ಕಿರುಕೋಳಿ, ನೆಲಕೋಳಿಯನ್ನು ಹೆಚ್ಚಾಗಿ ಹೋಲುವ ಈ ಹಕ್ಕಿ ಬಿದಿರು ಹೆಚ್ಚಾಗಿರುವ ಅರಣ್ಯ ಪ್ರದೇಶದಲ್ಲೇ ಗೂಡು ನಿರ್ಮಿಸುತ್ತದೆ. ಕ್ವೀಕ್ ಕ್ವೀಕ್ ಎಂದು ಕೂಗುತ್ತಲೇ ಸ್ವಲ್ಪ ಸಮಯದ ನಂತರ ಸಿಳ್ಳೆ ಹಾಕುತ್ತದೆ!
ಕಿರುಕೋಳಿ, ನೆಲಕೋಳಿಯನ್ನು ತುಂಬಾ ಹೋಲುವ ಉರುಟಾದ ದೇಹದ, ಮೊಂಡು ಬಾಲದ ಹಕ್ಕಿ ಈ ಕೇಸರಿ ಟೊಪ್ಪಿ ಪಿಟ್ಟಾ. ಇದಕ್ಕೆ ಬಾಲ ಇದೆಯೋ ಇಲ್ಲವೋ ಅನ್ನೋ ರೀತಿ ಚಿಕ್ಕ ಬಾಲದ ಪುಕ್ಕ ಕಂಡೂ ಕಾಣದಂತಿದೆ. ಇದರ ಬಣ್ಣ ತುಂಬಾ ಆಕರ್ಷಕವಾಗಿದ್ದು ತಲೆಯಲ್ಲಿರುವ ತಿಳಿ ಕೇಸರಿ ಬಣ್ಣವು ಟೊಪ್ಪಿ ಪಿಟ್ಟಾದ ಅಂದವನ್ನು ಹೆಚ್ಚಿಸಿದೆ. ಈ ಟೋಪಿ ಇದರ ನೆತ್ತಿಯಿಂದ ಆರಂಭವಾಗಿ ಕುತ್ತಿಗೆಯ ಹಿಂಭಾಗದ ಕುತ್ತಿಗೆವರೆಗೂ ವ್ಯಾಪಿಸಿದೆ. ಇದು ಈ ಹಕ್ಕಿಯನ್ನು ಗುರುತಿಸಲು ತುಂಬಾ ಸಹಾಯಕವಾಗಿದೆ. ತಲೆಯ ಉಳಿದ ಭಾಗ, ಕೆನ್ನೆ ಕುತ್ತಿಗೆಯ ಕೆಳಭಾಗ ಕಪ್ಪು ಬಣ್ಣದಿಂದ ಕೂಡಿದೆ. ಹೊಳೆವ ಪುಟ್ಟ ಕಣ್ಣು , ಉರುಟುದೇಹ ಇರುವ ಇದೊಂದು ಕುಳ್ಳ ಹಕ್ಕಿ. ಇದು ನಮ್ಮ ದೇಶದ ಹಕ್ಕಿ. ಪುಟ್ಟ, ಬೂದು ಬಣ್ಣದ, ಗಟ್ಟಿಯಾದ ಚುಂಚು ಇದೆ.
ಇಡೀ ದೇಹದಲ್ಲಿ ನೀಲಿ ಮಿಶ್ರಿತ ಹಸಿರು ಬಣ್ಣ ಪ್ರಧಾನವಾಗಿ ಇದೆ. ಕಿರುಕಾಡು, ಕುರುಚಲು ಕಾಡಿನಲ್ಲಿ ಇದರ ವಾಸ. ಮೋಟು ಪುಕ್ಕದ ಅಡಿಭಾಗ ಬಿಟ್ಟು ಉಳಿದ ಭಾಗ ಹಸಿರಿರುವುದರಿಂದ ಕಾಡಿನ ಹಸಿರುಬಣ್ಣದ ಗಿಡಗಳ ಮಧ್ಯೆ ಇದನ್ನು ಗುರುತಿಸುವುದು ಕಷ್ಟಸಾಧ್ಯ. ಈ ಹಕ್ಕಿ ತನ್ನ ತರಗೆಲೆ ಅಡಿಯಲ್ಲಿರುವ ಇರುವೆ, ಕಟ್ಟಿರುವೆ, ಗೋಂದಾಗಳು, ಅದರ ಮೊಟ್ಟೆಗಳನ್ನು ತಿನ್ನುತ್ತದೆ. ಈ ಕೆಲಸಕ್ಕೆ ಅನುಕೂಲವಾಗುವಂತೆ ಉದ್ದುದ್ದ ಕಾಲಿದೆ. ಇದರ ವರ್ತನೆ, ಗ್ರೌಂಡ್ ಟ್ರಶ್, ಇಲ್ಲವೇ ಮೆಣಸಿನ ಹಕ್ಕಿಯನ್ನು ಹೋಲುತ್ತದೆ. ಕೆಲವೊಮ್ಮೆ ಇದರ ಕಾಲಿನ ಬಣ್ಣ ತಿಳಿ ಗುಲಾಬಿಯಿಂದ ಕೂಡಿರುವುದೂ ಉಂಟು. ಮರಿಗಳಲ್ಲಿ ಈ ಬಣ್ಣ ಇರುವುದೋ? ಇಲ್ಲವೇ ಮರಿಮಾಡುವ ಸಮಯದಲ್ಲಿ ಮಾತ್ರ ಹೀಗೆ ತಿಳಿ ಗುಲಾಬಿ ಬಣ್ಣ ಬರುವುದೋ ತಿಳಿದಿಲ್ಲ.
ಇದು “ಪಿಟ್ಟಿಡಿಯ’ ಕುಟುಂಬಕ್ಕೆ ಸೇರಿದ ಹಕ್ಕಿ. 42 ರಿಂದ 70 ಗ್ರಾಂ. ತೂಕವಿರುತ್ತದೆ. ಇದರ ಚಿಕ್ಕ ಪುಕ್ಕದ ಅಡಿಯಲ್ಲಿ ಕೆಂಪು ಬಣ್ಣ ಇದೆ. ದೇಹ ರೆಕ್ಕೆ ತಿಳಿ ಅಚ್ಚ ಹಸಿರಿದೆ. ರೆಕ್ಕೆ ಬುಡದಲ್ಲಿ ಪಾರ್ಶದಲ್ಲಿರುವ ತಿಳಿ ನೀಲಿ ಗೆರೆ ಇದನ್ನು ಇದೇ ಜಾತಿಗೆ ಸೇರಿದ ಭಾರತೀಯ ಪಿಟ್ಟ, ನೀಲಿ ನೆತ್ತಿಯ ಪಿಟ್ಟಾ ಹಕ್ಕಿಗಳಿಂದ ಪ್ರತ್ಯೇಕವಾಗಿ ಗುರುತಿಸಲು ನೆರವಾಗಿದೆ. ಹೊಟ್ಟೆಯ ಭಾಗದಲ್ಲಿ ತಿಳಿ ಕೇಸರಿ ಮಿಶ್ರಿತ ಬಿಳಿ ಛಾಯೆ ಕಾಣುತ್ತದೆ. ಎದೆ ಭಾಗ ಮುಸುಕು ಹಸಿರು ಬಣ್ಣದಿಂದ ಕೂಡಿದೆ. ಉದ್ದನೆ ಕಾಲಲ್ಲಿ ಮೂರು ಬೆರಳಿದೆ. ಕಾಲಿನ ಮುಕ್ಕಾಲರಷ್ಟು ಉದ್ದ ಈ ಬೆರಳಿದ್ದು ತುದಿಯಲ್ಲಿ ಉಗುರಿದೆ. ಈ ಉಗುರು ನೆಲದಲ್ಲಿ ಓಡಾಡಿ ಮಣ್ಣಿನ ಅಡಿ ಇರುವ ಲಾರ್ವಾವನ್ನು ಹಿಡಿದು ತಿನ್ನಲು ಸಹಾಯಕವಾಗಿದೆ.
ಇದು ನೆಲದಲ್ಲಿ ಆಹಾರ ಸಂಗ್ರಹಿಸುವಾಗ ತನ್ನ ಕಾಲಿನ ಉಗುರಿನ ಸಹಾಯದಿಂದ ನೆಲ ಕೆದರಿ ಅಲ್ಲಿರುವ ಇರುವೆ, ಅದರ ಮೊಟ್ಟೆ, ಕಾಡಿನ ಮರಗಳಿಗೆ ಭಾದಕವಾದ ಹುಳು ಉಪ್ಪಟೆಗಳನ್ನು ತಿಂದು ಕಾಡಿನ ಸಂರಕ್ಷಣೆಗೆ ಸಹಾಯ ಮಾಡುತ್ತದೆ. ಇದರ ಪಾತ್ರ ಸಹ ಇದೆ. ಈ ಪಿಟ್ಟಾ ಮರಿಮಾಡುವ ಸಮಯದಲ್ಲಿ, ಬಿದಿರಿನ ಕಾಡಿನ ಜಾಗದಲ್ಲಿರುವುದರಿಂದ ಅಲ್ಲಿ ಬಿದ್ದ ಬಿದಿರಕ್ಕಿಗಳನ್ನು ಸಹ ತನ್ನ ಆಹಾರವಾಗಿ ತಿನ್ನುತ್ತದೆ. ಇದು ಕ್ವೀಕ್ ಕ್ವೀಕ್-ಕ್ವೀಕ್ ಕ್ವೀಕ್ ಅಂತ ಕೂಗುತ್ತಲೇ ಸ್ವಲ್ಪ ಸಮಯದ ಅಂತರದಲ್ಲಿ ಸಿಳ್ಳು ಹಾಕುತ್ತದೆ. ತನ್ನ ದನಿಯಿಂದ ಅದರ ಇರುನೆಲೆ ಘೋಷಿಸುತ್ತದೆ. ಫೆಬ್ರವರಿಯಿಂದ ಅಕ್ಟೋಬರ್‌ವರೆಗೆ ಇದು ಮರಿಮಾಡುವ ಸಮಯ. ಬಿದಿರು ಇರುವ ಕಾಡಿನಜಾಗದಲ್ಲಿ ನೆಲದಲ್ಲೇ ಗೂಡು ನಿರ್ಮಿಸುತ್ತದೆ.
ಪಿ. ವಿ. ಭಟ್ ಮೂರೂರು