ಗುವಾಹಟಿ : 88 ಜೀವಗಳನ್ನು ಬಲಿಪಡೆದಿದ್ದ ಅಸ್ಸಾಂ ಸೀರಿಯಲ್ ಬ್ಲಾಸ್ಟ್ ಕೇಸಿನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಇಂದು ಬುಧವಾರ ನ್ಯಾಶನಲ್ ಡೆಮೋಕ್ರಾಟಿಕ್ ಫ್ರಂಟ್ ಆಫ್ ಬೋಡೋ ಲ್ಯಾಂಡ್ (NDFB) ಇದರ ಮುಖ್ಯಸ್ಥ ಹಾಗೂ ಇತರ 9 ಸದಸ್ಯರಿಗೆ ಜೀವವಾಧಿ ಜೈಲು ಶಿಕ್ಷೆಯನ್ನು ವಿಧಿಸಿದೆ.
ಕೋರ್ಟ್ ಆವರಣಕ್ಕೆ ಅತ್ಯಂತ ಬಿಗಿ ಭದ್ರತೆ ಒದಗಿಸಲಾಗಿದ್ದುದರ ನಡುವೆ ಸಿಬಿಐ ವಿಶೇಷ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ ಅವರು ಅಸ್ಸಾಂ ಬ್ಲಾಸ್ಟ್ ಕೇಸಿನ ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದರು.
ಜೀವಾವಧಿ ಜೈಲು ಶಿಕ್ಷೆ ಪಡೆದವರೆಂದರೆ ದಯಾಮೇರಿ, ಜಾರ್ಜ್ ಬೋಡೋ, ಬಿ ತರಾಯಿ, ರಾಜು ಸರ್ಕಾರ್, ಅಂಚೈ ಬೋಡೋ, ಇಂದ್ರ ಬ್ರಹ್ಮ, ಲೋಕೋ ಬಸುಮತರಿ, ಖರ್ಗೆಶ್ವರ ಬಸುಮತರಿ, ಅಜಯ್ ಬಸುಮತರಿ ಮತ್ತು ರಾಜೇನ್ ಗೋಯರಿ.
ಇತರ ಮೂವರು ಅಪರಾಧಿಗಳಾಗಿರುವ ಪ್ರಭಾತ್ ಬೋಡೋ, ಜಯಂತಿ ಬಸುಮತರಿ ಮತ್ತು ಮಥುರಾ ಬ್ರಹ್ಮ ಇವರನ್ನು ಕೋರ್ಟ್ ವಿಧಿಸಿರುವ ದಂಡ ಮೊತ್ತವನ್ನು ಪಾವತಿಸಿದ ಬಳಿಕ ಬಿಡುಗಡೆ ಮಾಡಲಾಗುವುದು.
ಈಗಾಗಲೇ ತಮ್ಮ ಶಿಕ್ಷೆಯನ್ನು ಪೂರೈಸಿರುವ ನಿಲೀಮ್ ದಯಾಮೇರಿ ಮತ್ತು ಮೃದುಲ್ ಗೋಯರಿ ಅವರನ್ನು ಬಿಡುಗಡೆ ಮಾಡುವಂತೆ ಸಿಬಿಐ ಕೋರ್ಟ್ ಆದೇಶಿಸಿತು.
‘ನಾನು ನಿರಪರಾಧಿಯಾಗಿದ್ದು ನನ್ನ ವಿರುದ್ಧ ನೀಡಲಾಗಿರುವ ತೀರ್ಪನ್ನು ನಾನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ’ ಎಂದು NDFB ಮುಖ್ಯಸ್ಥ, ಪೊಲೀಸರಿಂದ ಕಾರಾಗೃಹಕ್ಕೆ ಒಯ್ಯಲ್ಪಡುತ್ತಿದ್ದಾಗ, ಸುದ್ದಿಗಾರರಿಗೆ ಹೇಳಿದರು.
ಕೋರ್ಟ್ ಆವರಣದಲ್ಲಿ ಬೆಳಗ್ಗಿನಿಂದಲೇ ಜಮಾಯಿಸಿದ್ದ NDFB ಮುಖ್ಯಸ್ಥನ ಬೆಂಬಲಿಗರು ಪ್ರತ್ಯೇಕ ಬೋಡೋಲ್ಯಾಂಡ್ ಪರ ಘೋಷಣೆಯನ್ನು ಕೂಗಿದರು.