ಮುಂಬೈ: ಮಹಾರಾಷ್ಟ್ರದ ರಾಜಕೀಯ ಪ್ರಹಸನಗಳು ಮುಂದುವರಿದಿದ್ದು, ಅಜಿತ್ ಪವಾರ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂವರು ಎನ್ ಸಿಪಿ ನಾಯಕರನ್ನು ಪಕ್ಷದ ವರಿಷ್ಠ ಶರದ್ ಪವಾರ್ ಉಚ್ಛಾಟಿಸಿದ್ದಾರೆ.
ಪಕ್ಷದ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಶಿವಾಜಿ ರಾವ್ ಗರ್ಜೆ, ಪಕ್ಷದ ಅಕೋಲಾ ನಗರ ಜಿಲ್ಲಾಧ್ಯಕ್ಷ ವಿಜಯ್ ದೇಶಮುಖ್ ಮತ್ತು ಪಕ್ಷದ ಮುಂಬೈ ವಿಭಾಗದ ಕಾರ್ಯಾಧ್ಯಕ್ಷ ನರೇಂದ್ರ ರಾಣೆ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ.
ಪಕ್ಷದ ನಿಯಮಗಳು ಮತ್ತು ಶಿಸ್ತನ್ನು ಈ ಮೂವರು ಉಲ್ಲಂಘಿಸಿದ್ದಾರೆ. ಆದ್ದರಿಂದ ಈ ಮೂವರನ್ನು ಪಕ್ಷದ ಹುದ್ದೆಗಳಿಂದ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ತೆಗೆಯಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಇದಲ್ಲದೆ, ಪಕ್ಷದ ರಾಜ್ಯ ಶಿಷ್ಯ ಸಮಿತಿಯು “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ” ಒಂಬತ್ತು ಎನ್ ಸಿಪಿ ಶಾಸಕರನ್ನು ಅನರ್ಹಗೊಳಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಇದನ್ನೂ ಓದಿ:ಕೊಲ್ಲೂರಿನಲ್ಲಿ ಚಿನ್ನಾಭರಣ ಕಳವು; ಆರೋಪಿ ಶಿವಮೊಗ್ಗದಲ್ಲಿ ಬಂಧನ
ಎನ್ ಸಿಪಿ ಪಕ್ಷದ ಹಿರಿಯ ನಾಯಕ ಮತ್ತು ಪಕ್ಷದ ವರಿಷ್ಠ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಭಾನುವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ತನ್ನ ಎಂಟು ಶಾಸಕರೊಂದಿಗೆ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಅಲ್ಲದೆ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.