ಬಿಜಾಪುರ್: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಭಾರೀ ಎನ್‌ಕೌಂಟರ್ ವೇಳೆ ಭದ್ರತಾ ಸಿಬಂದಿಯೊಂದಿಗೆ ಮೊದಲ ಸುತ್ತಿನ ಗುಂಡಿನ ಚಕಮಕಿಯ ನಂತರ ಕೆಲವು ನಕ್ಸಲೀಯರು ಸಮವಸ್ತ್ರ ಬದಲಿಸಿ ನಾಗರಿಕರ ಉಡುಪುಗಳನ್ನು ಧರಿಸಿ ಗ್ರಾಮಸ್ಥರಂತೆ ಪೋಸ್ ನೀಡುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶುಕ್ರವಾರ ಗಂಗ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಿಡಿಯಾ ಗ್ರಾಮದ ಬಳಿಯ ಅರಣ್ಯದಲ್ಲಿ ಭದ್ರತಾ ಸಿಬಂದಿ 12 ಗಂಟೆಗಳ ಕಾರ್ಯಾಚರಣೆಯಲ್ಲಿ 12 ನಕ್ಸಲೀಯರನ್ನು ಹೊಡೆದುರುಳಿಸಿದ್ದಾರೆ. ಶನಿವಾರ ಬೆಳಗ್ಗೆ ಅವರ ಮೃತದೇಹಗಳನ್ನು ಬಿಜಾಪುರ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ.
ಮೃತರ ಗುರುತು ಪತ್ತೆಯಾಗಿದ್ದು, ಅವರ ತಲೆಯ ಮೇಲೆ 31 ಲಕ್ಷ ರೂ. ಇನಾಮು ಹೊಂದಿದ್ದರು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬುಧು ಓಯಮ್ ಮತ್ತು ಕಲ್ಲು ಪುಣೆಂ, ಮಿಲಿಟರಿ ಕಂಪನಿ ನಂ. 2, ತಮ್ಮ ತಲೆಯ ಮೇಲೆ ತಲಾ 8 ಲಕ್ಷ ರೂಪಾಯಿ ಇನಾಮು ಹೊಂದಿದ್ದು, ನಕ್ಸಲರ ಗಂಗಲೂರು ಪ್ರದೇಶ ಸಮಿತಿ ಸದಸ್ಯ ಲಖೆ ಕುಂಜಮ್ ಮತ್ತು ಮಿಲಿಟರಿ ಪ್ಲಟೂನ್ ಸದಸ್ಯ ನಂ. 12 ಭೀಮಾ ಕರಂ ತಲೆಯ ಮೇಲೆ ತಲಾ 5 ಲಕ್ಷ ರೂ. ಇನಾಮು ಇತ್ತು ಎಂದು ಅವರು ಹೇಳಿದ್ದಾರೆ.
ಕೆಲವು ಮಾವೋವಾದಿಗಳು ಮೂರು ಸ್ಥಳಗಳಲ್ಲಿ ಹೊಂಚುದಾಳಿಗಳನ್ನು ನಡೆಸುವ ಮೂಲಕ ಭದ್ರತಾ ಪಡೆಗಳನ್ನು ಸುತ್ತುವರಿಯಲು ಪ್ರಯತ್ನಿಸಿದರಾದರೂ ಪ್ರಯತ್ನಗಳು ವಿಫಲವಾಗಿವೆ. ಕಾರ್ಯಾಚರಣೆಯ ಸಮಯದಲ್ಲಿ ನಾವು ಮೊದಲ ಬಾರಿಗೆ ಗಮನಿಸಿದ ಒಂದು ವಿಚಿತ್ರವೆಂದರೆ, ಮೊದಲ ಸುತ್ತಿನ ಗುಂಡಿನ ಚಕಮಕಿಯ ನಂತರ, ಕೆಲವು ನಕ್ಸಲೀಯರು ನಾಗರಿಕರ ಬಟ್ಟೆಗಳನ್ನು ಧರಿಸಿ ಪೊಲೀಸರನ್ನು ತಪ್ಪುದಾರಿಗೆಳೆಯಲು ಗ್ರಾಮಸ್ಥರೊಂದಿಗೆ ಬೆರೆತರು” ಎಂದು ಹೇಳಿದರು.