Advertisement

ದಿನವಿಡೀ ಠಾಣೆಯಲ್ಲೇ ನಕ್ಸಲರಿಬ್ಬರ ವಿಚಾರಣೆ :ಇಂದು ಹೆಬ್ರಿ ಭಾಗಕ್ಕೆ ಕರೆದೊಯ್ಯುವ ನಿರೀಕ್ಷೆ

11:49 PM May 05, 2022 | Team Udayavani |

ಕಾರ್ಕಳ : ನಕ್ಸಲ್‌ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಎರಡು ದಿನಗಳಿಂದ ಕಾರ್ಕಳ ಪೊಲೀಸ್‌ ಕಸ್ಟಡಿಯಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ಎರಡನೇ ದಿನವಾದ ಗುರುವಾರ ಠಾಣೆಯಲ್ಲಿಯೇ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.

Advertisement

ಹಿರಿಯ ಪೊಲೀಸ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ವಿಜಯಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ಕುಮಾರ್‌ ವಿಚಾರಣೆ ನಡೆಸಿದರು. ಗುರುವಾರ ದಿನಪೂರ್ತಿ ಇಬ್ಬರನ್ನು ಠಾಣೆಗಳಲ್ಲಿಯೇ ಇರಿಸಿಕೊಂಡು ವಿಚಾರಣೆ ನಡೆಸಲಾಗಿತ್ತು. ಬಿ.ಜಿ. ಕೃಷ್ಣಮೂರ್ತಿಯನ್ನು ಗ್ರಾಮಾಂತರ ಠಾಣೆ ಮತ್ತು ಸಾವಿತ್ರಿಯನ್ನು ನಗರ ಠಾಣೆಯಲ್ಲಿ ಇರಿಸಿಕೊಂಡು ತನಿಖೆ ನಡೆಸಲಾಗಿತ್ತು.

ಕಾರ್ಕಳ, ಹೆಬ್ರಿ, ಅಜೆಕಾರು ಠಾಣೆ ವ್ಯಾಪ್ತಿಯಲ್ಲಿ ನಡೆದ ವಿವಿಧ ನಕ್ಸಲ್‌ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. 12 ದಿನಗಳ ಕಾಲ ಇವರಿಬ್ಬರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣೆ ವೇಳೆ ತಾಲೂಕಿನ ವಿವಿಧ ಘಟನ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗುತ್ತದೆ.

ಇಂದು ಹೆಬ್ರಿ ಭಾಗಕ್ಕೆ?
ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಿಗೆ ಸಂಬಂಧಿಸಿ ಮೇ 6ರಂದು ಸ್ಥಳ ಮಹಜರು, ವಿಚಾರಣೆ ನಡೆಯಲಿದೆ ಎಂದು ತಿಳಿದು ಬಂದಿದೆ. ನಕ್ಸಲರಿಬ್ಬರನ್ನು ಇರಿಸಿರುವ ನಗರ ಹಾಗೂ ಗ್ರಾಮಾಂತರರ ಠಾಣೆಗಳಿರುವ ಒಂದೇ ಕಟ್ಟಡದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಹಾಕಲಾಗಿದೆ.

ಊಟದ ಮೇಲೂ ನಿಗಾ
ನಕ್ಸಲರಿಬ್ಬರು ಇರುವ ಠಾಣೆಯ ಸುತ್ತ ಸಶಸ್ತ್ರ ಪೊಲೀಸರು ಹಗಲು -ರಾತ್ರಿ ಕಾವಲಿದ್ದಾರೆ. ನಕ್ಸಲರಿಬ್ಬರ ಊಟ-ಉಪಾಹಾರ ಇತ್ಯಾದಿಗಳ ಬಗ್ಗೆಯೂ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ. ವಿವಿಧ ದೂರುಗಳಿಗೆ ಸಂಬಂಧಿಸಿ ಠಾಣೆಗೆ ಭೇಟಿ ನೀಡುವ ಸಾರ್ವಜನಿಕರಿಗಾಗಿ ಠಾಣೆಯ ಹೊರ ಭಾಗದಲ್ಲಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿದೆ. ಪರಿಸರದಲ್ಲಿ ಹೆಚ್ಚಿನ ಕಣ್ಗಾವಲು ಇರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next