Advertisement

ಮಡಂತ್ಯಾರು-ಕೊಮಿನಡ್ಕ ರಸ್ತೆಗೆ ಬೇಕಿದೆ ಡಾಮರು ಭಾಗ್ಯ

12:49 PM Mar 15, 2017 | |

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಹಲವಾರು ರಸ್ತೆಗಳು ಜನರು ನಡೆದಾಡಲು ಕೂಡ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಇಂತಹ ರಸ್ತೆಗಳಲ್ಲಿ ಮಡಂತ್ಯಾರು ಕೊಮಿನಡ್ಕ ರಸ್ತೆ ಕೂಡ ಒಂದು.

Advertisement

ಮಡಂತ್ಯಾರಿನಿಂದ ಕಕ್ಯಪದವಿಗೆ ತೆರಳುವ ಮುಖ್ಯರಸ್ತೆ ಇದಾಗಿದ್ದು ಮಡಂತ್ಯಾರಿನಿಂದ ಕೊಮಿನಡ್ಕವರೆಗೆ 2.5 ಕಿ.ಮೀ.ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜನರ ನಿತ್ಯ ಸಂಚಾರಕ್ಕೆ ಅನನುಕೂಲವಾಗಿದೆ. ಮಡಂತ್ಯಾರು ಕಕ್ಯಪದವು ರಸ್ತೆ ಎರಡೂ ತಾಲೂಕುಗಳ ವ್ಯಾಪ್ತಿಯಲ್ಲಿದ್ದು  ಬಂಟ್ವಾಳ ತಾ| ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ  ರಸ್ತೆ ಮಾತ್ರ ಹಾಗೆಯೇ ಉಳಿದಿದೆ. ದಶಕಗಳ ಹಿಂದೆ ಡಾಮರು ಹಾಕಲಾಗಿದ್ದು ಅನಂತರ ಈ ರಸ್ತೆಗೆತೇಪೆ ಮಾತ್ರ ಹಾಕಲಾಗುತ್ತಿದೆ. ಒಂದೇ ಮಳೆಗೆ ತೇಪೆ ಕಿತ್ತು ಹೋಗುತ್ತಿದೆ. ಹಲವು ಬಾರಿ ಮನವಿ, ಗ್ರಾಮಸಭೆಯಲ್ಲಿ ನಿರ್ಣಯ ಮಾಡಲಾಗಿದ್ದರೂ ಯಾವುದೇ ಉಪಯೋಗವಾಗಿಲ್ಲ  ಎನ್ನುವುದು ಸಾರ್ವಜನಿಕರ ಆರೋಪ.

ಚುನಾವಣೆ ವೇಳೆ ಭರವಸೆ
ಪ್ರತೀ ಚುನಾವಣೆ ಸಮಯದಲ್ಲಿಯೂ ಜನಪ್ರತಿನಿಧಿಗಳು ಮತಯಾಚನೆಗೆ ಬರುವಾಗ ಅವರೊಂದಿಗೆ ಭರವಸೆಯ ಮಹಾಪೂರವೇ ಬರುತ್ತದೆ. ಆದರೆ ಗೆದ್ದ ಬಳಿಕ ಭರವಸೆ ಮರೆತಂತೆ ವರ್ತಿಸುತ್ತಾರೆ ಎನ್ನುತ್ತಾರೆ ಈ ಭಾಗದ ಜನತೆ.

ಪುಣ್ಯ ಕ್ಷೇತ್ರಗಳ ಬೀಡು
ಮಡಂತ್ಯಾರಿನಿಂದ ಕಕ್ಯಪದವು ರಸ್ತೆಯಲ್ಲಿ ಹಲವಾರು ಪುಣ್ಯಕ್ಷೇತ್ರಗಳಿವೆ. ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನ,  ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನ, ಮಡವು ಬಾಲಸುಬ್ರಹ್ಮಣ್ಯ ದೇವಸ್ಥಾನ, ಅಜಿಲಮೊಗರು ಮಸೀದಿ ಇದೆ. ಕಕ್ಯಪದವು ಪಾಂಡವರಕಲ್ಲಿನಿಂದ ಮಡಂತ್ಯಾರು, ಪುಂಜಾಲಕಟ್ಟೆ, ಬೆಳ್ತಂಗಡಿ, ಉಜಿರೆಗೆ ತೆರಳಬೇಕಾದರೆ ಇದೇ ರಸ್ತೆಯನ್ನು ಬಳಸಬೇಕು. ಕಕ್ಯಪದವು -ಮಡಂತ್ಯಾರು  ನಡುವೆ ಬಸ್‌ ಸಂಚಾರ ಕೂಡ ಕಡಿಮೆಯಿದ್ದು ಬೆಳಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುವ ಪರಿಸ್ಥಿತಿ. ರಸ್ತೆಯಲ್ಲಿ ಹೊಂಡ ಗುಂಡಿಗಳೆ ತುಂಬಿಕೊಂಡಿದ್ದು ನಿತ್ಯ ಸಂಕಟ ಪಡುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಘನವಾಹನ ಸಂಚಾರದಿಂದ ಹಾನಿ
ಈ ರಸ್ತೆಯ ಮಡಂತ್ಯಾರು ಪಾಂಡವರ ಕಲ್ಲು ಪರಿಸರದಲ್ಲಿ ಅಧಿಕ ಭಾರ ಹೊತ್ತ ಲಾರಿಗಳ ಓಡಾಟ ಹೆಚ್ಚಾಗಿದ್ದು ರಸ್ತೆ ಹದಗೆಡಲು ಇದುವೇ ಮುಖ್ಯ ಕಾರಣ. ಬೆರ್ಕಳ, ಪಾಂಡವರಕಲ್ಲು, ಪಾರೆಂಕಿ ರಸ್ತೆಯಲ್ಲಿ ಮರಳು, ಕೆಂಪು ಕಲ್ಲು, ಜಲ್ಲಿ ಹೊತ್ತ ಲಾರಿಗಳ ಓಡಾಟ ನಿರಂತರವಾಗಿದೆ. ಇದನ್ನು ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿಲ್ಲ ಎನ್ನುವುದು ಜನರ ಆರೋಪ. 

Advertisement

ತೇಪೆ ಬೇಡ, ಮರುಡಾಮರಾಗಲಿ
ಮಡಂತ್ಯಾರಿನಲ್ಲಿ ನಡೆದ ಸಮಾರಂಭವೊಂದರಲ್ಲಿ  ಮಾತನಾಡಿದ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಈ ರಸ್ತೆಗೆ ತೇಪೆ ಹಾಕಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ತೇಪೆ ಹಾಕುವುದಕ್ಕಿಂತ ಪೂರ್ಣ ಡಾಮರು ಹಾಕಿ  ಯೋಗ್ಯ ರಸ್ತೆಯನ್ನು ನೀಡಲಿ ಎನ್ನುವ ಬೇಡಿಕೆ ಜನರದು.

ಅನುದಾನದ ಕೊರತೆ 
ಮಡಂತ್ಯಾರು ಕೊಮಿನಡ್ಕ ರಸ್ತೆ ಅನುದಾನದ ಕೊರತೆಯಿಂದ ಹಾಗೆಯೇ ಉಳಿದಿದೆ. ಶಾಸಕರ ಜತೆಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. 
-ನರೇಂದ್ರ, ಕಾರ್ಯ ನಿರ್ವಹಣಾಧಿಕಾರಿ, ಬೆಳ್ತಂಗಡಿ

– ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next