ನವದೆಹಲಿ: ಮಹಾತ್ಮ ಗಾಂಧಿ ಹತ್ಯೆ, ಹಿಂದೂ ಮತ್ತು ಮುಸ್ಲಿಂ ಭಾವೈಕತ್ಯೆಯ ವಿಚಾರಗಳು, ಆರ್‌ಎಸ್‌ಎಸ್ ಮೇಲೆ ವಿಧಿಸಲಾಗಿದ್ದ ನಿಷೇಧದ ಬಗೆಗಿನ ಪಠ್ಯಗಳನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಆರ್‌ಟಿ) ಕೈಬಿಟ್ಟಿದೆ.
ಕೆಲ ದಿನಗಳ ಹಿಂದೆ ಇತಿಹಾಸ ಪಠ್ಯದಿಂದ ಮೊಘಲ್ ಸಾಮ್ರಾಜ್ಯದ ಪೂರ್ಣ ಭಾಗವನ್ನು ತೆಗೆದು ಹಾಕಲಾಗಿತ್ತು. ಗುಜರಾತ್‌ನಲ್ಲಿ ಕೂಡ 2002ರ ಗಲಭೆಗೆ ಸಂಬಂಧಿಸಿದ ಅಂಶಗಳನ್ನು ಪಠ್ಯದಿಂದ ಕೈಬಿಡಲಾಗಿದೆ.
ಆದರೆ, ಈ ಕ್ರಮಕ್ಕೆ ಸ್ಪಷ್ಟನೆ ನೀಡಿರುವ ಮಂಡಳಿ ಪಠ್ಯಕ್ರಮವನ್ನು ತಿದ್ದುಪಡಿ ಮಾಡುವ ಅಥವಾ ಪರಿಷ್ಕರಿಸುವ ಕ್ರಮ ಪ್ರಸಕ್ತ ವರ್ಷ ಕೈಗೊಳ್ಳಲಾಗಿಲ್ಲ. ಕೆಲವೊಂದು ಪುನರಾವರ್ತನೆಯಾಗುವ ಅಂಶಗಳನ್ನು ತೆಗೆದು ಹಾಕಲಾಗಿದೆ ಎಂದು ಮಂಡಳಿ ಹೇಳಿದೆ.
ಆದರೆ, ಕಳೆದ ವರ್ಷ ಜೂನ್‌ನಲ್ಲಿ ಈ ಅಂಶವನ್ನು ಕೈಗೆತ್ತಿಕೊಳ್ಳಲಾಗಿತ್ತು ಎನ್‌ಸಿಇಆರ್‌ಟಿ ಮುಖ್ಯಸ್ಥ ದಿನೇಶ್ ಸಕ್ಲಾನಿ ಹೇಳಿದ್ದಾರೆ. ಅದರ ಬಗ್ಗೆ ವಿನಾ ಕಾರಣ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಅಭಿಪ್ರಾಯಪಪಟ್ಟಿದ್ದಾರೆ.
ಕಾಂಗ್ರೆಸ್ ಟೀಕೆ:
ದೇಶದ ಇತಿಹಾಸವನ್ನು ಪುನರ್ ರಚಿಸಲಾಗುತ್ತದೆ ಎಂದು ಹೇಳಿಕೊಳ್ಳುವವರು ಈಗ ಅದನ್ನು ಪೂರ್ಣ ಪ್ರಮಾಣದಲ್ಲಿ ತಿರುಚುವ ಸಾಹಸಕ್ಕೆ ತೊಡಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.