ಚಿಕ್ಕಮಗಳೂರು/ಶೃಂಗೇರಿ: ನಕ್ಸಲ್ ಹೋರಾಟದ ಮುಂಚೂಣಿಯಲ್ಲಿದ್ದು ಸದ್ಯ ಭೂಗತರಾಗಿರುವ ಬಿ.ಜಿ. ಕೃಷ್ಣಮೂರ್ತಿ ಅವರ ತಂದೆ ಗೋಪಾಲ ರಾವ್ (75) ಶನಿವಾರ ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯಲ್ಲಿ ಪುತ್ರ ಬಿ.ಜಿ. ಕೃಷ್ಣಮೂರ್ತಿ ಭಾಗಿಯಾಗಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಕೂಂಬಿಂಗ್ ತೀವ್ರಗೊಳಿಸಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗೋಪಾಲಯ್ಯ, ಶೃಂಗೇರಿಯ ಧನ್ವಂತರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. ಇವರ ಒಬ್ಬನೇ ಮಗ ಕೃಷ್ಣಮೂರ್ತಿ ನಕ್ಸಲ್ ಸಂಘಟನೆಯಲ್ಲಿ ಇರುವುದರಿಂದ ಕುಟುಂಬದ ಸಂಬಂಧ ಕಡಿದುಕೊಂಡಿದ್ದಾರೆ. ಮಗ ಮನೆ ತೊರೆದಿದ್ದರಿಂದ ನೊಂದಿದ್ದ ಗೋಪಾಲಯ್ಯ ಅಂತಿಮ ಕ್ಷಣದಲ್ಲಿ ಮಗನನ್ನು ಹಲವು ಬಾರಿ ನೆನಪಿಸಿಕೊಳ್ಳುತ್ತಿದ್ದರು.
ಗೋಪಾಲಯ್ಯ ಮೃತ ದೇಹವನ್ನು ಅವರ ಸ್ವಗ್ರಾಮ ಬುಕಡಿಬೈಲು ಗ್ರಾಮದಲ್ಲಿ ಇಡಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಸಂಸ್ಕಾರಕ್ಕೆ ಬಿ.ಜಿ.ಕೃಷ್ಣಮೂರ್ತಿ ಬರಬಹುದೆಂಬ ಸಂಶಯದಿಂದ ಅವರ ಮನೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ ಹಾಗೂ ಶೃಂಗೇರಿ ತಾಲೂಕಿನ ಬುಕುಡಿಬೈಲು, ನೆಮ್ಮಾರ್, ಕೆರೆಕಟ್ಟೆ, ಮಾವಿನಕಾಡು ಮುಂತಾದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಎಎನ್‌ಎಫ್ ಸಿಬ್ಬಂದಿ ಕೂಂಬಿಂಗ್ ತೀವ್ರಗೊಳಿಸಿದ್ದಾರೆ.
ಕೃಷ್ಣಮೂರ್ತಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡ ನಂತರ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. 2003ರಿಂದ ಭೂಗತರಾಗಿದ್ದಾರೆ. ಅವರ ವಿರುದ್ಧ ಜಿಲ್ಲೆಯಲ್ಲಿ 14 ವಿವಿಧ ಪ್ರಕರಣಗಳು ದಾಖಲಾಗಿವೆ. ಜತೆಗೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಭೂಗತರಾದ ನಂತರ ಕೃಷ್ಣಮೂರ್ತಿ ಯಾರ ಕಣ್ಣಿಗೂ ಬಿದ್ದಿಲ್ಲ. ಇದೀಗ ಅವರು ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿಯೇ ಭಾಗಿಯಾಗದಂತಾಗಿದೆ. ಅವರು ಕಣ್ಣಿಗೆ ಬಿದ್ದಲ್ಲಿ ಅವರನ್ನು ಪೊಲೀಸರು ಬಂಧಿಸುವುದರಿಂದಾಗಿ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಲಾಗುತ್ತಿದೆ. ಅಲ್ಲದೇ ಕೃಷ್ಣಮೂರ್ತಿ ಕೂಡ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ನೆಮ್ಮಾರ್ ಗ್ರಾಪಂನ ನೆಮ್ಮಾರ್ ಎಸ್ಟೇಟ್‌ನ ಕಾನು ಗೋಪಾಲಯ್ಯಗೆ ಪತ್ನಿ, ಐವರು ಪುತ್ರಿಯರು ಹಾಗೂ ಪುತ್ರ ಬಿ.ಜಿ.ಕೃಷ್ಣಮೂರ್ತಿ ಇದ್ದಾರೆ. ಪುತ್ರಿಯರೇ ತಂದೆಯ ಎಲ್ಲ ಜವಾಬ್ದಾರಿ ಹೊತ್ತಿದ್ದರು ಎನ್ನಲಾಗಿದ್ದು, ಮೃತರ ಅಂತ್ಯಕ್ರಿಯೆಯನ್ನೂ ಶನಿವಾರ ರಾತ್ರಿ ಹಿರಿಯ ಅಳಿಯ ಸುಬ್ರಹ್ಮಣ್ಯ ನೆರವೇರಿಸುವ ಸಾಧ್ಯತೆ ಇದೆ.