ಚಿತ್ರದುರ್ಗ: ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿದ ಪವಾಡ ಪುರುಷ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಸುಡುವ ಬಿಸಿಲು, ಕೆರೋನಾ ಆತಂಕ, ಗಾಳಿ, ದೂಳು ಯಾವುದನ್ನೂ ಲೆಕ್ಕಿಸದೆ ಹಟ್ಟಿ ತಿಪ್ಪೇಶನ ಭಕ್ತರು ಬೆಳಗ್ಗೆಯಿಂದಲೇ ಜಾತ್ರೆಗಾಗಿ ನಾಯಕನಹಟ್ಟಿಯತ್ತ ಮುಖ ಮಾಡಿದ್ದರು.
ನಾಯಕನಹಟ್ಟಿಯ ದೊಡ್ಡ ಕೆರೆ ಕಟ್ಟಿಸಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಪವಾಡಗಳ ಮೂಲಕ ಮಧ್ಯ ಕರ್ನಾಟಕದ ಜನಮನದಲ್ಲಿ ನೆಲೆ ನಿಂತಿದ್ದಾರೆ. ಪರಿಣಾಮ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಿಂದ ಲಕ್ಷಾಂರ ಭಕ್ತರು ಬಂದು ಜಾತ್ರೆಯಲ್ಲಿ ಭಾಗವಹಿಸಿದ್ದರು.
ತಿಪ್ಪೇರುದ್ರಸ್ವಾಮಿ ಐಕ್ಯವಾಗಿರುವ ಹೊರಮಠ ಹಾಗೂ ದೇವರ ವಿಗ್ರಹ ಹಾಗೂ ಮುಖ್ಯವಾಗಿರುವ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಧ್ಯಾಹ್ನ 3.30 ರ ಚಿತ್ತಾ ನಕ್ಷತ್ರದಲ್ಲಿ ತಿಪ್ಪೇರುದ್ರಸ್ವಾಮಿ ರಥವನ್ನು ರಥ ಬೀದಿಯಿಂದ ಹೊರಮಠದವರೆಗೆ ಎಳೆಯಲಾಯಿತು. ಈ ವೇಳೆ ಅಸಂಖ್ಯ ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
26 ಲಕ್ಷ ರೂ.ಗೆ ಮುಕ್ತಿಭಾವುಟ ಹರಾಜು:
ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಭಾವುಟದ ಹರಾಜು ಪ್ರಕ್ರಿಯೆಯಲ್ಲಿ ಹಲವರು ಭಾಗಿಯಾಗಿದ್ದರು. ಕೆಎಂಎಫ್ ಸದಸ್ಯ ಚಳ್ಳಕೆರೆಯ ಉದ್ಯಮಿ ಸಿ. ವೀರೇಂದ್ರಬಾಬು 26 ಲಕ್ಷ ರೂ.ಗೆ ಹರಾಜಿನಲ್ಲಿ ಪಡೆದುಕೊಂಡರು. ನಂತರ ದೊಡ್ಡ ರಥಕ್ಕೆ ಪೂಜಿ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.