ನವದೆಹಲಿ:ಸುಮಾರು 15-16 ವರ್ಷಗಳ ಅವಧಿಯಲ್ಲಿ ಭಾರತದ ಮಧ್ಯಮ ವರ್ಗದವರ ಸಂಖ್ಯೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ವಾರ್ಷಿಕ 5 ಲಕ್ಷದಿಂದ 30 ಲಕ್ಷ ರೂ.ಗಳವರೆಗಿನ ಆದಾಯವಿರುವಂಥ ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆ 2004-05ರಲ್ಲಿ ಶೇ.14ರಷ್ಟಿದ್ದರೆ, 2021ರ ವೇಳೆಗೆ ಶೇ.31ಕ್ಕೇರಿದೆ.
ಆರ್ಥಿಕ ವಿಶ್ಲೇಷಣಾ ಸಂಸ್ಥೆ ಪ್ರೈಸ್(ಪೀಪಲ್ ರಿಸರ್ಚ್ ಆನ್ ಇಂಡಿಯಾಸ್ ಕನ್ಸೂéಮರ್ ಎಕಾನಮಿ) ನಡೆಸಿದ ಅಧ್ಯಯನ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಮುಂದಿನ 8 ವರ್ಷಗಳಲ್ಲಿ ಮಧ್ಯಮ ವರ್ಗದವರ ಪ್ರಮಾಣ ಶೇ.47ರಷ್ಟು, 2047ರ ವೇಳೆಗೆ ಶೇ.63ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿರುವುದಾಗಿಯೂ ವರದಿ ಹೇಳಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಹಲವು ಸುಧಾರಣಾ ಕ್ರಮಗಳು ಹಾಗೂ ಆರ್ಥಿಕ ಚಟುವಟಿಕೆಗಳ ವಿಸ್ತರಣೆಯಿಂದಾಗಿ ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2047ರ ವೇಳೆಗೆ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ನಿರೀಕ್ಷಿತ ಫಲಿತಾಂಶ ನೀಡಿದ್ದೇ ಆದಲ್ಲಿ, ಭಾರತದ ಆದಾಯದ ಪಿರಮಿಡ್‌ನ ತಳಭಾಗದಲ್ಲಿ ನಿರ್ಗತಿಕರ ಅತ್ಯಂತ ಸಣ್ಣ ಪದರವಿರಲಿದ್ದು, ಈ ಪದರ ಮತ್ತು ಮೇಲು¤ದಿಯಲ್ಲಿರುವ “ಶ್ರೀಮಂತ’ ಕೆನೆಪದರದ ನಡುವೆ “ಮಧ್ಯಮ ವರ್ಗ’ವು ದೊಡ್ಡ ಪಾಲನ್ನು ಆಕ್ರಮಿಸಿಕೊಳ್ಳಲಿದೆ ಎಂದೂ ವರದಿ ತಿಳಿಸಿದೆ.
ತಲಾ 10 ಲಕ್ಷ ಜನಸಂಖ್ಯೆಯಿರುವ 63 ನಗರಗಳು ಉದಯಿಸಿದ್ದು ಹೇಗೆ, ನಗರಪ್ರದೇಶಗಳಲ್ಲಿ ಶ್ರೀಮಂತರ ಕೇಂದ್ರೀಕರಣ ಹೆಚ್ಚಿದ್ದು ಹೇಗೆ ಎಂಬ ಬಗ್ಗೆಯೂ ಪ್ರೈಸ್ ಸಂಸ್ಥೆ ಅಧ್ಯಯನ ನಡೆಸಿದೆ.
2021ರ ಶ್ರೀಮಂತ ನಗರಗಳು (ವಾರ್ಷಿಕ 2 ಕೋಟಿಗಿಂತ ಹೆಚ್ಚು ಆದಾಯ)
ರಾಜ್ಯ ಆಗರ್ಭ ಶ್ರೀಮಂತರ ಸಂಖ್ಯೆ
ಮಹಾರಾಷ್ಟ್ರ 5.4 ಲಕ್ಷ
ದೆಹಲಿ 1.81 ಲಕ್ಷ
ಗುಜರಾತ್ 1.41 ಲಕ್ಷ
ತಮಿಳುನಾಡು 1.37 ಲಕ್ಷ
ಪಂಜಾಬ್ 1.01 ಲಕ್ಷ
1994-95ರಲ್ಲಿ ದೇಶದಲ್ಲಿದ್ದ ಆಗರ್ಭ ಶ್ರೀಮಂತರ ಸಂಖ್ಯೆ – 98,000
2020-21ರಲ್ಲಿ ಇವರ ಸಂಖ್ಯೆ- 18 ಲಕ್ಷ