Advertisement

ಇಂದು ರಕ್ತದಾನ: 60ರ ವಯಸ್ಸಲ್ಲೂ ರಕ್ತದಾನವೇ ಕಾಯಕ!

10:28 AM Jun 14, 2018 | Team Udayavani |

ಕಾರವಾರ: ಜೂ.14ನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ರಕ್ತದಾನ ಎಲ್ಲ ದಾನಗಳಿಗಿಂತಲೂ ಶ್ರೇಷ್ಠ ಎಂಬ ಮಾತು ರೂಢಿಯಲ್ಲಿದೆ. ಇದಕ್ಕೆ ಅನ್ವರ್ಥಕವಾಗಿ ಕಾರವಾರದಲ್ಲಿ ರಕ್ತದಾನವನ್ನೇ ಕಾಯಕ ಮಾಡಿಕೊಂಡ ವ್ಯಕ್ತಿ ಒಬ್ಬರಿದ್ದಾರೆ. 1978ರಿಂದಲೇ ರಕ್ತದಾನ ಮಾಡುತ್ತಾ ಬಂದಿರುವ ಕಾರವಾರದ ನಜೀರ್‌ ಅಹ್ಮದ್‌ ಯು. ಶೇಖ್‌, 60ನೇ ವಯಸ್ಸಲ್ಲೂ ರಕ್ತದಾನ ಮಾಡುತ್ತಿದ್ದಾರೆ. ಈಗಾಗಲೇ 70 ಬಾರಿ ರಕ್ತದಾನ ಮಾಡಿದ್ದಾರೆ! ನಜೀರ್‌ ಶೇಖ್‌ ಹೆಸರು ರಕ್ತದಾನದೊಂದಿಗೆ ತಳುಕು ಹಾಕಿಕೊಂಡಿದೆ. ಈಗಲೂ ಅವರು ರಕ್ತದಾನ ಶಿಬಿರಗಳನ್ನು ಪ್ರತಿವರ್ಷ ನಡೆಸುತ್ತಾರೆ. ಶಾಲಾ ಕಾಲೇಜುಗಳಿಗೆ ತೆರಳಿ ರಕ್ತದ ಗ್ರೂಪ್‌ ಗುರುತಿಸುವ ಶಿಬಿರಗಳನ್ನು ಮಾಡಿ ಯುವಕರಲ್ಲಿ ರಕ್ತದಾನದ ಮಹತ್ವವನ್ನು ಸಾರುತ್ತಿದ್ದಾರೆ. ನಜೀರ್‌ ಇದ್ದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ವೈದ್ಯರ ಮತ್ತು ನರ್ಸ್‌ಗಳ ತಂಡ ಸದಾ ಸಜ್ಜು. ಜಿಲ್ಲಾ ಆರೋಗ್ಯ ಕೇಂದ್ರದ ನೆರವು ಪಡೆದು ಹತ್ತು ಹಲವು ರಕ್ತದಾನ ಜಾಗೃತಿ ಶಿಬಿರಗಳನ್ನು ನಜೀರ್‌ ಇವತ್ತಿಗೂ ಮಾಡುತ್ತಾ ಬಂದಿದ್ದಾರೆ. 1978ರಿಂದ ಈತನಕ 220ಕ್ಕೂ ಹೆಚ್ಚು ರಕ್ತದಾನ ಶಿಬಿರ ಸಂಘಟಿಸಿದ ಕೀರ್ತಿ ಇವರಿಗಿದೆ. 1990ರಲ್ಲಿ 50ನೇ ಬಾರಿಗೆ ರಕ್ತದಾನ ಮಾಡಿದಾಗ ಇವರ ಹೆಸರು ಹೆಚ್ಚು ಪ್ರಚಲಿತಕ್ಕೆ ಬಂತು. ಜಿಲ್ಲೆಯಲ್ಲೇ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ದಾಖಲೆ ಸಹ ನಜೀರ್‌ ಅವರ ಹೆಸರನಲ್ಲಿದೆ.

Advertisement

ಜಿಲ್ಲಾ ಯುವಕ ಸಂಘದ ಮೂಲಕ ಸಮಾಜ ಸೇವೆಗೆ ಕಾಲಿಟ್ಟ ನಜೀರ್‌ ಶೇಖ್‌ ಹಿಂತಿರುಗಿ ನೋಡಿದ್ದೇ ಇಲ್ಲ. ನೆಹರು ಯುವಕ ಕೇಂದ್ರ, ರೆಡ್‌ ಕ್ರಾಸ್‌ ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್‌ ಅಜೀವ ಸದಸ್ಯರಾಗಿ ಕ್ರಿಯಾಶೀಲರಾಗಿದ್ದಾರೆ.

2001ರಲ್ಲಿ ರಕ್ತದಾನ ಮಾಡಿದಾಗ ಇವರ ಹೆಸರು ಅಂದಿನ ರಾಜ್ಯಪಾಲೆ ವಿ.ಎಸ್‌. ರಮಾದೇವಿ ಅವರ ಗಮನಕ್ಕೆ ಬಂತು. 2003ರಲ್ಲಿ ಅಂದಿನ ರಾಜ್ಯಪಾಲ ಟಿ.ಎನ್‌.ಚರ್ತುವೇದಿ ಅವರ ಸಮ್ಮುಖದಲ್ಲಿ ರಕ್ತದಾನ ಮಾಡಿ ಅವರ ಗಮನ ಸಹ ಸೆಳದರು.

44 ವರ್ಷಗಳಿಂದ ಒಂದಿಲ್ಲೊಂದು ಸಮಾಜಮುಖೀ ಕಾರ್ಯದಲ್ಲಿ ಇರುವ ನಜೀರ್‌ ಶೇಖ್‌ ಅವರ ಕುಟುಂಬ ಸಹ ರಕ್ತದಾನ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ. ಪತ್ನಿ ಶಿಕ್ಷಕಿ ಫೈರೋಜಾ ಬೇಗಂ ಸಹ ರಕ್ತದಾನ ಮಾಡುತ್ತಾ ಬಂದಿದ್ದಾರೆ. ಮಕ್ಕಳಾದ ಮಹಮ್ಮದ್‌ ಹಸನ್‌ ಮತ್ತು ಮಹಮ್ಮದ್‌ ಉಸ್ಮಾನ್‌ ರಕ್ತದಾನ ಶಿಬಿರಗಳಲ್ಲಿ ಸಕ್ರಿಯಾರಾಗಿದ್ದಾರೆ.

ರಕ್ತದಾನ ಕುಟುಂಬ

Advertisement

 ಕುಟುಂಬದ ಎಲ್ಲ ಸದಸ್ಯರು ರಕ್ತದಾನ ಮಾಡುವುದು ರೂಢಿಸಿಕೊಂಡ ಕಾರಣ 2015ರಲ್ಲಿ ನಜೀರ್‌ ಅಹಮ್ಮದ್‌ ಯು. ಶೇಖ್‌ ಕುಟುಂಬವನ್ನು ರಕ್ತದಾನ ಜಾಗೃತಿ ಕುಟುಂಬವಾಗಿ ಜಿಲ್ಲಾ ಆರೋಗ್ಯ ಇಲಾಖೆ ಗುರುತಿಸಿತು. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ನಜೀರ್‌ ಕುಟುಂಬವನ್ನು ಈ ಕಾರಣಕ್ಕೆ ರಕ್ತದಾನ ದಿನಾಚರಣೆ ದಿನ ಅಂದಿನ ಜಿಲ್ಲಾ ನ್ಯಾಯಾ ಧೀಶರಾದ ರೇಣುಕೆ ಅವರು ನಜೀರ್‌ ಅವರನ್ನು ಸನ್ಮಾನಿಸಿ ರಕ್ತದಾನ ಜಾಗೃತಿ ಮುಂದುವರಿಸುವಂತೆ ಸೂಚಿಸಿದ್ದರು.

ರಕ್ತದ ಗುಂಪು ಗುರುತಿಸುವಿಕೆ: 2017-18ರಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ತೆರಳಿದ ನಜೀರ್‌ ಶೇಖ್‌ ವಿದ್ಯಾರ್ಥಿಗಳ ರಕ್ತದ ಗುಂಪು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಇದಕ್ಕಾಗಿ ಅವರು ಜಿಲ್ಲಾಸ್ಪತ್ರೆಯ ರಕ್ತದಾನ ಬ್ಯಾಂಕ್‌ ಸಿಬ್ಬಂದಿ ನೆರವು ಪಡೆದು ಈ ಕಾಯಕ ಮುಂದುವರಿಸಿದರು.ಇದರಿಂದ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ತಿಳಿಸಲು ಒಂದು ದಾರಿ ಸೃಷ್ಟಿಯಾಯಿತು. ಇಂತಹ 53 ಶಿಬಿರಗಳು ಬ್ಲಿಡ್‌ ಗ್ರೂಪ್‌ ಟೆಸ್ಟ್‌ ಗಾಗಿ ನಡೆದವು. ಜೊತೆಗೆ 2017-18ರಲ್ಲೇ 40 ರಕ್ತದಾನ ಶಿಬಿರಗಳು ಸಹ ನಡೆಸುವ ಮೂಲಕ ಕಾರವಾರ ತಾಲೂಕಿನಲ್ಲಿ ರಕ್ತದಾನದ ಮಹತ್ವ ಸಾರಲು ನಜೀರ್‌ ಶೇಖ್‌ ಅವರೇ ಕಟ್ಟಿದ ಆಜಾದ್‌ ಯುತ್‌ ಕ್ಲಬ್‌ ಶ್ರಮ ಹಾಕಿತು.

ಸಂದ ಪ್ರಶಸ್ತಿ

ರಕ್ತದಾನದ ಮಹತ್ವ ಸಾರಲು ಹೆಚ್ಚು ಸಮಯ ಮೀಸಲಿಟ್ಟ ನಜೀರ್‌ ಅವರಿಗೆ 1989ರಲ್ಲೇ ರಾಜ್ಯ ಯುವ ಪ್ರಶಸ್ತಿ ಹುಡುಕಿ ಬಂತು. 1991ರಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ, 2008ರಲ್ಲಿ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿದೆ.

ಜಿಲ್ಲಾ ರೆಡ್‌ ಕ್ರಾಸ್‌ನಲ್ಲಿ ನಜೀರ್‌ ಕ್ರಿಯಾಶೀಲ ಸದಸ್ಯರಾಗಿದ್ದು, 2009ರಲ್ಲಿ ಅಂದಿನ ರೆಡ್‌ ಕ್ರಾಸ್‌
ಸಂಸ್ಥೆ ಅಧ್ಯಕ್ಷ ರಾಮೇಶ್ವರ ಠಾಕೂರ್‌ ಉತ್ತಮ ಸಮಾಜ ಸೇವಕ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. 2016ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಅತ್ಯಂತ ಸಂಕಷ್ಟದಲ್ಲಿರುವವರಿಗೆ ರಕ್ತದಾನ ಮಾಡಿದೆ ಎಂಬ ಆತ್ಮತೃಪ್ತಿ ಸದಾ ನಮ್ಮೊಂದಿಗೆ ಇದೆ. ಆಸ್ಪತ್ರೆಯಲ್ಲಿ ಇರುವವರಿಗೆ ರಕ್ತದ ಅವಶ್ಯಕತೆ ಬಿದ್ದಾಗ ರಕ್ತದಾನ ಮಾಡಿ. ನಿಮ್ಮ ಜೀವನದ ದೃಷ್ಟಿಕೋನವೇ ಬದಲಾಗುತ್ತದೆ. ರಕ್ತದಾನ ಮಾಡಿದರೆ ಹೊಸದಾಗಿ ರಕ್ತ ಉತ್ಪತ್ತಿಯಾಗುತ್ತದೆ. ಆರೋಗ್ಯವಂತ ಜೀವನವೂ ನಮ್ಮದಾಗುತ್ತದೆ.
 ನಜೀರ್‌ ಅಹಮ್ಮದ್‌ ಶೇಖ್‌

ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next