Advertisement

ನಮ್ಮನೆ ಕತ್ತಲಲ್ಲಿಟ್ಟು.ಪಕ್ಕದ ಮನೆಗೆ ಬೆಳಕು ನೀಡಲ್ಲ!

06:22 AM Jan 12, 2019 | Team Udayavani |

ಅದು 80, 90ರ ದಶಕ. ಬೆಂಗಳೂರಿನಲ್ಲಿ ಸ್ಪೀಚ್‌ & ಹಿಯರಿಂಗ್‌ ಕ್ಲಿನಿಕ್ಕುಗಳೇ ಇರಲಿಲ್ಲ. ಒಂದೆರಡು ಮೆಡಿಕಲ್‌ ಕಾಲೇಜುಗಳಲ್ಲಿ ಒಂದು ವಿಭಾಗವಾಗಿತ್ತಷ್ಟೆ. ಕಾಲೇಜಾದ್ದರಿಂದ ಆ ವಿಭಾಗ ದಿನವಿಡೀ ತೆರೆದಿರುತ್ತಿರಲಿಲ್ಲ. ಸೀಮಿತ ಅವಧಿಯಲ್ಲೇ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಬೇಕಿದ್ದಿತು. ಅಂಥಾ ಸಮಯದಲ್ಲಿ ತೆರೆದುಕೊಂಡಿತ್ತು ನಾಯಕ್‌ ಸ್ಪೀಚ್‌ & ಹಿಯರಿಂಗ್‌ ಕ್ಲಿನಿಕ್‌. ಇಂದಿಗೆ ಕ್ಲಿನಿಕ್‌ ಶುರುವಾಗಿ 25 ವರ್ಷಗಳೇ ಕಳೆದವು. ಡಾ. ನಾಯಕ್‌ ಅದರ ಸ್ಥಾಪಕರು. ಕೆಲಸವನ್ನು ಅರಸುತ್ತಾ ಬೆಂಗಳೂರಿಗೆ ಬಂದಿದ್ದ ಅವರು ಇಂದು ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. 

Advertisement

ಹುಣಸೂರಿನ ಪುಟ್ಟ ಗ್ರಾಮ ಮರೂರಿನಿಂದ ಹೊರಟ ನಾಯಕ್‌ ಸ್ಪೀಚ್‌ & ಹಿಯರಿಂಗ್‌ ಕೋರ್ಸ್‌ ಮಾಡಿದ್ದರ ಹಿಂದೊಂದು ಕತೆಯಿದೆ. ಉತ್ತಮ ಅಂಕ ಗಳಿಸಿದ್ದ ಅವರ ಮುಂದೆ ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌, ಆಯ್ಕೆಗಳಿದ್ದವು. ಸೀಟೇನೋ ಸಿಕ್ಕಿತು ಆದರೆ ಕಾಲೇಜು ಫೀಸು ಹೋಗಲಿ, ಪುಸ್ತಕ ಕೊಳ್ಳಲೂ ಅವರ ಬಳಿ ದುಡ್ಡಿರಲಿಲ್ಲ. ಕೃಷ್ಟಿಯನ್ನು ನಂಬಿಕೊಂಡಿದ್ದ ಕುಟುಂಬವಾದ್ದರಿಂದ ಹಣ ಹೊಂದಿಸುವುದು ಕಷ್ಟವಾಗಿತ್ತು. ಆ ಸಮಯದಲ್ಲಿ ಯಾರೋ ಪುಣ್ಯಾತ್ಮರು “ಸ್ಪೀಚ್‌ & ಹಿಯರಿಂಗ್‌’ ಕೋರ್ಸ್‌ ಮಾಡಿದರೆ ಅವರೇ ಸ್ಟೈಪೆಂಡ್‌  ಕೊಡುತ್ತಾರೆ’ ಎಂಬ ಮಾಹಿತಿ ನೀಡಿದ್ದರು. ಅಷ್ಟೇ ಸಾಕಾಗಿತ್ತು ನಾಯಕ್‌ರವರಿಗೆ. ಹಿಂದೆಮುಂದೆ ನೋಡದೆ ತರಗತಿಗೆ ಸೇರಿಕೊಂಡುಬಿಟ್ಟಿದ್ದರು.

ಮಾನಸ ಗಂಗೋತ್ರಿಯಲ್ಲಿ ಅವರೊಂದಿಗೆ ಓದಿದವರೆಲ್ಲರೂ ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಎಂದು ವಿದೇಶಕ್ಕೆ ಹಾರಿದರು. ಆದರೆ ನಾಯಕ್‌ರಿಗೆ  ವಿದೇಶದ ಕನಸಿರಲಿಲ್ಲ. ಸರ್ಕಾರಿ ಸವಲತ್ತುಗಳ ನೆರವಿನಿಂದ ಓದುತ್ತೇವೆ. ಆದರೆ ಓದಿದ್ದರ ಪ್ರಯೋಜನ ಮಾತ್ರ ಯಾಕೆ ಬೇರೆ ದೇಶದವರಿಗೆ ಸಿಗಬೇಕು ಎನ್ನುವುದು ಅವರ ಪ್ರಶ್ನೆಯಾಗಿತ್ತು. ವಿದೇಶಗಳಲ್ಲಿ ಉತ್ತಮ ಸಂಬಳ ಕೊಡಬಹುದು, ಐಷಾರಾಮಿ ಜೀವನವನ್ನೂ ನಡೆಸಬಹುದು, ಆದರೆ ಸ್ವಂತ ಮನೆಯನ್ನು ಕತ್ತಲಲ್ಲಿಟ್ಟು ಪಕ್ಕದ ಮನೆಗೆ ಬೆಳಕು ನೀಡುವ ಆಸೆ ಯಾವತ್ತೂ ನಾಯಕ್‌ ಅವರ ಮನದಲ್ಲಿ ಮೂಡಲಿಲ್ಲ. 

ಇಂದು ನಗರದಲ್ಲಿ 5 ಶಾಖೆಗಳನ್ನು ತೆರೆದಿರುವ ನಾಯಕ್‌, ಸರ್ಕಾರಿ ಶಾಲೆಗಳಲ್ಲಿ, ಕೊಳಚೆ ಪ್ರದೇಶಗಳ ಮಕ್ಕಳಿಗೆ ಉಚಿತ ತಪಾಸಣಾ ಶಿಬಿರಗಳನ್ನು ನಡೆಸುತ್ತಾರೆ. ದುಡ್ಡಿನಿಂದ ವಸ್ತುಗಳನ್ನು ಕೊಂಡುಕೊಳ್ಳಬಹುದು ಆದರೆ ಆತ್ಮಸಂತೋಷವನ್ನಲ್ಲ. “ನಾವು ಮಾಡುವ ಉದ್ಯೋಗದಿಂದ ನಾಲ್ಕಾರು ಜನರಿಗೆ ಒಳ್ಳೆಯದಾದಾಗ ಮಾತ್ರ ನಾವು ಕಲಿತ ವಿದ್ಯೆಗೆ ಬೆಲೆ ಸಿಗೋದು’ ಎನ್ನುವುದು ಅವರ ಅನುಭವದ ಮಾತು. ಈ ಮನೋಭಾವ ನಾಗರಿಕರೆಲ್ಲರದೂ ಆದಾಗಲೇ ಊರಿನ ಅಭಿವೃದ್ದಿಯಾಗೋದು!

Advertisement

Udayavani is now on Telegram. Click here to join our channel and stay updated with the latest news.

Next