Advertisement

Bengaluru ನಕ್ಸಲ್‌ ಬೇಟೆ: ತ. ನಾಡಿನ ಅನಿರುದ್ಧ ಸೆರೆ

01:29 AM Sep 07, 2024 | Team Udayavani |

ಬೆಂಗಳೂರು: ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ನಕ್ಸಲ್‌ ಒಬ್ಬನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ಭಯೋತ್ಪಾದನ ನಿಗ್ರಹ ದಳ (ಎಟಿಸಿ)ದ ತಂಡವು ಬಂಧಿಸಿದ್ದು, 14 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಯಾವ ಕಾರಣಕ್ಕೆ ಈತ ಬೆಂಗಳೂರಿಗೆ ಬಂದಿದ್ದ ಎಂಬ ಕುರಿತು ತನಿಖೆ ನಡೆಯುತ್ತಿದೆ.

Advertisement

ಚೆನ್ನೈ ಮೂಲದ ಅನಿರುದ್ಧ ರಾಜನ್‌ ಬಂಧಿತ ನಕ್ಸಲ್‌. ಈತನಿಂದ 2 ಬ್ಯಾಗ್‌, ಪೆನ್‌ಡ್ರೈವ್‌ಗಳು ಹಾಗೂ ಟ್ಯಾಬ್‌ ಜಪ್ತಿ ಮಾಡಲಾಗಿದೆ.

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಧ್ಯೇಯೋದ್ದೇಶಗಳನ್ನು ಈಡೇರಿಸುವ ಉದ್ದೇಶದಿಂದ ಎಡ ಪಂಥೀಯ ಉಗ್ರ ಚಟುವಟಿಕೆಗಳ ಬಗ್ಗೆ ಒಲವುಳ್ಳ ವ್ಯಕ್ತಿಗಳ ಜತೆ ಈತ ಸಂಪರ್ಕ ಬೆಳೆಸಿದ್ದ. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದು ಅಜ್ಞಾತ ಸ್ಥಳದಲ್ಲಿದ್ದ. ಈ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಿಸಿದ ಬೆಂಗಳೂರಿನ ಸಿಸಿಬಿ ಹಾಗೂ ಎಟಿಸಿ ವಿಭಾಗದ ಅಧಿಕಾರಿಗಳು ಆತನ ಚಲನವಲನಗಳ ಮೇಲೆ ನಿಗಾ ಇಟ್ಟು ಕೆಂಪೇಗೌಡ ಬಸ್‌ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದಾರೆ.

ಸುದೀರ್ಘ‌ ವಿಚಾರಣೆ
ಅನಿರುದ್ಧನನ್ನು ಸುದೀರ್ಘ‌ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಆತ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯ ಚಟು ವಟಿಕೆಗಳನ್ನು ಉ. ಭಾರತದ ವಿಭಾಗದಲ್ಲಿ ವಿಸ್ತರಿಸುವ ಕಾರ್ಯ ನಿರ್ವಹಿಸುತ್ತಿರುವುದು ತಿಳಿದುಬಂದಿದೆ. ಆತ ಹೊಂದಿದ್ದ ಆಧಾರ್‌ ಕಾರ್ಡ್‌ ಬೇರೆ ಹೆಸರಿನಲ್ಲಿ ಇರು ವುದು ತನಿಖೆಯಿಂದ ಗೊತ್ತಾಗಿದೆ.

ಆರೋಪಿಯನ್ನು ಸೆ. 6ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಪ್ರಕರಣದ ಕೂಲಂಕಷ ತನಿಖೆಗಾಗಿ ಪ್ರಕರಣವನ್ನು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗೆಳತಿಯನ್ನು ನೋಡಲು ಬಂದಿದ್ದ?
ಅನಿರುದ್ಧ ನಿಷೇಧಿತ ಬರಹಗಳನ್ನು ಪೋಸ್ಟ್‌ ಮಾಡುತ್ತಿದ್ದ. ನಕ್ಸಲ್‌ ಸಂಘಟನೆಗೆ ಸಂಬಂಧಿಸಿ ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತ ವಿಕಾಸ್‌ ಘಾಡೆ ಎಂಬ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ಹೊಂದಿದ್ದ. ಈತನಿಗಾಗಿ ಪೊಲೀಸ್‌ ಮತ್ತು ನಕ್ಸಲ್‌ ನಿಗ್ರಹ ತಂಡ ಬಲೆ ಬೀಸಿತ್ತು. ಆದರೆ ಎಲ್ಲಿಯೂ ಸಿಕ್ಕಿಬಿದ್ದಿರಲಿಲ್ಲ. ಆತ ಗೆಳತಿಯನ್ನು ನೋಡಲು ಬೆಂಗಳೂರಿಗೆ ಬಂದಿರುವುದಾಗಿ ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ. ಕಳೆದ ಗುರುವಾರ ಬೆಳಗ್ಗೆ 8 ಗಂಟೆಗೆ ಆತ ಚೆನ್ನೈಗೆ ತೆರಳಲು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದ. ಈ ಬಗ್ಗೆ ಎಟಿಸಿ ತಂಡಕ್ಕೆ ಸುಳಿವು ಸಿಕ್ಕಿತ್ತು.

ನಗರದ ಯಾವ ಸ್ಥಳದಲ್ಲಿ ಸಭೆ ನಡೆಸಿದ್ದ, ಯಾರನ್ನು ಭೇಟಿ ಮಾಡಿದ್ದ ಎಂಬುದು ಇನ್ನೂ ಖಚಿತವಾಗಿಲ್ಲ. ಆತ ಸಂಚರಿಸಿದ್ದ ಮಾರ್ಗಗಳಲ್ಲಿ ಇರುವ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಯಾರಾದರೂ ಈತನ ಜತೆಗೆ ಸಂಪರ್ಕ ಹೊಂದಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next