Advertisement

ಕರಾವಳಿಗೆ ಶೀಘ್ರ ಬರಲಿದೆ ಎನ್‌ಡಿಆರ್‌ಎಫ್‌

02:43 AM May 29, 2020 | Sriram |

ಮಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ ಎದುರಿಸಲು ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ಪರಿಹಾರ ತಂಡ) ಬೆಟಾಲಿಯನ್‌ ನಿಯೋಜಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಒಂದೆರಡು ದಿನದೊಳಗೆ ರಾಜ್ಯಕ್ಕೆ ತಂಡಗಳು ಆಗಮಿಸಲಿವೆ.

Advertisement

ಎನ್‌ಡಿಆರ್‌ಎಫ್‌ ದಕ್ಷಿಣ ವಲಯದ ಕಚೇರಿ ಆಂಧ್ರಪ್ರದೇಶದ ಗುಂಟೂರಿನಲ್ಲಿರುವುದರಿಂದ ತುರ್ತು ಸಂದರ್ಭಗಳಲ್ಲಿ ಅತಿವೃಷ್ಟಿ ಪ್ರದೇಶಗಳಿಗೆ ತಲುಪಲು ವಿಳಂಬವಾಗುವ ಕಾರಣ ಈ ವರ್ಷವೂ ಮುಂಚಿತವಾಗಿಯೇ ಎನ್‌ಡಿಆರ್‌ಎಫ್‌ ತರಿಸಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಈಗಾಗಲೇ ಎನ್‌ಡಿಆರ್‌ಎಫ್‌ ಸಿದ್ಧಗೊಂಡಿದ್ದು, ಕೆಲವೇ ದಿನದೊಳಗೆ ನಿಯೋಜನೆಗೊಂಡ ಜಿಲ್ಲೆಗಳಿಗೆ ಆಗಮಿಸಲಿದೆ.

ರಾಜ್ಯ ಮುಖ್ಯ ಕಾರ್ಯದರ್ಶಿ ಆಂಧ್ರದ ಗುಂಟೂರು ಎನ್‌ಡಿಆರ್‌ಎಫ್‌ ಮುಖ್ಯಸ್ಥರಿಗೆ ಪತ್ರ ಬರೆದು ರಾಜ್ಯಕ್ಕೆ ಬೆಟಾಲಿಯನ್‌ ಕಳುಹಿಸಿಕೊಡುವಂತೆ ಆಗ್ರಹಿಸಿದ್ದು, ಈ ಹಿನ್ನೆಲೆಯಲ್ಲಿ 4 ತಂಡಗಳನ್ನು ಕಳುಹಿಸಿಕೊಡಲಾಗುತ್ತಿದೆ.

ಕರ್ನಾಟಕದಲ್ಲಿ ಕಳೆದೆರಡು ವರ್ಷಗಳಿಂದ ಮಹಾಮಳೆ, ಭೂ ಕುಸಿತ ದೊಡ್ಡ ಮಟ್ಟದಲ್ಲಿ ತೊಂದರೆ ಮಾಡಿದ್ದು, ಡ್ಯಾಂಗಳಲ್ಲಿ ನೆರೆ ಉಕ್ಕಿ ಹರಿದಿತ್ತು. ಐಎಂಡಿ (ಇಂಡಿಯನ್‌ ಮೆಟ್ರೋಲಾಜಿಕಲ್‌ ಡಿಪಾರ್ಟ್‌ ಮೆಂಟ್‌) ಈಗಾಗಲೇ ಈ ವರ್ಷದ ಮುಂಗಾರುವಿನ ಸ್ಥಿತಿಗತಿ ಬಗ್ಗೆ ಹೇಳಿದ್ದು, ಅದರಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ವರದಿ ನೀಡಿತ್ತು. ನೆರೆಯಿಂದ ಜನರಿಗೆ ತೊಂದರೆ ಯಾಗದಂತೆ ರಾಜ್ಯ ಸರಕಾರ ಎನ್‌ಡಿಆರ್‌ಎಫ್‌ ನಿಯೋಜಿಸಿದೆ.

ದ.ಕ.-ಉಡುಪಿಗೆ 1 ಬೆಟಾಲಿಯನ್‌
ಕಳೆದೆರಡು ವರ್ಷಗಳಲ್ಲಿ ನಡೆದ ದುರಂತಗಳನ್ನು ಆಧರಿಸಿ ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಧಾರವಾಡ ಜಿಲ್ಲೆಗಳನ್ನು 4 ಕೇಂದ್ರಗಳಾಗಿಸಿ ಎನ್‌ಡಿಆರ್‌ಎಫ್‌ ಬೆಟಾಲಿಯನ್‌ ನಿಯೋಜಿಸಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಬೆಟಾಲಿಯನ್‌ ಉಡುಪಿ ಮತ್ತು ಉತ್ತರ ಕನ್ನಡದ ಮೇಲೂ ನಿಗಾ ಇರಿಸಿದರೆ, ಕೊಡಗಿನ ಬೆಟಾಲಿಯನ್‌ ಮೈಸೂರು, ಹಾಸನ ಮತ್ತು ಮಲೆನಾಡಿನ ಇತರ ಜಿಲ್ಲೆಗಳು, ಬೆಳಗಾವಿಯ ಬೆಟಾಲಿಯನ್‌ ಬಾಗಲಕೋಟೆ, ವಿಜಯಪುರ ಮತ್ತು ಪಕ್ಕದ ಜಿಲ್ಲೆಗಳು, ಧಾರವಾಡ ಬೆಟಾಲಿಯನ್‌ ಗದಗ, ಹಾವೇರಿ ಮತ್ತು ಪಕ್ಕದ ಜಿಲ್ಲೆಗಳ ಮೇಲೆ ನಿಗಾ ಇಡಲಿವೆ.

 ಸುರಕ್ಷತೆಗೆ ಆದ್ಯತೆ
ಮಳೆಗಾಲಕ್ಕೆ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಗೆ ಎನ್‌ಡಿಆರ್‌ಎಫ್‌ ಆಗಮನದ ಬಗ್ಗೆ ಮಾಹಿತಿ ಬಂದಿದೆ. ಒಂದೆರಡು ದಿನದಲ್ಲಿ ಈ ತಂಡ ಮಂಗಳೂರಿಗೆ ಆಗಮಿಸಲಿದೆ. ಭಾರೀ ಮಳೆಯ ಸಂದರ್ಭದಲ್ಲಿ ಈ ತಂಡ ವಿಶೇಷ ಕಾರ್ಯ ನಡೆಸಲಿದೆ. ಯಾವುದೇ ಅನಾಹುತ ಸಂಭವಿಸಿದರೂ ಜನರ ಸುರಕ್ಷತೆಗೆ ಈ ತಂಡ ಆದ್ಯತೆ ನೀಡಲಿದೆ.
 -ಸಿಂಧೂ ಬಿ.ರೂಪೇಶ್‌
ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next