Advertisement
10 ಕೆರೆಗಳಿಗೆ ನೀರು: ಮಳೆಗಾಲದಲ್ಲಿ ಮಾತ್ರ ತುಂಬಿ, ಉಳಿದ ವೇಳೆಯಲ್ಲಿ ಬತ್ತಿ ಹೋಗುತ್ತಿದ್ದ ನಾರ್ಥ್ ಬ್ಯಾಂಕ್ ವ್ಯಾಪ್ತಿಯ ಹತ್ತು, ಸಣಬದ 12 ಮತ್ತು ಮೇಲುಕೋಟೆ ಭಾಗದ 29 ಕೆರೆಗಳು ಸೇರಿ 51 ಕೆರೆಗಳಿಗೆ ನೀರು ತುಂಬಿಸಿ ರೈತರ ಸಂಕಷ್ಟ ಪರಿಹರಿಸುವ ಸಲುವಾಗಿಯೇ ಶಾಸಕ ಸಿ.ಎಸ್.ಪುಟ್ಟರಾಜು ಅವರು ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ವೇಳೆ ಬಳಿಘಟ್ಟ ಏತ ನೀರಾವರಿ ಯೋಜನೆ ರೂಪಿಸಿದ್ದರು. ಅದೀಗ ಸಾಕಾರವಾಗುತ್ತಿದ್ದು, ನಾರ್ಥ್ ಬ್ಯಾಂಕ್ ಸುತ್ತಲ 10 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಪ್ರಥಮ ಹಂತದಲ್ಲಿ ಚಾಲನೆ ನೀಡಲಾಗಿದೆ.
ಮೇಲುಕೋಟೆ ಮಳೆಯಾಶ್ರಿತ ಪ್ರದೇಶವಾಗಿದ್ದು, ರೈತರು ಕೆರೆ ಮತ್ತು ಕುಂಟೆಗಳ ನೀರನ್ನು ಬಳಸಿಕೊಂಡೇ ದೊಡ್ಡಿಬತ್ತ, ರತ್ನಚೂರು, ದಡಿಗೆಶ್ರೀ, ಪುಟ್ಟಬತ್ತ ಮುಂತಾದ ಸ್ಥಳೀಯ ಬತ್ತದ ತಳಿಗಳು, ತರಕಾರಿ ಬೆಳೆದು ಸಂತೃಪ್ತಿಯ ಜೀವನ ಸಾಗಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಜೊತೆಗೆ ಕೆರೆಯಲ್ಲಿ ಹೂಳು ತುಂಬಿಕೊಂಡು, ಕೆರೆಗೆ ಬರುವ ನೀರಿನ ಮಾರ್ಗ ಮುಚ್ಚಿ ಹೋದ ಪರಿಣಾಮ ಕೆರೆಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿತ ಕಂಡಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲವೂ ಮರೀಚಿಕೆಯಾಗಿದೆ. ಮೇಲುಕೋಟೆ ಹೋಬಳಿಯ ಕೆರೆಗಳು, ಜಿ.ಪಂ ನಿರ್ವಹಣೆಗೆ ಸೇರಿದ್ದು, ಸಣ್ಣ ನೀರಾವರಿ ಇಲಾಖೆ ಕೆರೆಗಳಿಗೆ ನೀರುತುಂಬಿಸುವ ಯೋಜನೆ ಜಾರಿಗೆ ತಂದಿದೆ. 2,587 ಎಕರೆ ನೀರಾವರಿ ಸೌಲಭ್ಯ:ಮೇಲುಕೋಟೆ ಬೆಟ್ಟದ ಪಶ್ಚಿಮ ಭಾಗದ ತಳದಲ್ಲಿ ಪುರಾತನ ಇತಿಹಾಸ ಹೊಂದಿದ ದಳವಾಯಿಕೆರೆ ಹಾಗೂ ಕಣಿವೆಯ ಬಳಿ ಹೊಸಕೆರೆ ಇದೆ. ದಳವಾಯಿಕೆರೆ 60 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದರೆ, ಹೊಸಕೆರೆ 100 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಜತೆಗೆ ಮೇಲುಕೋಟೆ ಮೇಲ್ಬಾಗದ ನಾರಣಾಪುರ, ರಾಂಪುರ, ಕನಗೋನಹಳ್ಳಿ, ಚಲ್ಲರಹಳ್ಳಿಕೊಪ್ಪಲು, ಬಳಿಘಟ್ಟ, ಗೌರಿಕಟ್ಟೆ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಮಳೆಯಾಶ್ರಿತ ಸುಮಾರು 29 ಕೆರೆಗಳು ಹಾಗೂ ಕಟ್ಟೆಗಳಿವೆ. ಏತನೀರಾವರಿ ಯೋಜನೆಯ ಪರಿಣಾಮ 2,587 ಎಕರೆ ನೀರಾವರಿ ಸೌಲಭ್ಯ ದೊರೆಯಲಿದೆ. ದನಕರುಗಳಿಗೆ, ನಾಗರಿಕರ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಾಣಲಿದೆ. ಕೃಷಿ ಚಟುವಟಿಕೆಗೆ 120 ದಿನಗಳ ಕಾಲ ದಿನಕ್ಕೆ 20 ಗಂಟೆ ನೀರು ಹರಿಸುವ ಗುರಿ ಹೊಂದಲಾಗಿದೆ.
Related Articles
Advertisement
ಆಧುನಿಕ ಭಗೀರಥ ಶಾಸಕ ಸಿ.ಎಸ್.ಪುಟ್ಟ ರಾಜುಮೇಲುಕೋಟೆ ಭಾಗದ ಮಳೆಯಾಶ್ರಿತ ಪ್ರದೇಶದ ಹಳ್ಳಿಗಳ ರೈತರ ಸಂಕಷ್ಟ ಪರಿಹರಿಸುವ ಸಲು ವಾಗಿಯೇ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಅಂದಿನ ಸಣ್ಣ ನೀರಾವರಿ ಸಚಿವರಿದ್ದಾಗ ಮಾಡಿದ ಪ್ರಯತ್ನದಿಂದಾಗಿ ಸಣ್ಣ ನೀರಾವರಿ ಇಲಾಖೆ ಯಿಂದ 186 ಕೋಟಿ ರೂ. ವೆಚ್ಚದ ಬಳಿಘಟ್ಟ ಏತ ನೀರಾವರಿ ಯೋಜನೆ ಮಂಜೂರಾಗಿದೆ. ಈ ಬೃಹತ್ ಯೋಜನೆ ಯಲ್ಲಿ ಕಾವೇರಿ ನದಿಯಿಂದ ಪೈಪ್‌ಲೈನ್ ಮೂಲಕ ದಳವಾಯಿಕೆರೆಗೆ ನೀರು ತುಂಬಿಸಿ ಅಲ್ಲಿಂದ ಮೇಲ್ಬಾಗದ ಹಳ್ಳಿಗಳ 29ಕ್ಕೂ ಹೆಚ್ಚು ಕೆರೆಕಟ್ಟೆಗಳು ಹಾಗೂ ಹೊಸಕೆರೆಗೆ ನೀರು ತುಂಬಿಸುವ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ನಾರ್ಥ್ ಬ್ಯಾಂಕ್ ನಲ್ಲಿ 10 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿದೆ. ಸಣಬದ 12 ಕೆರೆ ಸೇರಿ ಒಟ್ಟಾರೆ 51 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿದೆ. 98 ಕಲ್ಯಾಣಿ ಕೊಳ ಪತ್ತೆ: ಮೇಲುಕೋಟೆ ಕಣಿವೆ ಬಳಿಯಿರುವ ಹೊಸಕೆರೆಯ ಏರಿಯನ್ನು ಭಾರೀ ಪ್ರಮಾಣದಲ್ಲಿ ಎತ್ತರಿಸಿ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಹಾಲಿ ರಸ್ತೆ ಮುಳುಗಡೆಯಾಗಿ ಹೊಸ ರಸ್ತೆ ನಿರ್ಮಾಣವಾಗಲಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. 3ನೇ ಹಂತದಲ್ಲಿ ಮೇಲುಕೋಟೆಯಲ್ಲಿ 98 ಕಲ್ಯಾಣಿ ಕೊಳಗಳನ್ನು ಪತ್ತೆ ಮಾಡಲಾಗಿದ್ದು, ಎಲ್ಲ ಕೊಳ ಮತ್ತು ಕಲ್ಯಾಣಿಗಳನ್ನು ಜೀರ್ಣೋದ್ಧಾರ ಮಾಡಿ ನೀರು ತುಂಬಿಸುವ ಯೋಜನೆ ಅನುಷ್ಠಾನದಲ್ಲಿದೆ. ಯೋಜನೆ ಅನುಕೂಲ
– ಬಳಿಘಟ್ಟ ಗ್ರಾಪಂ ವ್ಯಾಪ್ತಿಯ 29 ಕೆರೆ ತುಂಬಿಸಿ ನೀರಾವರಿ ಸೌಲಭ್ಯ ಕಲ್ಪಿಸುವುದು
-ಹೊಸಕೆರೆ ಏರಿ ಎತ್ತರಿಸುವುದು
– ಹೊಸಕೆರೆ ಅಚ್ಚುಕಟ್ಟು ಪ್ರದೇಶ 1000 ಎಕರೆಗೆ ವಿಸ್ತಾರ
– ಮೇಲುಕೋಟೆ ಈಗಿರುವ ರಸ್ತೆ ಮುಳುಗಡೆ, ಆಕರ್ಷಕ ವಿನ್ಯಾಸದ ರಸ್ತೆ ನಿರ್ಮಾಣ
– ನಾರ್ಥ್ ಬ್ಯಾಂಕ್ ಸುತ್ತಲ 10 ಕೆರೆ, ಸಣಬದ 12 ಸೇರಿದಂತೆ ಒಟ್ಟಾರೆ 51 ಕೆರೆಗಳಿಗೆ ನೀರು ತುಂಬಿಸುವುದು.
– ಅಂತರ್ಜಲ ಮಟ್ಟ ಹೆಚ್ಚಳ ಮೇಲುಕೋಟೆ ಸೇರಿ ಎಲ್ಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
-ಸಣಬ, ನಾರ್ಥ್ ಬ್ಯಾಂಕ್, ಮೇಲುಕೋಟೆ ದಳವಾಯಿಕೆರೆ ಬಳಿ ಜಾಕ್‌ವೆಲ್ ನಿರ್ಮಾಣ 186 ಕೋಟಿ ವೆಚ್ಚದ ಬಳಿಘಟ್ಟ ಏತನೀರಾವರಿ ಯೋಜನೆಯ ಮೂಲಕ ಮೇಲುಕೋಟೆಯ ಮಳೆಯಾಶ್ರಿತ ಕೆರೆಗಳು ವರ್ಷವಿಡೀ ನೀರಿನಿಂದ ತುಂಬಲಿದೆ. ನೂರಾರು ಎಕರೆಗೆ ನೀರಾವರಿ ಸೌಲಭ್ಯ ದೊರೆತು, ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಇದೊಂದು ಮಹತ್ವದ ಯೋಜನೆಯಾಗಿದೆ.
● ಸಿ.ಎಸ್.ಪುಟ್ಟರಾಜ,
ಶಾಸಕರು, ಮೇಲುಕೋಟೆ ಮೇಲುಕೋಟೆ ಭಾಗದ ರೈತರ ಸಮಸ್ಯೆ ಪರಿಹಾರಕ್ಕಾಗಿ ಬಳಿಘಟ್ಟ ಏತನೀರಾವರಿ ಯೋಜನೆ ಅಂತಿಮ ಹಂತದಲ್ಲಿದೆ. 51 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಶೀಘ್ರ ಮುಕ್ತಾಯವಾಗಲಿದೆ. ಸಣಬ, ನಾರ್ಥಬ್ಯಾಂಕ್, ದಳವಾಯಿಕೆರೆ ಬಳಿ ಜಾಕ್ ವೆಲ್ ನಿರ್ಮಿಸಿ ಮೋಟರ್ ಅಳವಡಿಸಲಾಗಿದೆ. ಇದರಿಂದ 2,587 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.
● ತಾರಕೇಶ್, ಎಇಇ, ಸಣ್ಣ ನೀರಾವರಿ ಇಲಾಖೆ –ಸೌಮ್ಯ