ಬೆಂಗಳೂರು: ಕೆಲವು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದ ಗೌರಿ ಲಂಕೇಶ್, ತನ್ನ ಹತ್ಯೆಯಾಗುವ ಮೂರು ತಿಂಗಳ ಮೊದಲು ಪಶ್ಚಿಮ ಘಟ್ಟದ ರಹಸ್ಯ ಸ್ಥಳವೊಂದರಲ್ಲಿ ನಕ್ಸಲ್ ನಾಯಕರ ಜತೆ ಗೌಪ್ಯ ಸಭೆ ನಡೆಸಿರುವುದು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯಿಂದ ಬೆಳಕಿಗೆ ಬಂದಿದೆ.
ನಕ್ಸಲ್ ಪೀಡಿತ ಪ್ರದೇಶದಲ್ಲಿಯೇ ನಡೆದಿದ್ದ ಈ ಸಭೆಯಲ್ಲಿ ತಮ್ಮನ್ನು ಮುಖ್ಯವಾಹಿನಿಗೆ ಕರೆದೊಯ್ಯಲು ಮುಂದಾಗಿರುವ ಗೌರಿ ಲಂಕೇಶ್ ನಡೆಯ ಬಗ್ಗೆ ಕೆಲವು ನಕ್ಸಲ್ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ‘ಪ್ರತಿಯೊಬ್ಬ ಹೋರಾಟಗಾರರನ್ನು ಮುಖ್ಯವಾಹಿನಿಗೆ ಕರೆದೊಯ್ದು, ನಮ್ಮ ಹೋರಾಟದ ತೀವ್ರತೆಯನ್ನು ಕುಗ್ಗಿಸಲು ಯತ್ನಿಸುತ್ತಿದ್ದೀರಿ. ಹೊರಗಡೆ ಕರೆದೊಯ್ದ ಬಳಿಕ ನಕ್ಸಲರಿಗೆ ಸಿಗಬೇಕಾದ ಸೌಲಭ್ಯಗಳೂ ಸಿಗುತ್ತಿಲ್ಲ. ಹಾಗೂ ಅವರ ವಿರುದ್ಧ ಇರುವ ಪ್ರಕರಣಗಳೂ ರದ್ದಾಗುತ್ತಿಲ್ಲ. ಅಲ್ಲದೇ ಕೆಲವರು ಇನ್ನೂ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. ಹೀಗಿರುವಾಗ, ಮುಖ್ಯವಾಹಿನಿಗೆ ಕರೆದೊಯ್ಯುವ ಅಗತ್ಯವೇನಿದೆ? ಈ ರೀತಿ ಮಾಡುವುದರಿಂದ ನಿಮಗೆ ಪ್ರಯೋಜನವೇನು? ಇದರ ಪರಿಣಾಮವನ್ನು ಮುಂದೆ ಎದುರಿಸಬೇಕಾದೀತು’ ಎಂದು ಆ ಸಭೆಯಲ್ಲಿ ಕೆಲವರು ಎಚ್ಚರಿಕೆ ನೀಡಿದ್ದರು ಎಂದು ಎಸ್‌ಐಟಿಯ ಮೂಲಗಳು ತಿಳಿಸಿವೆ.
ಕೆಲ ನಕ್ಸಲ್ ಮುಖಂಡರು ಅಂದು ಗೌರಿ ಲಂಕೇಶ್‌ಗೆ ಎಚ್ಚರಿಕೆ ನೀಡಿರುವುದು ಎಸ್‌ಐಟಿ ತನಿಖಾಧಿಕಾರಿಗಳಿಗೆ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಮತ್ತು ಗುಪ್ತಚರ ಇಲಾಖೆಯಿಂದ ತಮಗೆ ಮಾಹಿತಿ ಬಂದಿದೆ ಎಂದು ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ. ಈ ಹಿಂದೆ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಸೇರಿದಂತೆ ಕೆಲ ನಕ್ಸಲರನ್ನು ಗೌರಿ ಲಂಕೇಶ್ ಮಧ್ಯಸ್ಥಿಕೆ ವಹಿಸಿ ಮುಖ್ಯವಾಹಿನಿಗೆ ಕರೆತಂದಿದ್ದರು. ಮತ್ತೆ ಕೆಲವರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಮೂರು ತಿಂಗಳ ಹಿಂದೆ ಮಲೆನಾಡಿನಲ್ಲಿ ಹಾಲಿ ನಕ್ಸಲರೊಂದಿಗೆ ಗೌಪ್ಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಕೆಲ ನಕ್ಸಲರ ಮನವೊಲಿಸಿ ಅವರನ್ನು ಸಿಎಂ ಭೇಟಿಗೂ ದಿನಾಂಕ ನಿಗದಿ ಮಾಡಿಕೊಂಡಿದ್ದರು ಆದರೆ, ಈ ಪ್ರಕ್ರಿಯೆಗೆ ಇತರೆ ನಕ್ಸಲರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿರುವುದಾಗಿ ಅವರು ತಿಳಿಸಿದರು.
ವಿಕ್ರಂಗೌಡ ನಾಪತ್ತೆ: ಇತ್ತ ನಕ್ಸಲ್ ಆಯಾಮದಲ್ಲಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅತ್ತ ಉಡುಪಿ ವಲಯದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ವಿಕ್ರಂಗೌಡ ನಾಪತ್ತೆಯಾಗಿದ್ದಾನೆ. ಹೀಗಾಗಿ ಈ ಸಂಬಂಧ ವಿಚಾರಣೆ ತೀವ್ರಗೊಳಿಸಲಾಗಿದೆ. ಹಾಗೆಯೇ ಬಲಪಂಥೀಯರ ಕೃತ್ಯದ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಕೆಲ ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಇನ್ನು ಕೆಲ ಮಂದಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸದ್ಯದಲ್ಲೇ ಸೂಚಿಸುತ್ತೇವೆ ಎಂದ ಅಧಿಕಾರಿ, ಪ್ರಕರಣ ಸಂಬಂಧ ಹೇಳಿಕೆ ದಾಖಲಿಸುವಂತೆ ರಾಘವೇಶ್ವರ ಶ್ರೀಗಳಿಗೆ ಇದುವರೆಗೂ ಯಾವುದೇ ನೋಟಿಸ್ ಕೊಟ್ಟಿಲ್ಲ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ರಾಮೇಶ್ವರಕ್ಕೆ ಎಸ್‌ಐಟಿ ತಂಡ
ಕರ್ನಾಟಕ, ಮುಂಬಯಿ, ಆಂಧ್ರಪ್ರದೇಶ, ಬಿಹಾರ್, ಮಧ್ಯಪ್ರದೇಶ ಸಹಿತ ಇತರ ರಾಜ್ಯಗಳ ಜೈಲಿನಲ್ಲಿರುವ ಹಳೇ ಶಾರ್ಪ್ ಶೂಟರ್ ಮತ್ತು ಸುಪಾರಿ ಕಿಲ್ಲರ್‌ಗಳ ವಿಚಾರಣೆಗೆ ಎಸ್‌ಐಟಿ ಮುಂದಾಗಿದೆ. ಈಗಾಗಲೇ ರಾಜ್ಯದ ಎಲ್ಲ ಜೈಲುಗಳಲ್ಲಿನ ಪ್ರಮುಖ ಕೈದಿಗಳ ವಿಚಾರಣೆ ಮುಕ್ತಾಯ ಹಂತಕ್ಕೆ ಬಂದಿದೆ. ಇತರ ರಾಜ್ಯಗಳಲ್ಲಿ ತನಿಖೆ ಸದ್ಯ ಆರಂಭವಾಗಲಿದ್ದು, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ ಅಧಿಕಾರಿಗಳ ತಂಡ ತೆರಳಿದೆ. ಮತ್ತೂಂದೆಡೆ ಪಿಸ್ತೂಲ್, ರಿವಾಲ್ವರ್ ಮತ್ತು ಗನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಆರೋಪಿಗಳನ್ನು ತನಿಖಾ ತಂಡ ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ತಮಿಳುನಾಡಿನ ರಾಮೇಶ್ವರದಲ್ಲಿ ಒಂದು ತಂಡ ಬೀಡುಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.