ಹೊಸದಿಲ್ಲಿ: ನಿಮ್ಮ ಮಕ್ಕಳ ಜಾಲತಾಣ ಚಟುವಟಿಕೆಗಳ ಮೇಲೆ ಕಾಣದ ಕಣ್ಣೊಂದು ಗಮನಹರಿಸುತ್ತಿದೆ! ನಿಮ್ಮ ಮಕ್ಕಳು ಮಾದಕ ವ್ಯಸನಿಗಳು ಅಥವಾ ಆ ಬಗ್ಗೆ ಆಸಕ್ತಿ ಹೊಂದಿದವರೆಂಬ ಸುಳಿವು ಸಿಕ್ಕ ಕೂಡಲೇ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಬರುತ್ತದೆ. ನಿಮಗೆ ಎಲ್ಎಸ್ಡಿ ಬೇಕಾ? ಹೌದು ಎಂದರೆ ತಕ್ಷಣ “ವಿಕರ್ ಮೀ” ಎನ್ನುವ ವೆಬ್ಸೈಟ್ ಒಂದರಲ್ಲಿ ಮಾತುಕತೆ ಮುಂದುವರಿದು, ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪೀಕಲಾಗುತ್ತೆ. ಬಳಿಕ ಮನುಷ್ಯನನ್ನ ಭ್ರಮಾಲೋಕಕ್ಕೆ ತಳ್ಳುವ ಮಾದಕ ವಸ್ತು, ಎಲ್ಎಸ್ಡಿ (ಲೈಸರ್ಜಿಕ್ ಆ್ಯಸಿಡ್ ಡೈಥೈಲಮೇಡ್) ನಿಮ್ಮ ಮಕ್ಕಳ ಕೈ ಸೇರಲಿದೆ..
ಇದು ಸ್ವಸ್ಥ ಸಮಾಜವನ್ನು ಹಾಳು ಗೆಡವಲು, ಯುವಕರನ್ನು ವ್ಯಸನಿಗಳನ್ನಾಗಿಸಲು ಮಾದಕವಸ್ತು ಕಳ್ಳ ಸಾಗಣೆದಾರರು ಜಾಲತಾಣಗಳನ್ನು ಬಳಸಿಕೊಂಡು ಹಣೆಯುತ್ತಿರುವ ಜಾಲ! ಈ ಜಾಲವನ್ನೇ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್ಸಿಬಿ) ಭೇದಿಸಿದ್ದು, ಇಂಥ ಕೃತ್ಯ ಎಸಗುತ್ತಿದ್ದ 6 ಮಂದಿಯನ್ನು ಸದೆ ಬಡಿದಿದೆ.
ಹೌದು, ರಾಜಸ್ಥಾನದ ಜೈಪುರ ಮೂಲದ ಮಾಸ್ಟರ್ ಮೈಂಡ್ ಒಬ್ಬ ಮಾದಕವಸ್ತು ಎಲ್ಎಸ್ಡಿಯನ್ನು ಸಾಗಣೆ ಮಾಡಲು ಒಂದು ಜಾಲವನ್ನೇ ಸೃಷ್ಟಿಸಿದ್ದು, ಅದರಲ್ಲಿ 6 ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಅವರೆಲ್ಲರೂ ಬಹುತೇಕ ವಿದ್ಯಾರ್ಥಿಗಳೇ ಆಗಿದ್ದು, ಜಾಲತಾಣಗಳ ಮೂಲಕ ಈ ಕೃತ್ಯ ಎಸಗುತ್ತಿದ್ದರು. ಆದರೆ, ಎನ್ಸಿಬಿ ಅಧಿಕಾರಿಗಳು ತಮ್ಮ ಚಾಣಾಕ್ಷ ತನದಿಂದ ಈ ಗುಂಪನ್ನು ಪತ್ತೆಹಚ್ಚಿದೆ. ಅವರಿಂದ 10.50 ಕೋಟಿ ಮೌಲ್ಯದ ಒಟ್ಟು 15,000 ಎಲ್ಎಸ್ಡಿ ಪೀಸ್ಗಳನ್ನ ವಶಪಡಿಸಿಕೊಂಡಿದೆ. ಇದು 2 ದಶಕಗಳಲ್ಲೇ ಎನ್ಸಿಬಿ ನಡೆಸಿರುವ ಅತಿದೊಡ್ಡ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.