ಮುಂಬಯಿ: ಕಳೆದ ಮೂರು ದಿನಗಳಿಂದ ಮುಂಬಯಿಯಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಜುಲೈ 6ರಿಂದ 10ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಭಾರೀ ಮಳೆ: ಗುರುವಾರವೂ ಶಾಲಾ ಕಾಲೇಜಿಗೆ ರಜೆ ಘೋಷಣೆ
ರಾಯಗಢ, ರತ್ನಗಿರಿ, ಕೊಲ್ಲಾಪುರ, ಸಿಂಧುದುರ್ಗ, ಸತಾರ ಸೇರಿದಂತೆ ಕೊಂಕಣ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಜುಲೈ 8ರವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮುಂಬೈನ ಚಾಲ್ ಬಳಿ ಭೂಕುಸಿತ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಇದರ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿರುವುದಾಗಿ ವರದಿ ತಿಳಿಸಿದೆ.
ರೈಲು ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿದೆ. ದಾದರ್ ಮತ್ತು ಸೈಯನ್ ಪ್ರದೇಶದ ತಗ್ಗುಪ್ರದೇಶಗಳು ಜಲಾವೃತಗೊಂಡಿದೆ. ಮುಂಬೈನ ಚುನಾಭಟ್ಟಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಮೂರು ಮನೆಗಳು ಭಾಗಶಃ ಹಾನಿಗೊಂಡಿದೆ. ಇಬ್ಬರು ಗಾಯಗೊಂಡಿರುವುದಾಗಿ ಎಎನ್ ಐ ವರದಿ ತಿಳಿಸಿದೆ.
ಭಾರೀ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದರಿಂದ BEST ಬಸ್ ಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಮಹಾರಾಷ್ಟ್ರದ ಕರಾವಳಿ ಪ್ರದೇಶಕ್ಕೆ 17 ಎನ್ ಡಿಆರ್ ಎಫ್ ತಂಡವನ್ನು ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.