ಸಾವಿನ ದಿನಗಳನ್ನು ಎಣಿಸುತ್ತಿದ್ದ ಮಹಾರಾಜ ಧೀರಸೇನನಿಗೆ ತಾನು ಸಾಯುತ್ತೇನೆ ಎಂಬುದರ ಬಗ್ಗೆ ಒಂದು ಚೂರೂ ಚಿಂತೆ ಇರಲಿಲ್ಲ. ಆದರೆ ತನ್ನ ಉತ್ತರಾಧಿಕಾರಿಗಳಾಗಿ ರಾಜ್ಯವನ್ನು ಆಳಬೇಕಾಗಿರುವ ತನ್ನ ಮಕ್ಕಳ ಪರಿಸ್ಥಿತಿ ನೋಡಿ ಅವನು ಚಿಂತೆಗೀಡಾಗಿದ್ದ…
ದಶದಿಕ್ಕುಗಳಲ್ಲೂ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ ಮಹಾರಾಜ ಧೀರಸೇನ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ. ಕೆಲವೇ ದಿನಗಳಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗುವುದರಲ್ಲಿತ್ತು. ಅವನಿಗೆ ಇಬ್ಬರು ಪತ್ನಿಯರು. ಹಿರಿಯವಳು ಸೂರ್ಯವತಿ, ಕಿರಿಯವಳು ಚಂದ್ರವತಿ. ಸೂರ್ಯವತಿಗೆ ಸೂರ್ಯಸೇನ ಎಂಬ ಮಗನಿದ್ದ. ಚಂದ್ರವತಿಗೆ ಚಂದ್ರಸೇನ ಎಂಬ ಮಗನಿದ್ದ. ಇವರಿಬ್ಬರೂ ಮಹಾರಾಜ ಧೀರಸೇನನಿಗೆ ಪ್ರೀತಿ ಪಾತ್ರ ಸುಪುತ್ರರಾಗಿದ್ದರು. ದುರದೃಷ್ಟವೆಂದರೆ ಇವರಿಬ್ಬರೂ ಅಂಗವಿಕಲರಾಗಿದ್ದರು. ಹಿರಿಯ ಮಗ ಸೂರ್ಯಸೇನ ಹುಟ್ಟು ಕುರುಡ. ಕಿರಿಯ ಮಗ ಕುಂಟನಾಗಿದ್ದ.
ಸಾವಿನ ದಿನಗಳನ್ನು ಎಣಿಸುತ್ತಿದ್ದ ಮಹಾರಾಜ ಧೀರಸೇನನಿಗೆ ತಾನು ಸಾಯುತ್ತೇನೆ ಎಂಬುದರ ಬಗ್ಗೆ ಒಂದು ಚೂರೂ ಚಿಂತೆ ಇರಲಿಲ್ಲ. ಆದರೆ ತನ್ನ ಉತ್ತರಾಧಿಕಾರಿಗಳಾಗಿ ರಾಜ್ಯವನ್ನು ಆಳಬೇಕಾಗಿರುವ ತನ್ನ ಮಕ್ಕಳ ಪರಿಸ್ಥಿತಿ ನೋಡಿ ಅವನು ಚಿಂತೆಗೀಡಾಗಿದ್ದ. ತನ್ನ ಕೊನೆಯಾಸೆ ಎಂಬಂತೆ ಮಕ್ಕಳಿಬ್ಬರನ್ನೂ ಬಳಿಗೆ ಬರಮಾಡಿಕೊಂಡ ಮಹಾರಾಜ ಧೀರಸೇನನು ಪ್ರೀತಿ ಮತ್ತು ದುಃಖದಿಂದ ಮಕ್ಕಳಿಬ್ಬರ ತಲೆ ನೇವರಿಸುತ್ತಾ ಹೇಳಿದ “ಮಕ್ಕಳೇ ನೀವಿಬ್ಬರೂ ಅಣ್ಣತಮ್ಮಂದಿರು. ರಾಮಲಕ್ಷ್ಮಣರಂತೆ ಇರಬೇಕು. ಕಣ್ಣಿಲ್ಲದ ನಿನ್ನ ಅಣ್ಣ ಸೂರ್ಯಸೇನನಿಗೆ ನೀನೇ ಕಣ್ಣಾಗಿರಬೇಕು. ಕಾಲಿಲ್ಲದ ನಿನ್ನ ತಮ್ಮ ಚಂದ್ರಸೇನನಿಗೆ ನೀನೇ ಕಾಲುಗಳಾಗಬೇಕು. ನೀವಿಬ್ಬರೂ ಒಬ್ಬರಿಗೊಬ್ಬರು ಕಣ್ಣು- ಕಾಲುಗಳಾಗಿ ಪ್ರಜಾಪಾಲಕರಾಗಿ ಈ ಸಾಮ್ರಾಜ್ಯವನ್ನು ಕಾಪಾಡಬೇಕು. ಯಾವುದೇ ತೊಂದರೆಯಾಗದಂತೆ ನಿಮ್ಮಿಬ್ಬರ ಕೈಯಲ್ಲಿ ರಾಜ್ಯಭಾರ ಮಾಡಿಸುವಂತಹ ಮಹಾ ಮೇಧಾವಿ ಮಂತ್ರಿಯೊಬ್ಬನನ್ನು ನಿಮಗೆ ನಾನು ಕೊಟ್ಟು ಹೋಗುತ್ತೇನೆ. ಇದೇ ನಾನು ತಂದೆಯಾಗಿ ನಿಮಗೆ ನೀಡುತ್ತಿರುವ ಕಾಣಿಕೆ.’ ಎಂದು ಮಕ್ಕಳಿಬ್ಬರಿಗೂ ಬುದ್ಧಿ ಹೇಳಿ ಧೈರ್ಯ ತುಂಬಿದ ಮಹಾರಾಜ ಧೀರಸೇನ.
ಮರುದಿನ ರಾಜ್ಯಕ್ಕೆ ಮೇಧಾವಿ ಮಂತ್ರಿಯೊಬ್ಬ ಬೇಕಾಗಿದ್ದಾನೆಂದು ಡಂಗುರ ಸಾರಲಾಯಿತು. ಬಹಳಷ್ಟು ಮಂದಿ ಸಂದರ್ಶನಕ್ಕೆ ಹಾಜರಾದರು. ಅವರೆಲ್ಲರಿಗೂ ಮಹಾರಾಜ ಧೀರಸೇನ ಪರೀಕ್ಷೆಯೊಂದನ್ನು ವಿಧಿಸಿದ. ಆಕಾಂಕ್ಷಿಗಳನ್ನು ಒಂದೆಡೆ ಸೇರಿಸಿ “ಅಲ್ಲಿ ನೋಡಿ, ಅದೊಂದು ಕತ್ತಲೆಯ ದೊಡ್ಡ ಕೋಣೆ. ಯಾವ ವಸ್ತುವಿನಿಂದಾದರೂ ಸರಿಯೇ ಅದರಿಂದ ಹತ್ತು ನಿಮಿಷಗಳಲ್ಲಿ ಕೋಣೆಯನ್ನು ತುಂಬಿಸಬೇಕು. ಆ ವ್ಯಕ್ತಿಗೆ ನನ್ನ ರಾಜ್ಯದ ಮಂತ್ರಿ ಸ್ಥಾನ ನೀಡುತ್ತೇನೆ’ ಎಂದ.
ಮಹಾರಾಜನ ಮಾತು ಕೇಳಿ ಸಂದರ್ಶನಕ್ಕೆ ಬಂದಿದ್ದವರೆಲ್ಲ “ಇದೊಂದು ಹುಚ್ಚು ಪರೀಕ್ಷೆ. ಮಹಾರಾಜನಿಗೆ ತಲೆಕೆಟ್ಟಿದೆ. ಇಷ್ಟೊಂದು ದೊಡ್ಡ ಕತ್ತಲೆಯ ಕೋಣೆಯನ್ನು ಹತ್ತು ನಿಮಿಷಗಳಲ್ಲಿ ಯಾವ ವಸ್ತುನಿಂದಾದರೂ ತುಂಬಿಸಲು ಸಾಧ್ಯವೆ?’ ಎಂದು ತಮ್ಮೊಳಗೇ ನಕ್ಕರು. ವಾಪಸ್ಸು ಹೋಗಲು ಮುಂದಾದರು. ಅವರಲ್ಲಿ ಒಬ್ಬ ಮಾತ್ರ ಅಲ್ಲಿಯೇ ಗಟ್ಟಿಯಾಗಿ ನಿಂತು ಕತ್ತಲೆಯ ದೊಡ್ಡ ಕೋಣೆಯನ್ನು ಹತ್ತು ನಿಮಿಷಗಳಲ್ಲಿ ನಾನು ತುಂಬಿಸುತ್ತೇನೆಂದು ಹೇಳಿದ. ಅಲ್ಲಿದ್ದವರೆಲ್ಲಾ ಆಶ್ಚರ್ಯದಿಂದ ಅವನತ್ತ ನೋಡಿದರು. ತಕ್ಷಣವೇ ಅವನು ಕತ್ತಲೆಯ ದೊಡ್ಡಕೋಣೆಯ ಮಧ್ಯದಲ್ಲಿ ಒಂದು ದೀಪವನ್ನು ಹಚ್ಚಿಟ್ಟ. ಒಂದು ಕ್ಷಣದಲ್ಲಿ ಇಡೀ ಕೋಣೆ ಬೆಳಕಿನಿಂದ ತುಂಬಿಕೊಂಡಿತು.
ಅವನ ಬುದ್ಧಿವಂತಿಕೆ ಮೆಚ್ಚಿದ ಮಹಾರಾಜ ಧೀರಸೇನ ಅವನಿಗೆ ಮಂತ್ರಿ ಪಟ್ಟ ನೀಡಿದ. ನಂತರ ತನ್ನ ಮಕ್ಕಳಿಬ್ಬರನ್ನೂ ಕರೆದು “ಈ ಮೇಧಾವಿ ಮಂತ್ರಿ ನಿಮ್ಮನ್ನೂ, ಮಕ್ಕಳಂತಿರುವ ನನ್ನ ಪ್ರಜೆಗಳನ್ನು, ನನ್ನ ಮಹಾಸಾಮ್ರಾಜ್ಯವನ್ನು ಕಾಪಾಡಲು ಅತ್ಯಂತ ಸಮರ್ಥನಿದ್ದಾನೆ’ ಎಂದು ನಿಶ್ಚಿಂತೆಯಿಂದ ಹೇಳಿದ. ಅವನ ಮನಸ್ಸು ನಿರಾಳವಾಗಿತ್ತು.
– ಬನ್ನೂರು ಕೆ. ರಾಜು