Advertisement

ಸಿಂದಗಿ ಪಟ್ಟಣದ ಚಿನ್ನದ ಅಂಗಡಿ ಬಳಿ ಗುಂಡಿನ ದಾಳಿ; ಮೂವರು ಸ್ಥಳದಿಂದ ಪರಾರಿ

08:18 PM Feb 13, 2023 | Vishnudas Patil |

ವಿಜಯಪುರ : ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಚಿನ್ನದ ಅಂಗಡಿ ಬಳಿ ಗುಂಡಿನ ದಾಳಿ ನಡೆದಿದ್ದು, ಐವರು ಆಗಂತುಕರಲ್ಲಿ ಓರ್ವ ಕಂಟ್ರಿ ಪಿಸ್ತೂಲ್‍ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.

Advertisement

ಸಿಂದಗಿ ಪಟ್ಟಣದ ಅಶೋಕ ವೃತ್ತದ ಬಳಿ ಇರುವ ಹಂಚಿನಾಳ ಎಂಬವರಿಗೆ ಸೇರಿದ ಧನಲಕ್ಷ್ಮೀ ಜ್ಯುವೆಲರಿ ಬಳಿ ಆಗಂತುಕರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ.

ನೋಂದಣಿ ಸಂಖ್ಯೆ ಇಲ್ಲದ ಪಲ್ಸರ್ ಮೇಲೆ ಬಂದ ಐವರಲ್ಲಿ ಓರ್ವ ಏಕಾಏಕಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ಧ ಕೇಳುತ್ತಲೇ ಅಶೋಕ ವೃತ್ತ ಸೇರಿದಂತೆ ನಗರದ ಬಹುತೇಕ ವ್ಯಾಪಾರಿಗಳು, ನಿವಾಸಿಗಳು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಜನರನ್ನು ಕಂಡು ಪರಾರಿಯಾಗಲು ಯತ್ನಿಸಿದ ಆಗಂತುಕರಲ್ಲಿ ಬೈಕ್ ಸಮೇತ ಇಬ್ಬರು ಕೊನೆಗೂ ಸ್ಥಳೀಯರ ಪರಿಶ್ರಮದಿಂದ ಸೆರೆ ಸಿಕ್ಕಿದ್ದಾರೆ. ಇತರೆ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳೀಯರಿಗೆ ಸೆರೆ ಸಿಕ್ಕಿರುವ ಇಬ್ಬರಲ್ಲಿ ಒಂದು ಕಂಟ್ರಿ ಪಿಸ್ತೂಲ್, ಮೂರುಜೀವಂತ ಗುಂಡುಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಂತದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರಿಂದ ವಶಕ್ಕೆ ಪಡೆದ ಪಿಸ್ತೂಲ್, ಜೀವಂತ ಗುಂಡು ಹಾಗೂ ಮಾರಕಾಸ್ತ್ರ ಸಮೇತ ಆರೋಪಿಗಳನ್ನು ವಿಚಾರಿಸಲಾಗಿ, ತಮ್ಮನ್ನು ಪುನೆ ಮೂಲದವರೆಂದು ಹೇಳಿಕೊಂಡಿದ್ದಾರೆ.ಆದರೆ ಈ ಆಗಂತುಕರು ಯಾರು, ಏಕಾಏಕಿ ಪಟ್ಟಣದಲ್ಲಿ ಗುಂಡು ಹಾರಿಸಿ ಭಯದ ವಾತಾವರಣ ಸೃಷ್ಟಿಸಿದ್ದೇಕೆ, ಬಂಧಿತರು ಯಾರು, ಪರಾರಿಯಾದ ಮೂವರು ಯಾರು, ಎಲ್ಲಿಂದ ಬಂದವರು ಎಂಬೆಲ್ಲ ಅಂಶಗಳ ಕುರಿತು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ. ಸುದ್ದಿ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದಾವಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next