Advertisement

ಬೇಬಿ ಮಸಾಲೆ ಬೇಕಾ? ಇಲ್ಲಿಗೆ ಬನ್ನಿ…

12:53 PM May 21, 2018 | |

ಬೇಬಿ ಮಸಾಲೆ ಅಂದರೆ ಏನು? ಇದನ್ನು ನೋಡುವುದಕ್ಕೆ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಹಳೇ ಬಸ್‌ನಿಲ್ದಾಣದ ಬಳಿಯ (ಬಜಾರ್‌ ರಸ್ತೆಯಲ್ಲಿರುವ) ಶ್ರೀನಿವಾಸ ಭವನಕ್ಕೆ ಬರಬೇಕು. ಅಂಗೈ ಅಗಲದ ದೋಸೆಗೆ ಪಲ್ಯ, ತುಪ್ಪ ಹಾಕಿ ಮಿನಿ ಮಸಾಲೆ ದೋಸೆ ಮಾಡಿಕೊಡುತ್ತಾರೆ. ಅದನ್ನು ಬಿಸಿಬಿಸಿ ಇದ್ದಾಗ ತಿನ್ನುವುದೇ ಒಂದು ಆನಂದ.
 
ಇಡೀ ಊರಲ್ಲಿ ಬೇಬಿ ಮಸಾಲೆ ದೋಸೆ ಇಲ್ಲಿ ಬಿಟ್ಟರೆ ಎಲ್ಲಿಯೂ ಸಿಗುವುದಿಲ್ಲ.  ಇದರ ಜೊತೆಗೆ ಬಿಸಿ ಕಾಲಿದೋಸೆ ಕೂಡ ಇಲ್ಲಿ ಬಹಳ ಫೇಮಸ್ಸು. ತಿಂದ ಮೇಲೆ ಮನೇಲಿ ಮಾಡಿದ ದೋಸೆ ಥರಾನೇ ಇದೆಯಲ್ಲ ಅಂತ ಅನಿಸದೇ ಇದ್ದರೆ ಕೇಳಿ. ಅಂದಹಾಗೆ, ಈ ಹೋಟೆಲಿಗೆ ಶ್ರೀನಿವಾಸಭವನ ಎಂಬ ಹೆಸರಿದೆ ಎಂಬುದೇನೋ ಸರಿ. ಆದರೆ ಸ್ಥಳೀಯವಾಗಿ ಇದರ ಹೆಸರು ಶಿಡ್ಲಘಟ್ಟ ಹೋಟೆಲ್‌ ಅಂತಿದೆ.

Advertisement

ಶ್ರೀನಿವಾಸ ಭವನ್‌ ಎಲ್ಲಿ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಆ ಮಟ್ಟಿಗೆ ಶಿಡ್ಲಘಟ್ಟೆ ಹೋಟೆಲ್‌ ಎಂಬ ಹೆಸರು ಜನಪ್ರಿಯವಾಗಿದೆ. ಈ ಹೆಸರು ಏಕೆ ಬಂತು ಅಂತ ಮಾಲೀಕರ ಶ್ರೀನಿವಾಸರನ್ನು ಕೇಳಿದರೆ- “ದಶಕಗಳ ಹಿಂದೆ ನಮ್ಮ ತಂದೆ ಇದೇ ಕಟ್ಟಡದಲ್ಲಿ ಹೋಟೆಲನ್ನು ನಡೆಸುತ್ತಿದ್ದರು. ಒಂದಷ್ಟು ವರ್ಷಗಳ ನಂತರ ಇಲ್ಲಿಂದ ಶಿಡ್ಲಘಟ್ಟದ ಮಾರುಕಟ್ಟೆ ರಸ್ತೆಗೆ ಹೋಟೆಲ್‌ ಸ್ಥಳಾಂತರ ಮಾಡಿದರು.

ಅಲ್ಲಿ ಒಂದಷ್ಟು ವರ್ಷ ನಡೆಸಿ ಮತ್ತೆ ವಾಪಸ್ಸು ಬಂದಿದ್ದರಿಂದ ನಾವು ಶಿಡ್ಲಘಟ್ಟದವರಾಗಿದ್ದೇವೆ. ಈ ಕಾರಣದಿಂದಲೇ ಇದು ಶಿಡ್ಲಘಟ್ಟ ಹೋಟೆಲ್‌ ಆಗಿದೆ’ ಎನ್ನುತ್ತಾರೆ. ಮಂಗಳೂರಿನಿಂದ ಬಂದ ಆನಂದರಾವ್‌, 1956ರಲ್ಲಿ ಈ ಹೋಟೆಲ್‌ ಪ್ರಾರಂಭಿಸಿದರು. ನಂತರ ಅದು ಕೆ.ಕೃಷ್ಣರಾವ್‌ ಉಸ್ತುವಾರಿಗೆ ಬಂತು. ಆಗ ಸುತ್ತಮುತ್ತಲ ಹಳ್ಳಿಗಳಿಂದ ಸೊಲಗೆ ಲೆಕ್ಕದಲ್ಲಿ ತುಪ್ಪವನ್ನು ತರಿಸಿಕೊಂಡು, ದೋಸೆಗಳಿಗೆ ಬಳಸುತ್ತಿದ್ದರಂತೆ.  

ಹೀಗಾಗಿ ಬೇಬಿ ಮಸಾಲೆಯನ್ನು ಆಕಾಲಕ್ಕೇ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.  ಈಗ ಕೃಷ್ಣರಾವ್‌ ಅವರ ಮಗ ಶ್ರೀನಿವಾಸ್‌ ಹೋಟೆಲ್‌ನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದು ಮೂರನೇ ತಲೆಮಾರಾಗಿದೆ. ಒಂದರ್ಥದಲ್ಲಿ ದೇವನಹಳ್ಳಿಗೆ ಆ ಕಾಲದಲ್ಲಿ ದೋಸೆ ರುಚಿ ಹತ್ತಿಸಿದ್ದೇ ಶ್ರೀನಿವಾಸರ ಕುಟುಂಬ. ಪ್ರತಿ ಭಾನುವಾರ ವಿಶೇಷ ತಿಂಡಿಯೆಂದು ತಯಾರಾಗುವ ತರಕಾರಿ ಪಲಾವನ್ನು ಶಿಡ್ಲಘಟ್ಟ ಹೋಟೆಲ್‌ನಲ್ಲಿ ತಿನ್ನಬೇಕು.

ವಿಶೇಷ ಎಂದರೆ ಅಂತಿಂಥ ಪಲಾವಲ್ಲ ಇದು. ತರಕಾರಿ ಜೊತೆಗೆ ಬ್ರೆಡ್‌ಪೀಸ್‌ಗಳನ್ನು ಹಾಕುವುದರಿಂದ ವಿಶೇಷ ರುಚಿ. ಪರಿಮಳ.  ಇಲ್ಲಿ ತಿನ್ನಲೇಬೇಕಾದ ಇನ್ನೂ ಎರಡು ಮೆನು ಇದೆ. ಅದುವೇ ಪುಳಿಯೋಗರೆ ಮತ್ತು ಪೊಂಗಲ್‌. ಬಾಯಿಗೆ ಸಿಗುವ ಮೆಣಸು, ಕೊಬ್ಬರಿ ಚೂರಿನ ಪೊಂಗಲ್‌ನ ರುಚಿಯನ್ನು ಸವಿದೋನೇ ಬಲ್ಲ. ಇಡ್ಲಿ ಸಾಂಬರ್‌, ವಡೆ ಇಲ್ಲಿ ವಿಶೇಷತಗಳ ಪಟ್ಟಿಯಲ್ಲಿ ಇನ್ನೊಂದು.  ತಿಳಿ ಸಾರಿನಂಥ ಸಾಂಬರಲ್ಲಿ, ಪೊಗದಸ್ತಾಗಿ ತೇಲುವ ಕೊತ್ತಂಬರಿ ಸಾಂಬರು ಇಡ್ಲಿಗೆ ಒಳ್ಳೇ ಜೋಡಿ. 

Advertisement

ಮಧ್ಯಾಹ್ನಕ್ಕೆ ಅನ್ನ ಸಾಂಬರ್‌ಕೂಡ ಸಿಗುತ್ತದೆ. ಸ್ವಲ್ಪ ಇಂಗು ಹೆಚ್ಚಿರುವ ರಸಂನ ಸ್ವಾದಕ್ಕೆ ಮಾಜಿ ಶಾಸಕ ಚಂದ್ರಣ್ಣ, ಮಾಜಿ ಎಂ.ಪಿ. ಸಿ. ನಾರಾಯಣಸ್ವಾಮಿ ಕೂಡ ಬೋಲ್ಡ್‌ ಆಗೋಗಿದ್ದಾರಂತೆ.  ಊಟದಲ್ಲಿ ಅನ್ನ, ರಸಂ, ಸಾಂಬಾರ್‌, ಚಪಾತಿ, ಪೂರಿ, ಪಲ್ಯ, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಇರುತ್ತದೆ.  ಬಿಸಿಬಿಸಿ ಮದ್ದೂರು ವಡೆ, ಬಾಳೆಕಾಯಿ ಬಜ್ಜಿ, ಮಂಗಳೂರು ಬಜ್ಜಿಗಳು ಸಂಜೆ ಸಿಗುವ ವಿಶೇಷ ತಿನಿಸು ಆಗಿರುತ್ತದೆ.  

ರವೆ ಇಡ್ಲಿ, ಪರೋಟ, ಪೂರಿ ಸಾಗು, ಚಪಾತಿ ಕೂಡ ಇಲ್ಲಿ ಲಭ್ಯ. ಸಾದಾ ಖಾಲಿ ಜೊತೆ ಸ್ಪೇಷಲ್‌ ಖಾಲಿ ಕೂಡ ರುಚಿರುಚಿಯಾಗಿರುತ್ತದೆ. ನಿಂಬೆ ಹಣ್ಣಿನ ಚಿತ್ರಾನ್ನ ಚಟ್ನಿಯಲ್ಲಿತಿಂದರೆ ಮತ್ತೂಮ್ಮೆ ಬೇಕು ಎನಿಸುವಂಥ ಸ್ವಾದ. ಎಲ್ಲ ಹೋಟೆಲ್‌ಗ‌ಳಿಗೆ ಇದ್ದಂತೆ ಇವರಿಗೂ ಕೆಲಸಗಾರರ ಸಮಸ್ಯೆ ಇದೆ. ಬೆಂಗಳೂರು, ಮಂಗಳೂರಿನಿಂದೆಲ್ಲಾ ಕೆಲಸಗಾರರನ್ನು ಕರೆದುಕೊಂಡು ಬಂದು ಸರಿದೂಗಿಸುತ್ತಿದ್ದಾರಂತೆ.  

ಇಷ್ಟೆಲ್ಲಾ ಸಿಗುವ ಈ ಹೋಟೆಲ್‌ನಲ್ಲಿ ತಿನುಸುಗಳ ಬೆಲೆ ಹೆಚ್ಚಿಲ್ಲ. ಮಸಾಲೆ ದೋಸೆ 30ರೂ. ಖಾಲಿ 25, ಬೇಬಿ ಮಸಾಲೆ 25 ರೂ. ಬೆಲೆ ಇದೆ. ” ಈಗ ಕಾಂಪಿಟೇಷನ್‌ ಜಾಸ್ತಿಯಾಗಿದೆ. ಅದಕ್ಕೆ ಇದರ ಲಾಭ ಗ್ರಾಹಕರಿಗೆ ಹೋಗಲಿ ಅಂತ ಬೆಲೆ ಇಳಿಸಿದ್ದೇವೆ’ ಎನ್ನುತ್ತಾರೆ ಶ್ರೀನಿವಾಸ್‌. ಈ ಹೋಟೆಲ್‌, ಬೆಳಿಗ್ಗೆ 6 ರಿಂದ ರಾತ್ರಿ 8ರ ವರೆಗೆ ತೆರೆದಿರುತ್ತದೆ. ನಂದಿಬೆಟ್ಟ ಸುತ್ತಮುತ್ತ ಪಿಕ್‌ನಿಕ್‌ಗೆ ಬರುವವರು ಇಲ್ಲಿ ಬಂದು ಹೊಟ್ಟೆ ತುಂಬಿಸಿಕೊಳ್ಳಬಹುದು. 

ಮೊಬೈಲ್‌: 9845827927

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next