Advertisement

ಎನ್‌ಸಿಇಆರ್‌ಟಿ ಪಠ್ಯ: ಸಾಧನೆಗೆ ಸವಾಲು

10:53 AM Sep 23, 2018 | |

ಉಡುಪಿ: ಈ ಬಾರಿ ಎಸ್‌ಎಸ್‌ಎಲ್‌ಸಿಗೆ ಎನ್‌ಸಿಇಆರ್‌ಟಿ ಪಠ್ಯ ಕ್ರಮ (ಕೇಂದ್ರೀಯ ಪಠ್ಯಕ್ರಮ) ಅಳವಡಿಸಿ ಕೊಂಡಿರುವುದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅಧ್ಯಾಪಕರಿಗೂ ಹೊರೆಯಾಗಿದೆ. ಕಾರಣ ಸಿಲೆಬಸ್‌ (ಪಠ್ಯ) ಹೆಚ್ಚಾಗಿದ್ದು, ನಿಗದಿತ ಅವಧಿಯಲ್ಲಿ ಬೋಧನೆ ಪೂರ್ಣಗೊಳಿಸುವ ಸವಾಲಿದೆ.  ಸದ್ಯ ಅರ್ಧವಾರ್ಷಿಕ ಪರೀಕ್ಷೆಗೆ ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಸಿದ್ಧಗೊಳಿಸಲು ಶಿಕ್ಷಕರು ಸಾಹಸವನ್ನೇ ಮಾಡುವಂತಾಗಿದೆ.  

Advertisement

ಬೆಳಗ್ಗೆ, ಸಂಜೆ “ಸ್ಪೆಷಲ್‌ ಕ್ಲಾಸ್‌’
ಹೆಚ್ಚಿನ ಶಾಲೆಗಳಲ್ಲಿ ಬೆಳಗ್ಗೆ ಅರ್ಧ ಅಥವಾ ಒಂದು ತಾಸು ಮೊದಲೇ ಎಸ್‌ಎಸ್‌ಎಲ್‌ಸಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಸಂಜೆ ವೇಳೆಯೂ ಅರ್ಧ ಅಥವಾ ಒಂದು ತಾಸು ಹೆಚ್ಚುವರಿಯಾಗಿ ಪಾಠ ಮಾಡಲಾಗುತ್ತಿದೆ. ಶನಿವಾರವೂ ಮಧ್ಯಾಹ್ನ ಮೇಲೆ ಬಿಡುವು ನೀಡದೆ ಸಂಜೆವರೆಗೂ ಪಾಠ ಮುಂದುವರಿಸಲಾಗುತ್ತಿದೆ.  

ಇಲಾಖೆ ಆದೇಶ 
“ಈ ಹಿಂದೆ ಕೂಡ ಕೆಲವು ಶಾಲೆಗಳು ಸ್ವಯಂಪ್ರೇರಿತವಾಗಿ ಹೆಚ್ಚುವರಿ ತರಗತಿ ನಡೆಸಿ ಉತ್ತಮ ಫ‌ಲಿತಾಂಶಕ್ಕೆ ಯತ್ನಿಸಿ ಸಫ‌ಲವಾಗಿವೆ. ಈ ಬಾರಿ ಇಲಾಖೆಯಿಂದಲೂ ಆದೇಶ ನೀಡಿದ್ದೇವೆ. ಮಳೆ ಕಾರಣ ನೀಡಿದ ರಜೆ
ಯನ್ನು ಸರಿದೂಗಿಸುವುದಕ್ಕೂ ಹೆಚ್ಚುವರಿ ತರಗತಿಗಳು ಅವಶ್ಯವಾಗಿದೆ. ಎಸೆಸೆಲ್ಸಿ ಗೆ ಎಸ್‌ಸಿಇಆರ್‌ಟಿ ಪಠ್ಯ ಅಳವಡಿಸಿಕೊಂಡಿರುವುದರಿಂದ ಶಿಕ್ಷಕರಿಗೂ ಹೆಚ್ಚಿನ ಅವಧಿ ಅಗತ್ಯವಿರುವುದು ಗಮನಕ್ಕೆ ಬಂದಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  

ಅಕ್ಟೋಬರ್‌ನಲ್ಲಿ “ವಿಶ್ವಾಸಕಿರಣ’ 
ಕಲಿಕೆಯಲ್ಲಿ ಹಿಂದುಳಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಇಲಾಖಾ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಅಕ್ಟೋಬರ್‌ ರಜೆಯಲ್ಲಿ “ವಿಶ್ವಾಸ ಕಿರಣ’ ವಿಶೇಷ ತರಗತಿಗಳು ನಡೆಯಲಿವೆ. ಒಟ್ಟು 25 ವಿಶೇಷ ತರಗತಿಗಳು ನಡೆಯಬೇಕಿದ್ದು ಸಾಧ್ಯವಾದಷ್ಟು ವಿಶೇಷ ತರಗತಿಗಳನ್ನು ನಡೆಸಿ ಅನಂತರ ಪ್ರತಿ ರವಿವಾರ ಕೂಡ ತರಗತಿ ನಡೆಸಲು ನಿರ್ಧರಿಸಲಾಗಿದೆ. ಆದರೆ ಇದಕ್ಕೆ  ಶಿಕ್ಷಕರು ಮತ್ತು ಕೆಲವು ಮಂದಿ ಮಕ್ಕಳ ಹೆತ್ತವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೇರೆ ದಿನಗಳಾದರೆ ಎಲ್ಲ ಮಕ್ಕಳೂ ಒಟ್ಟಿಗೆ ಬರುತ್ತಾರೆ. ರವಿವಾರ ಕಲಿಕೆಯಲ್ಲಿ ಹಿಂದುಳಿದವರು ಮಾತ್ರ ಬರುತ್ತಾರೆ. ದೂರದ ಊರುಗಳಿಂದ ಒಬ್ಬೊಬ್ಬರಾಗಿ ಬರಲು ವಿದ್ಯಾರ್ಥಿಗಳು ಇಷ್ಟಪಡುವುದಿಲ್ಲ. ಶಿಕ್ಷಕರಿಗೂ ವಾರಕ್ಕೊಂದು ರಜೆ ಬೇಕು ಎನ್ನುತ್ತಾರೆ ಕೆಲವು ಮಂದಿ ಶಿಕ್ಷಕರು.

ಸವಾಲೇನು? 
ಎನ್‌ಸಿಇಆರ್‌ಟಿ ಅಳವಡಿಕೆಯಿಂದಾಗಿ ಪಠ್ಯ ಮುಗಿಸಲು ಹೆಚ್ಚಿನ ಅವಧಿಯೊಂದಿಗೆ ಅದನ್ನು ಅರ್ಥಮಾಡಿ ಕೊಳ್ಳಲು ವಿದ್ಯಾರ್ಥಿಗಳಿಗೂ ಹೆಚ್ಚಿನ ಕಾಲಾವಕಾಶ ಬೇಕು. ಇದರಲ್ಲಿ ಅಪ್ಲಿಕೇಶನ್‌ ಮಾದರಿಯ ಪ್ರಶ್ನೆಗಳನ್ನು ಹೆಚ್ಚು ಕೇಳಲಾಗುತ್ತದೆ. ವಿಜ್ಞಾನ ವಿಷಯದಲ್ಲಿ ಇದಕ್ಕೆ ಹೆಚ್ಚಿನ ಅವಕಾಶವಿದೆ. ಆದ್ದರಿಂದ ಕಂಠಪಾಠ ಮಾತ್ರ ಪ್ರಯೋಜನವಾಗದು. ಸ್ವಂತ ಬುದ್ಧಿಯೂ ಉಪಯೋಗಿಸಿ ಉತ್ತರಿಸಬೇಕಾಗುತ್ತದೆ. ಆದರೂ ಉತ್ತಮ ಫ‌ಲಿತಾಂಶಕ್ಕೆ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಉಡುಪಿಯ ಪ್ರೌಢಶಾಲೆಯೊಂದರ ಹಿರಿಯ ಶಿಕ್ಷಕರು ಅಭಿಪ್ರಾಯಪಡುತ್ತಾರೆ. 

Advertisement

ಗುಂಪು ಅಧ್ಯಯನಕ್ಕೂ ಅವಕಾಶ
ಎಸೆಸೆಲ್ಸಿಯವರಿಗೆ ಜುಲೈನಿಂದ ಬೆಳಗ್ಗೆ ಒಂದು ಹೆಚ್ಚುವರಿ ತರಗತಿಗೆ ಆದೇಶಿಸಿದ್ದೇವೆ. ಕಳೆದ ವರ್ಷ ಕೆಲವೆಡೆ ಕಲಿಕೆಯಲ್ಲಿ ಹಿಂದುಳಿದ ಗಂಡು ಮಕ್ಕಳಿಗಾಗಿ ರಾತ್ರಿವರೆಗೂ ತರಗತಿ ನಡೆಸಿದ ಒಂದೆರಡು ಶಾಲೆಗಳಿವೆ. ಈ ಬಾರಿ ಅರ್ಧವಾರ್ಷಿಕ ಪರೀಕ್ಷೆ ಬಳಿಕ ಸಂಜೆ ವೇಳೆ  ಗುಂಪು ಅಧ್ಯಯನಕ್ಕೂ ಆದೇಶ ನೀಡಲಾಗುವುದು.
ಡಿಡಿಪಿಐ, ಉಡುಪಿ

ಪರಿಹಾರ ಬೋಧನೆ
ಜು.1ರಿಂದ ಶನಿವಾರ ಊಟದ ಬಳಿಕ ಮಕ್ಕಳಿಗೆ ತರಗತಿ ಮಾಡುತ್ತೇವೆ. ರವಿವಾರ ತರಗತಿ ಆರಂಭಿಸಿಲ್ಲ. ಕಲಿಕೆಯಲ್ಲಿ ಹಿಂದುಳಿದ ಆಯ್ದ ಕೆಲವರಿಗೆ ಪರಿಹಾರ ಬೋಧನೆ ಮಾಡಲಾಗುತ್ತದೆ. ತೀರಾ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಡಿಸೆಂಬರ್‌ ಬಳಿಕ ವಿಶೇಷ ತರಗತಿ ನಡೆಸಿ ತೇರ್ಗಡೆಯಾಗಲು ಪ್ರಯತ್ನಿಸುತ್ತೇವೆ.
ಮುಖ್ಯೋಪಾಧ್ಯಾಯರು, ಸರಕಾರಿ ಪ್ರೌಢಶಾಲೆ, ಉಡುಪಿ

* ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next