ನಾಯಕನಹಟ್ಟಿ: ವಿವಿ ಸಾಗರದಿಂದ 0.25 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಆದರೆ ಈ ನೀರು ಚಳ್ಳಕೆರೆ ತಾಲೂಕನ್ನೇ ಪ್ರವೇಶ ಮಾಡಿಲ್ಲ. ಈ ಬಗ್ಗೆ ಜನರಿಗೆ ಆತಂಕ ಅನಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವಿ ಸಾಗರದ ನೀರು ಹಿರಿಯೂರು ತಾಲೂಕಿನಲ್ಲಿ ಹರಿಯುವ ವೇಳೆಗೆ ನಿಗದಿತ ಪ್ರಮಾಣದ
ನೀರು ಪೂರ್ಣಗೊಂಡಿದೆ. ಆದ್ದರಿಂದ ನೀರಾವರಿ ಇಲಾಖೆ 0.25 ಟಿಎಂಸಿ ನೀರನ್ನು ವಿವಿ ಸಾಗರದಿಂದ ಹರಿಸಿದ ತಕ್ಷಣ ನಿಲ್ಲಿಸಿದೆ. ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ವಿವಿ ಸಾಗರದಿಂದ ಸ್ಥಗಿತಗೊಳಿಸಲಾದ ನೀರು ಹರಿಸುವಿಕೆಯನ್ನು ಮತ್ತೆ ಆರಂಭಿಸಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಬೇಕಾಗಿತ್ತು. ಇದಕ್ಕಾಗಿ ನೀರಾವರಿ ಇಲಾಖೆ ಒಪ್ಪಿಗೆ ನೀಡಿದೆ. ಆದರೆ ಕೋವಿಡ್ ಕಾರಣದಿಂದ ಇದು ವಿಳಂಬವಾಗಿದೆ. ಪ್ರತಿ ಕೆರೆಗಳ ಬಳಿ ಇದರ ಕಾಮಗಾರಿ ಆರಂಭಿಸಬೇಕು ಎನ್ನುವ ಯೋಚನೆ ಇದೆ. ಕೆರೆಗಳಿಗೆ ನೀರು ಹರಿಸುವ ಯೋಜನೆ ಸಿದ್ಧಗೊಂಡು ಹಣಕಾಸು ಅನುಮೋದನೆಯೂ ದೊರೆತಿದೆ. 72 ಕೆರೆಗಳಿಗೆ ನೀರು ತುಂಬಿಸುವ ಭರವಸೆಯನ್ನು ಕ್ಷೇತ್ರದ ಜನರಿಗೆ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಡಿಎಚ್‌ಒ ಡಾ| ಫಾಲಾಕ್ಷ, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ಪಪಂ ಮುಖ್ಯಾಧಿಕಾರಿ ಡಿ. ಭೂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷರುಗಳಾದ ರಾಮರೆಡ್ಡಿ, ಡಾ| ಮಂಜುನಾಥ್, ಜಯಪಾಲಯ್ಯ ಇತರರು ಇದ್ದರು.