವುದರಿಂದ ಇಲ್ಲಿಗೆ ಬರುವವರು ತಮ್ಮ ವಾಹನ ಗಳನ್ನು ರಸ್ತೆ ಬದಿಯೇ ನಿಲ್ಲಿಸಬೇಕಾದ ಸ್ಥಿತಿ ಇದೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಪಾರ್ಕಿಂಗ್‌ಗೆ ಸ್ಥಳ ಗುರುತಿಸುವ ಜತೆಗೆ ಸೂಕ್ತ ವ್ಯವಸ್ಥೆಕಲ್ಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಬೇಕೆಂಬುದು ಸ್ಥಳೀಯರ ಆಗ್ರಹ.

Advertisement

ಅಧಿಕಾರಿಗಳ ಗಮನ ಸೆಳೆಯಲಾಗುವುದು
ಬಜಗೋಳಿ ಪೇಟೆಯಲ್ಲಿನ ಪಾರ್ಕಿಂಗ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತದಿಂದ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಸೂಕ್ತ ಕ್ರಮಕೈಗೊಳ್ಳಲು ಪ್ರಯತ್ನಿಸಲಾಗುವುದು.
-ಗೀತಾ ಪಾಟ್ಕರ್‌,ಮುಡಾರು ಗ್ರಾ.ಪಂ.ಅಧ್ಯಕ್ಷರು

ಪಾರ್ಕಿಂಗ್‌ ವ್ಯವಸ್ಥೆ ಅತ್ಯಗತ್ಯ
ಬೆಳೆೆಯುತ್ತಿರುವ ಬಜಗೋಳಿ ಪೇಟೆಗೆ ಪಾರ್ಕಿಂಗ್‌ ವ್ಯವಸ್ಥೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಲ್ಲಿ ಪ್ರಯತ್ನಿಸಲಾಗುವುದು.
-ಲೋಕೇಶ್‌ ಶೆಟ್ಟಿ,
ನಲ್ಲೂರು ಗ್ರಾ.ಪಂ.ಅಧ್ಯಕ್ಷರು

ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಪಾರ್ಕಿಂಗ್‌ ವ್ಯವಸ್ಥೆ ಕುರಿತು ಸ್ಥಳೀಯಾಡಳಿತದೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸದಾಶಿವ ಮೂಲ್ಯ,
ನಲ್ಲೂರು ಗ್ರಾ.ಪಂ.ಪಿಡಿಒ

-ಸಂದೇಶ್‌ಕುಮಾರ್‌ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next