ಹುಬ್ಬಳ್ಳಿ: ದೇಶದಲ್ಲಿ ಸಮರ್ಪಕ ಕಲ್ಲಿದ್ದಲು ಸಂಪತ್ತು ಇದ್ದರೂ, ಇಲ್ಲಿಯವರೆಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಲೇ ಬರಲಾಗಿತ್ತು. ಆದರೆ ಭಾರತ ಕಲ್ಲಿದ್ದಲು ಸ್ವಾವಲಂಬನೆ ಹೊಂದಲೇಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಹಿನ್ನೆಲೆಯಲ್ಲಿ, ಆತ್ಮ ನಿರ್ಭರ ಭಾರತದಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಇಲ್ಲಿನ ಆರೂಢ ಅಂಧರ ಮಕ್ಕಳ ವಸತಿ ಶಾಲೆಗೆ ಒಎನ್‌ಜಿಸಿ ಕಂಪೆನಿ ಸಾಮಾಜಿಕ ಜವಾಬ್ದಾರಿ ನಿಧಿಯಡಿಯಲ್ಲಿ ನೀಡಲಾದ ಸುಸಜ್ಜಿತ ವಾಹನ ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸುಮಾರು 1,000-1,100 ಮಿಲಿಯನ್‌ಟನ್‌ನಷ್ಟು ಕಲ್ಲಿದ್ದಲು ಬೇಕಾಗುತ್ತದೆ. ಪ್ರಸ್ತುತ ದೊರೆಯುತ್ತಿರುವುದು 700 ಮಿಲಿಯನ್ ಟನ್ ಆಗಿದ್ದು, ಸುಮಾರು 300-400 ಮಿಲಿಯನ್ ಟನ್ ಕೊರತೆ ಎದುರಿಸುವಂತಾಗಿದೆ. ಕಳೆದ ಬಾರಿ ಸುಮಾರು 1 ಮಿಲಿಯನ್ ಟನ್‌ನಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿದೆ ಎಂದರು.
ಕಲ್ಲಿದ್ದಲು ಸಂಪತ್ತಿನಲ್ಲಿ ಭಾರತ ವಿಶ್ವದಲ್ಲಿಯೇ 4-5ನೇ ಸ್ಥಾನದಲ್ಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದನೆ ಮಾಡುವ ಖ್ಯಾತಿ ನಮ್ಮ ಕೋಲ್ ಇಂಡಿಯಾ ಕಂಪೆನಿಯದ್ದಾಗಿದೆ. ಇಷ್ಟಾದರೂ ನಾವು ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿರುವುದು ಮಹಾಪಾಪದ ಕಾರ್ಯ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ಅನಿಸಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮಹಾಪಾಪದ ಕೆಲಸ ತಡೆಯಬೇಕೆಂದು ನನಗೆ ಸೂಚನೆ ನೀಡಿದ್ದರು. ಅದರಂತೆ ಆತ್ಮನಿರ್ಭರ ಭಾರತ ಅಡಿಯಲ್ಲಿ ಒಂದು ಕಡೆ ಕೋಲ್ ಇಂಡಿಯಾ ಕಂಪೆನಿ ಬಲವರ್ಧನೆ, ಇನ್ನೊಂದು ಕಡೆ ಕಲ್ಲಿದ್ದಲು ವಾಣಿಜ್ಯ ಉತ್ಪಾದನೆಗೆ ಅವಕಾಶ ನೀಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಕೋಲ್ ಇಂಡಿಯಾ ಶಕ್ತಿ ಕುಂದಿಸುವ ಯಾವ ಉದ್ದೇಶ ಸರಕಾರಕ್ಕಿಲ್ಲ. ಕೋಲ್ ಇಂಡಿಯಾ ಕಾರ್ಮಿಕರ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ಕೈಗೊಳ್ಳಲಾಗಿದೆ ಎಂದರು.
2023-24ರ ವೇಳೆಗೆ ಸುಮಾರು 1 ಬಿಲಿಯನ್ ಟನ್‌ನಷ್ಟು ಕಲ್ಲಿದ್ದಲು ಉತ್ಪಾದನೆ ಗುರಿಯನ್ನು ಕೋಲ್ ಇಂಡಿಯಾಗೆ ನೀಡಲಾಗಿದ್ದು, ಇದಲ್ಲದೆ ಬೇಕಾಗುವ ಇನ್ನಷ್ಟು ಕಲ್ಲಿದ್ದಲನ್ನು ವಾಣಿಜ್ಯ ರೂಪದಲ್ಲಿ ಕಂಪೆನಿಗಳು ಉತ್ಪಾದಿಸುತ್ತವೆ. ದೇಶದಲ್ಲಿ ಪ್ರಸ್ತುತ ಸುಮಾರು 30 ದಿನಗಳಿಗೆಸಾಕಾಗುವಷ್ಟು ಹೆಚ್ಚಿನ ರೀತಿಯ ಕಲ್ಲಿದ್ದಲುಸಂಗ್ರಹವಿದ್ದು, ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಬಳಕೆಗೆ ಎಲ್ಲಿಯೂ ಕಲ್ಲಿದ್ದಲು ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.