Advertisement
ಹೌದು; ಸ್ವತಂತ್ರ ಭಾರತದ ತ್ರಿವರ್ಣ ಧ್ವಜ 1947 ಆಗಸ್ಟ್ 15ರಂದು ಅರಳಿದಾಗ ಕಾಶ್ಮೀರ ಭಾರತದ ಭೂಭಾಗ ವಾಗಿರಲಿಲ್ಲ. ಏಕೆಂದರೆ 1947 ಭಾರತದ ಸ್ವಾತಂತ್ರ್ಯ ಕಾಯಿದೆ (Indian Independence Act)ನ ಅನ್ವಯ ಹೈದರಾಬಾದ್, ಜುನಾಗಢದಂತೆಯೇ, ಕಾಶ್ಮೀರದ ರಾಜಾಹರಿಸಿಂಗ್ ಕೂಡ ತನ್ನ ಡೋಗ್ರಾ ಪಡೆಯೊಂದಿಗೆ ಸ್ವತಂತ್ರವಾಗಿಯೇ ಉಳಿಯುವ ಆಸೆ ವ್ಯಕ್ತಪಡಿಸಿದ್ದರು.
Related Articles
Advertisement
ಕಾಶ್ಮೀರದಲ್ಲಿನ ಕಾಲಚಕ್ರದ ಪರಿಭ್ರಮಣೆಯ ಪಥ ಹಾಗೂ ವೇಗವೇ ಒಂದು ರೀತಿಯ ರೋಚಕ. ಸುಂದರ, ಶಾಂತ ಕಣಿವೆ ಗಳಲ್ಲಿನ ನೂರಾರು ಸಣ್ಣ ಪುಟ್ಟ ನದಿ ಹೊಳೆಗಳಲ್ಲಿ ಮಾನವ ರಕ್ತ ಹರಿದು ಹೋಗಿದೆ; ಅದೇ ರೀತಿ ಕಾಲವೂ ಸಂದು ಹೋಗಿದೆ. ಶೇಕ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾರಿಂದ ಈಗ ಒಮರ್ ಅಬ್ದುಲ್ಲಾರ ವರೆಗೆ ಕಾಶ್ಮೀರದ ಸ್ಥಿತ್ಯಂತರ ತಲ್ಲಣಗಳ ಮಧ್ಯೆ ಇದೀಗ ಕೇಂದ್ರ ಸರಕಾರ ಬಿಗಿ ಧೋರಣೆಯ ಹೊಸ ಪಥ ನಿರ್ಮಾಣಗೊಳಿಸಿದೆ.
2019 ಆಗಸ್ಟ್ 5ರ ಸೂರ್ಯೋ ದಯದಂದು ಕಾಶ್ಮೀರದ ಕಣಿವೆಯನ್ನು ಸುತ್ತುವರಿದ “ಪರ್ವತಸ್ತೋಮಗಳು’ ಹೊಸ ಚೈತನ್ಯದಿಂದ ತಲೆ ಎತ್ತಿ ನಿಂತವು! ರಾಷ್ಟ್ರಪತಿ ಆಳ್ವಿಕೆಯ ಆಧಾರಿತವಾಗಿ 370ನೇ ವಿಧಿ ಶಾಶ್ವತವಾಗಿ ಬಾನಂಚಿನಲ್ಲಿ ಕಣ್ಮರೆ ಆಯಿತು. ಆ ಒಂದು ರಾಜ್ಯ ದಿಢೀರನೆ “ಜಮ್ಮು- ಕಾಶ್ಮೀರ’ ಎಂಬ ನಾಮಾಂಕಿತದೊದಿಗೆ ಕೇಂದ್ರಾಡಳಿತ ಪ್ರದೇಶವೆನಿಸಿ ನೇರವಾಗಿ ಹೊಸದಿಲ್ಲಿಯ ಸುಪರ್ದಿಗೆ ಬಂತು; ಲಡಾಖ್ ತನ್ನ ಕಾಶ್ಮೀರ ನೊಗ ಕಳಚಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎನಿಸಿತು. ಏನಾಯಿತು ಎನ್ನುವ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಸಮಗ್ರ ರಾಷ್ಟ್ರವೇ ಹುಬ್ಬೇರಿಸುವ ಮೊದಲೇ. ಇಸ್ಲಾಮಾಬಾದ್‌ನಿಂದ ವಿಶ್ವಸಂಸ್ಥೆಯವರೆಗೆ ಜಗತ್ತು ಅರಿಯವ ಮೊದಲೇ “ಹೊಸತನದ ಮಹಾಪೂರ’ವೇ ಹರಿದುಬಂತು! ಈಗ 370ನೇ ವಿಧಿ ಕೇವಲ ಇತಿಹಾಸದ ಪಳೆಯುಳಿಕೆ. ಆ ಬಳಿಕ ಕಾಶ್ಮೀರದ ಕಣಿವೆ ಹೇಗೆ ನವೋಲ್ಲಾಸ ಭರಿತವಾಗಿದೆ, ಕೇವಲ 500 ರೂಪಾಯಿಗೆ “ಕಲ್ಲು ಹೊಡೆಯುವ ಕಾಯಕ’ದ ಬದಲು ಅಲ್ಲಿನ ಯುವ ಪೀಳಿಗೆ ಸುಮಾರು 3 ಪಾಳಿಯಲ್ಲಿ ಪ್ರವಾಸೋದ್ಯಮದಿಂದ ಆದಾಯ ಗಳಿಸುತ್ತಿದೆ. 1,600 ಕ್ಕಿಂತಲೂ ಮಿಕ್ಕಿದ ಸಾಲು ಸಾಲು ದೋಣಿ ಮನೆಗಳು, ಕಾಶ್ಮೀರಿ ಶಾಲುಗಳ ಕೇಸರಿ ಪ್ಯಾಕ್‌ಗಳ ವ್ಯಾಪಾರದ ಭರಾಟೆ, ತುಂಬಿ ತುಳುಕುವ ಪ್ರವಾಸಿಗರು ಇದೆಲ್ಲ ಸರ್ವಾಂಗೀಣ ಪುನಶ್ಚೇತನದ ಕಾಶ್ಯಪ ಮಾರಿನ ದಂತಕತೆಯಲ್ಲ; ಪ್ರಚಲಿತ ವಾಸ್ತವಿಕತೆ! ಇಲ್ಲೊಂದು ಪ್ರಮುಖ ಸಾಂವಿಧಾನಿಕ ಸಂಗತಿಯಿದೆ. ಯಾವುದೇ ರಾಜ್ಯಕ್ಕಾಗಲೀ, ಪ್ರದೇಶಕ್ಕಾಗಲೀ ನಮ್ಮ ಭಾರತೀಯ ಒಕ್ಕೂಟಕ್ಕೆ ಮುಖ ತಿರುಗಿಸಿ ಹೊರಬರಲು ಅವಕಾಶವೇ ಇಲ್ಲ; ನಿರ್ಗಮನದ ದ್ವಾರವೇ ತೆರೆದಿಲ್ಲ ಎಂಬುದು 1ನೇ ವಿಧಿಯೇ ಧ್ವನಿಸುವ ಜ್ವಲಂತ ಸಾಂವಿಧಾನಿಕ ಸತ್ಯ. ಇದೀಗ ಗಡಿ ಆಚೆಗಿನ ಪಾಕ್ ಆಕ್ರಮಿತ ಕಾಶ್ಮೀರಿಗಳೂ ಕುತ್ತಿಗೆ ಉದ್ದಮಾಡಿ, ಕಣ್ಣರಳಿಸಿ, ನಮ್ಮಿ ರಾಷ್ಟ್ರದ ಭೂಪಟದೊಳಗಿನ ಕಾಶ್ಮೀರಿಗಳು “ಅದೆಷ್ಟು ಪುಣ್ಯವಂತರು’ ಎಂದು ಹಲುಬುವಿಕೆ ಮಾತ್ರವಲ್ಲ ಪಾಕ್ ವಿರುದ್ಧ ಘೋಷಣೆ ಮೊಳಗಿಸುವಿಕೆ ಇದೆಲ್ಲ ಪ್ರಚಲಿತ ವಿದ್ಯಮಾನಗಳು. ಮೊನ್ನೆ ಮೊನ್ನೆ ಎಂಬಂತೆ ನಡೆದ ಲೋಕಸಭಾ ಚುನಾವಣೆ ಯಲ್ಲಿ ಮತದಾರರಾಗಿ ಭಾಗವಹಿಸಿದ ಪ್ರತಿಶತ, ಸರತಿಯ ಸಾಲು, ಮತಗಟ್ಟೆಗೆ ಭದ್ರ ಕಾವಲು, ಚುನಾವಣ ಕಣದಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳು- ಈ ಎಲ್ಲದರ ತಖೆ ತೆರೆದಿಟ್ಟಾಗ “ಜನತಂತ್ರದ ಹೊಸ ಶಕೆ’ ಉತ್ತರದ ಈ ಭೂಭಾಗದಲ್ಲಿ ಆರಂಭಗೊಳ್ಳುತ್ತಿದೆ ಎಂದೆನಿಸುತ್ತಿದೆ. ಸೆಪ್ಟಂಬರ್ 18, 25 ಹಾಗೂ ಅಕ್ಟೋಬರ್ 1- ಈ 3 ಹಂತಗಳಲ್ಲಿ ಚುನಾವಣ ಪ್ರಕ್ರಿಯೆ ನಡೆದು ಅಕ್ಟೋಬರ್ 4ರಂದೇ ಫಲಿತಾಂಶ ಹೊರ ಬೀಳಲಿದೆ. ಇಲ್ಲೊಂದು ಸೋಜಿಗ ಇದೆ. ಒಟ್ಟು 114 ವಿಧಾನ ಸಭಾ ಕ್ಷೇತ್ರಗಳ ಪೈಕಿ 24 “ಪಾಕ್ ಆಕ್ರಮಿತ ಕಾಶ್ಮೀರಕ್ಕೆ’ ಸಂಬೋಧಿತವಾಗಿದ್ದು, ಅವು ಖಾಲಿ ಎಂದು ಘೋಷಿತಗೊಳ್ಳುತ್ತದೆ! ಉಳಿದ 90 ಕ್ಷೇತ್ರಗಳಲ್ಲಿ 43 ಜಮ್ಮು ವಿಭಾಗದಲ್ಲಿ ಹಾಗೂ 47 ಕಾಶ್ಮೀರ ಕಣಿವೆಗಳ ಕ್ಷೇತ್ರಗಳು ಎನಿಸಲಿವೆ. ಒಟ್ಟಿನಲ್ಲಿ ಜಮ್ಮು-ಕಾಶ್ಮೀರದಲ್ಲೀಗ ಚುನಾವಣೆಯ ಭರಾಟೆ ಮುಗಿಲು ಮುಟ್ಟಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳು ಚುನಾವಣ ಅಖಾಡದಲ್ಲಿ ಪರಸ್ಪರ ತೊಡೆ ತಟ್ಟಿವೆ. ಜಮ್ಮು-ಕಾಶ್ಮೀರದಲ್ಲಿ ಹೊಸ ಸರಕಾರ ರಚನೆಯ ಹೊಣೆಗಾರಿಕೆಯನ್ನು ಯಾವ ಪಕ್ಷಕ್ಕೆ ಮತದಾರರು ವಹಿಸಲಿದ್ದಾರೆ ಎಂಬ ಕುತೂಹಲ ದೇಶದೆಲ್ಲೆಡೆ ಮನೆಮಾಡಿದೆ. ಅಂತೂ “ನಯಾ ಕಾಶ್ಮೀರದ’ದ ಕನಸು “ಆಜಾದ್ ಕಾಶ್ಮೀರ’ದ ಹೋರಾಟಕ್ಕೆ ಪರ್ಯಾಯವಾಗಿ ಬೆಳೆದಿದೆ; ಕಾಶ್ಮೀರದ ಶಾಲಾ, ಕಾಲೇಜು, ಕಚೇರಿಗಳ ಮೇಲೆಲ್ಲ ತಿರಂಗಾ ರಂಗೇರಿದುದು ತುಂಬು ಸಂತಸ ನೀಡುವ ವಿಚಾರವಾಗಿದೆ. ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು