ಇಂಡಿ: ಯಾವುದೇ ಶಾಸಕರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೋಗಿ ಶಾಂತಿ ಕದಡುವ ಪ್ರಯತ್ನ ಮಾಡಿರಲಿಲ್ಲ. ಆದರೆ ಈಗಿನ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಾಲೋಟಗಿ ಗ್ರಾಮಕ್ಕೆ ಬಂದು ಗ್ರಾಪಂಗೆ ತಮ್ಮ ಬೆಂಬಲಿಗರನ್ನು ನಿಲ್ಲಿಸಿ ನಮ್ಮಲ್ಲಿ ಶಾಂತಿ ಕದಡಿಸುವ ಸಣ್ಣತನ ಮಾಡಿದ್ದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಹೇಳಿದರು.
ಪಟ್ಟಣದ ಡಾ| ಸಾರ್ವಭೌಮ ಬಗಲಿ ಚಿಕ್ಕಮಕ್ಕಳ ಆಸ್ಪತ್ರೆ ಸಭಾ ಭವನದಲ್ಲಿ ಇಂಡಿ ತಾಲೂಕಿನ ಸಾಲೋಟಗಿ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿ ಸಿದ ನೇದಲಗಿ ಪ್ಯಾನಲ್ ಗುಂಪಿನ ಸದಸ್ಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಲೋಟಗಿ ಗ್ರಾಮದಲ್ಲಿ ಶಾಂತಿಯಿಂದ ಬದುಕು ಸಾಗಿಸುತ್ತಿದ್ದ ನಾವೆಲ್ಲರೂ ಶಾಂತಿಯಿಂದ ಚುನಾವಣೆಯಲ್ಲಿ ಪಾಲ್ಗೊಂಡಿದ್ದೇವೆ. ಆದರೆ ಶಾಸಕ ಪಾಟೀಲ ಅವರು ಗ್ರಾಮದಲ್ಲಿ ಬಂದು ಶಾಂತಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಮುಂಬರುವ ದಿನದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದು, ಬಿಜೆಪಿಯಿಂದ ಯಾರೇ ಟಿಕೇಟ್ ತಂದರೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ ಮಾತನಾಡಿ, ಸಾಲೋಟಗಿ ಗ್ರಾಮದ ಶಿವಯೋಗೆಪ್ಪ ನೇದಲಗಿ ಈ ಭಾಗದಲ್ಲಿ ದೊಡ್ಡ ಶಕ್ತಿಯಾಗಿದ್ದು, ಅವರನ್ನು ಬಿಜೆಪಿಯಲ್ಲಿ ಸೇರ್ಪಡೆ ಮಾಡಿಕೊಂಡರೆ ಬಿಜೆಪಿಗೆ ಆನೆ ಬಲ ಬಂದಂತಾಗುತ್ತದೆ. ಅವರನ್ನು ಬಿಜೆಪಿಯಲ್ಲಿ ಸೇರ್ಪಡೆ ಮಾಡಿಕೊಂಡರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಬೆಂಗಳೂರಿನಲ್ಲಿ ಭೇಟಿಯಾದ ಸಚಿವ ಗೋವಿಂದ ಕಾರಜೋಳ ಅವರಿಗೆ ತಿಳಿಸಿದ್ದೇನೆ.
ತಾಲೂಕಿನಲ್ಲಿ ಬಿಜೆಪಿ ಆಶಕ್ತವಾಗಿದೆ. ಇಂಡಿ ತಾಲೂಕಿನಲ್ಲಿ ಬಿಜೆಪಿಗೆ ಶಕ್ತಿ ತುಂಬಬೇಕಾದರೆ ಶಿವಯೋಗೆಪ್ಪ ನೇದಲಗಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಕೇವಲ ಬಿಜೆಪಿ ಸದಸ್ಯನಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಪ್ರಯೋಜನವಿಲ್ಲ. ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೇಟ್ ನೀಡಬೇಕು ಎಂದು ಸಚಿವ ಕಾರಜೋಳ ಅವರಿಗೆ ಮನವರಿಕೆ ಮಾಡಿದ್ದೇನೆ. ಅಲ್ಲದೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸೋಲಿಸಬೇಕಾದರೆ ಅದು ನೇದಲಗಿ ಅವರಿಗೆ ಟಿಕೇಟ್ ನೀಡಿದರೆ ಮಾತ್ರ ಸಾಧ್ಯ ಎಂದು ಹೇಳಿದ್ದೇನೆ ಎಂದರು.
ಶಾಸಕರಿಗೆ ಅಂಜಿ ಯಾರೂ ಅವರ ವಿರುದ್ಧಮಾತನಾಡುತ್ತಿಲ್ಲ. ಅವರ ವಿರುದ್ಧ ಧೈರ್ಯ ತೋರಿ ಎದೆಗಾರಿಕೆಯಿಂದ ಮಾತನಾಡುವವರು ನೇದಲಗಿ
ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು. ನನಗೆ ಬಿಜೆಪಿಯಲ್ಲಿನ ಉನ್ನತ ಮಟ್ಟದ ವರಿಷ್ಠರ ಪರಿಚಯ ಇದೆ. ಇವರಿಗೆ ಟಿಕೇಟ್ ನೀಡಿದರೆ ಅನುಕೂಲವಾಗುತ್ತದೆ ಎಂದು ಹೇಳುವೆ ಎಂದರು. ಶಿವಯೋಗೆಪ್ಪ ಚನಗೊಂಡ, ಆದಮ್ ಅಗರಖೇಡ, ಶ್ರೀಮಂತ ಬಾರಿಕಾಯಿ, ಅಯೂಬ ನಾಟೀಕಾರ, ಶಿವಯೋಗಿ ರೂಗಿಮಠ ಇದ್ದರು.