ಸಿಂದಗಿ: ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದು ಮತ ಹಾಕುವ ಮೂಲಕ ನಿಮ್ಮ ಮನೆಯ ಮಗಳನ್ನು ವಿಧಾನಸೌಧಕ್ಕೆ ಕಳುಹಿಸಿ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಮನವಿ ಮಾಡಿಕೊಂಡರು.
ಬುಧವಾರ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಸಿಂದಗಿ ಉಪಚುನಾವಣೆ ನಿಮಿತ್ತ ಜೆಡಿಎಸ್ ತಾಲೂಕು ಘಟಕ ಹಮ್ಮಿಕೊಂಡ ಚುನಾವಣಾ ಪ್ರಚಾರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧಿಕಾರವಿದ್ದಾಗ ಸಾವಿರಾರು ಕೋಟಿ ಅನುದಾನವನ್ನು ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದಾರೆ. ಅವರ ಅನುದಾನದಿಂದ ಕ್ಷೇತ್ರದಲ್ಲಿ ನೀರಾವರಿಯಾಗುವ ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದರು.
ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಜನತಾ ಪರಿವಾರ ಸರಕಾರವಿದ್ದಾಗ ಮಾತ್ರ ಅಭಿವೃದ್ಧಿಯಾಗುವ ಜೊತೆಗೆ ರೈತರ ಆರ್ಥಿಕ ಜೀವನ ಸುಧಾರಣೆಯಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಿದ್ದಾಗ ಆಲಮೇಲ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದರು. ಆಲಮೇಲ ಪಟ್ಟಣಕ್ಕೆ ತೋಟಗಾರಿಕೆ ಕಾಲೇಜ್ ಮಂಜೂರು ಮಾಡಿದರು. ಹೀಗೆ ಸಾಕಷ್ಟು ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದರು.
ಶಾಸಕ ಎಂ.ಸಿ. ಮನಗೂಳಿ ಅವರು ನಮ್ಮಿಂದ ಅಗಲಿದ್ದರಿಂದ ಈ ಕ್ಷೇತ್ರ ತೆರವಾಯಿತು. ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಕಾರ್ಯ ನಿರ್ವಹಿಸಿದ ನಮ್ಮ ಮಾವರಾದ ದಿ| ಐ.ಬಿ. ಅಂಗಡಿ ಅವರ ಮನೆತನಕ್ಕೆ ಟಿಕೆಟ್ ನೀಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ಅವರ ಕೈ ಬಲ ಪಡಿಸಿ ಎಂದು ಮನವಿ ಮಾಡಿಕೊಂಡರು.
ಜೆಡಿಎಸ್ ತಾಲೂಕಾಧ್ಯಕ್ಷ ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ನಂಬಿದವರನ್ನು ಎಂದು ಕೈ ಬಿಡುವ ಪಕ್ಷವಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅ ಧಿಕಾರ ಅನುಭವಿಸಿ ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸಿ. ಜೆಡಿಎಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಅವರನ್ನು ಬಹುಮತದಿಂದ ಗೆಲ್ಲಿಸೋಣ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಕಸ್ತೂರಬಾಯಿ ದೊಡಮನಿ, ಅನ್ನಪೂರ್ಣ ಹೋಟಗಾರ, ಜಾಫರ ಅಂಗಡಿ, ಶಿವಾನಂದ ಕೋಟಾರಗಸ್ತಿ, ಅನ್ನಪೂರ್ಣ ಹೊಟಗಾರ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತಯಾಚನೆ ಮಾಡಿದರು.