Advertisement
ಕಬ್ಬಿನಾಲೆ ಸಮೀಪದ ಮಾವಿನಕಟ್ಟೆಯವರೆಗೆ ರಸ್ತೆ ಸೌಕರ್ಯ ಇದೆ. ಅಲ್ಲಿಂದ ಎಂಟು ಕಿ.ಮೀ. ಹೊಂಡ, ಗುಂಡಿ, ಕಲ್ಲು ಮುಳ್ಳುಗಳಿಂದ ಕೂಡಿದ ಮಣ್ಣು ರಸ್ತೆಯಲ್ಲಿ ಸಾಗಿದರೆ ಎನ್ಕೌಂಟರ್ ಆಗಿರುವ ಪ್ರದೇಶ ಸಿಗುತ್ತದೆ. ಇಲ್ಲಿಗೆ ಜೀಪು ಹೋಗುತ್ತದೆ. ದ್ವಿಚಕ್ರ ವಾಹನ ಕಷ್ಟಪಟ್ಟು ಹೋಗುತ್ತದೆ. ಮಂಗಳವಾರ ಪತ್ರಕರ್ತರು ಕೂಡ ಈ ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕಾಯಿತು.
ಇಲ್ಲಿನ ನಿವಾಸಿ ಸ್ಥಳೀಯವಾಗಿ ಕೃಷಿ ಮತ್ತು ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಆರೋಗ್ಯ, ಶಿಕ್ಷಣ, ಪಡಿತರಕ್ಕಾಗಿ ದೂರದ ಊರಿಗೆ ಕಾಲ್ನಡಿಗೆಯಲ್ಲಿಯೇ ತೆರಳಬೇಕು. ಇಲ್ಲಿನ ಬಹುತೇಕ ಮಕ್ಕಳಿಗೆ ಸರಕಾರಿ ವಸತಿ ಶಾಲೆಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆ. ತುರ್ತು ಆರೋಗ್ಯ ಸೇವೆ ಪಡೆಯಲು ಇಲ್ಲಿನ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ರಸ್ತೆಯೇ ಇಲ್ಲಿಲ್ಲ. ಮಳೆಗಾಲದಲ್ಲಿ ಇಲ್ಲಿನ ಸಂಚಾರ ಮತ್ತಷ್ಟು ಕಷ್ಟಕರ ಎಂದು ಸ್ಥಳೀಯರು ಹೇಳುತ್ತಾರೆ. ಸರಕಾರ, ಜಿಲ್ಲಾಡಳಿತ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
Related Articles
2003ರ ನ. 17ರಂದು ಈದುವಿನಲ್ಲಿ ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದಿತ್ತು. ಇದರ 21ನೇ ವರ್ಷ ಕಳೆದು ಎರಡೇ ದಿನದಲ್ಲಿ ವಿಕ್ರಂ ಗೌಡನ ಎನ್ಕೌಂಟರ್ ನಡೆದಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ನಕ್ಸಲ್ ಮೃತಪಟ್ಟ ದಿನ ಹತ್ಯೆಯಾದ ಸ್ಥಳಕ್ಕೆ ಇತರ ನಕ್ಸಲ್ ಮುಖಂಡರು ತೆರಳಿ ಗೌರವ ಸಲ್ಲಿಸಿ “ಹುತಾತ್ಮರ ದಿನ’ ಆಚರಿಸುವುದು ಅವರು ರೂಢಿಸಿಕೊಂಡಿರುವ ಕ್ರಮ.
Advertisement
ಅದರಂತೆ ಈ ಭಾಗಕ್ಕೆ ವಿಕ್ರಂ ಗೌಡ ಬಂದಿದ್ದನೋ ಅಥವಾ ಶರಣಾಗತಿ ಯೋಚನೆಯಲ್ಲಿ ಆಗಮಿಸಿದ್ದನೋ ಎನ್ನುವ ಬಗ್ಗೆ ಸಂಶಯಗಳಿವೆ. ಶರಣಾಗತಿ ಎಂಬುದು ನಕ್ಸಲ್ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಆತ ನಂಬಿದ್ದ. ಆದ್ದರಿಂದ ಆತ ಶರಣಾಗತಿಗೆ ಆಗಮಿಸಿರುವ ಸಾಧ್ಯತೆ ವಿರಳ. ಇನೊ°ಂದೆಡೆ ಶರಣಾಗತಿ ವಿಚಾರದಲ್ಲಿ ತಂಡದ ಸದಸ್ಯರೊಳಗೆ ಪರ-ವಿರೋಧ ಅಭಿಪ್ರಾಯವಿತ್ತು ಎನ್ನಲಾಗಿದೆ.
ಜನರ ಓಡಾಟದ ಮೇಲೂ ನಿಗಾನಕ್ಸಲ್ ಎನ್ಕೌಂಟರ್ ನಡೆದ ಸುತ್ತಲಿನ ಪ್ರದೇಶದ ಜನರ ಓಡಾಟದ ಮೇಲೂ ಪೊಲೀಸರು ಮತ್ತು ಎಎನ್ಎಫ್ ಸಿಬಂದಿ ನಿಗಾ ಇರಿಸಿದ್ದು ಕಂಡು ಬಂತು. ಕಬ್ಬಿನಾಲೆ, ಮಾವಿನಕಟ್ಟೆಗೆ ಬಂದಿಳಿಯುವ ಪ್ರತಿಯೊಬ್ಬರೂ ಎಲ್ಲಿಗೆ ಹೋಗುತ್ತಾರೆ ಮತ್ತು ಏನು ಮಾಡುತ್ತಾರೆ ಎಂಬುದರ ಮೇಲೆ ಕಣ್ಗಾವಲು ಇರಿಸಲಾಗಿತ್ತು. ಮಾವಿನಕಟ್ಟೆಯಿಂದ ಎನ್ಕೌಂಟರ್ ನಡೆದ ಪೀತಬೈಲು ಪ್ರದೇಶಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಹೆಬ್ರಿ ಸಮೀಪದ ಕೂಡ್ಲು
ಫಾಲ್ಸ್ಗೆ ಬರುವ ಚಾರಣಿಗರಿಗೆ ಪ್ರಸ್ತುತ ಪ್ರವೇಶ ನಿರ್ಬಂಧಿಸಲಾಗಿದೆ. ಎನ್ಕೌಂಟರ್ ವೇಳೆ ಕೆಲವು ನಕ್ಸಲರು ತಪ್ಪಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿ ತಡೆಯೊಡ್ಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.