Advertisement

ನವಾಜ್‌ ಭ್ರಷ್ಟ: ರಾಜೀನಾಮೆ : ಮುಂದಿನ ಪ್ರಧಾನಿಯಾಗಿ ಷರೀಫ್ ಸಹೋದರ

05:20 AM Jul 29, 2017 | Karthik A |

ಇಸ್ಲಾಮಾಬಾದ್‌: ಭಾರತ ಸಹಿತ ವಿಶ್ವವನ್ನೇ ದಂಗುಬಡಿಸಿದ ಪನಾಮಾ ದಾಖಲೆಗಳಲ್ಲಿನ ಆರೋಪಗಳಿಗೆ ಸಂಬಂಧಿಸಿ ಪಾಕಿಸ್ಥಾನ ಪ್ರಧಾನಿ ನವಾಜ್‌ ಷರೀಫ್ರನ್ನು ಅಲ್ಲಿನ ಸುಪ್ರೀಂಕೋರ್ಟ್‌ ಶುಕ್ರವಾರ ಅನರ್ಹಗೊಳಿಸಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಪಾಕಿಸ್ಥಾನ ಮತ್ತೂಮ್ಮೆ ಸೇನಾಡಳಿತದ ವಶವಾದೀತೇ ಎನ್ನುವ ಆತಂಕ ವ್ಯಕ್ತವಾಗಿದೆ. ನ್ಯಾಯಾಂಗ ಮತ್ತು ಸಂಸತ್‌ಗೆ ಅಗೌರವ ತೋರಿದ್ದರಿಂದ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ನವಾಜ್‌ ಷರೀಫ್ ಅನರ್ಹರು ಎಂದು ಸುಪ್ರೀಂಕೋರ್ಟ್‌ ಪ್ರತಿಪಾದಿಸಿದೆ. ಅಲ್ಲದೆ ಷರೀಫ್ ಮತ್ತು ಮಕ್ಕಳ ವಿರುದ್ಧ ಭ್ರಷ್ಟಾಚಾರ ನಡೆಸಿದ ಆರೋಪದಲ್ಲಿ ಕೇಸು ದಾಖಲಿಸುವಂತೆಯೂ ಆದೇಶ ನೀಡಿದೆ. 67 ವರ್ಷದ ನವಾಜ್‌ ಷರೀಫ್ 3ನೇ ಬಾರಿಯೂ ಅಧಿಕಾರಾವಧಿ ಪೂರ್ಣಗೊಳಿಸಲು ವಿಫ‌ಲರಾಗಿದ್ದಾರೆ.

Advertisement

ತೀರ್ಪು ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ನವಾಜ್‌ ಷರೀಫ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಂಜೆಯ ಹೊತ್ತಿಗೆ ಅವರ ಸೋದರ ಪಂಜಾಬ್‌ ಪ್ರಾಂತ್ಯದ ಸಿಎಂ ಶಾಭಾಜ್‌ ಷರೀಫ್ ಮುಂದಿನ ಪ್ರಧಾನಿ ಎಂಬ ಪ್ರಕಟನೆ ಹೊರ ಬಿದ್ದಿದೆ. ವಿಪಕ್ಷ ನಾಯಕರಾದ ಇಮ್ರಾನ್‌ ಖಾನ್‌, ಬಿಲಾವಲ್‌ ಭುಟ್ಟೋ ಸಹಿತ ಪ್ರಮುಖರು ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದಾರೆ. ಅದರೆ, ಪ್ರಜಾಪ್ರಭುತ್ವವಾದಿಗಳು ಈ ಬೆಳವಣಿಗೆಯನ್ನು ಆತಂಕದ ಕಣ್ಣಿನಲ್ಲೇ ನೋಡುತ್ತಿದ್ದು, ಇದರಿಂದ ಪ್ರಜಾಸತ್ತೆ ದುರ್ಬಲವಾಗಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೊಂಚ ಮಿತಿ ಮೀರಿದರೆ ಆಡಳಿತದ ಚುಕ್ಕಾಣಿಯನ್ನು ಸೇನೆ ಕೈಗೆತ್ತಿಕೊಳ್ಳಬಹುದು ಎನ್ನುವ ಭಯವೂ ವ್ಯಕ್ತ ವಾಗಿದೆ. ಇಷ್ಟೇ ಅಲ್ಲ, ಪನಾಮಾ ದಾಖಲೆಗಳ ಬಹಿರಂಗ ಹಾಗೂ ನವಾಜ್‌ ವಿರುದ್ಧದ ಪ್ರಕರಣದ ಹಿಂದೆ ಪಾಕ್‌ ಸೇನೆಯ ಕುತಂತ್ರ ಅಡಗಿದೆ ಎಂಬ ವದಂತಿಗಳು ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಬಲವಾಗಿ ಹಬ್ಬುತ್ತಿವೆ. ನವಾಜ್‌ ಅವರ ವಿದೇಶಿ ಆಸ್ತಿಗಳ ತನಿಖೆಯಲ್ಲಿ ಪಾಕಿಸ್ಥಾನದ ಇಂಟರ್‌ಸರ್ವಿಸ್‌ ಇಂಟೆಲಿಜೆನ್ಸ್‌ ಮತ್ತು ಮಿಲಿಟರಿ ಇಂಟೆಲಿಜೆನ್ಸ್‌ಗಳು ಪಾತ್ರವಹಿಸಿವೆ ಎಂಬ ಮಾಹಿತಿಗಳು ಹೊರಬರುತ್ತಿವೆ.

ಒಂದು ವೇಳೆ, ಪಾಕ್‌ ಆಡಳಿತ ಸೇನೆಯ ವಶಕ್ಕೆ ಹೋದರೆ, ಅದರ ನೇರ ಪರಿಣಾಮ ಭಾರತದ ಮೇಲೂ ಆಗುತ್ತದೆ. ಸದ್ಯದ ಸ್ಥಿತಿಯಲ್ಲಿ ದ್ವಿಪಕ್ಷೀಯ ಮಾತುಗಳು ನಡೆಯುವುದು ಸಾಧ್ಯವೇ ಇಲ್ಲ ಎಂಬ ವಾತಾವರಣ ಇದೆ. ಉಗ್ರರನ್ನು ಕಾಶ್ಮೀರಕ್ಕೆ ಕಳುಹಿಸಿ ನಡೆಸುವ ಛಾಯಾ ಸಮರದ ತೀವ್ರತೆ ಹೆಚ್ಚಾಗುವ ಅಪಾಯವೂ ಇದೆ. ಹೀಗಾಗಿ, ಈ ಬೆಳವಣಿಗೆ ಭಾರತದ ಮಟ್ಟಿಗೆ ಮಹತ್ವದ್ದೇ ಎಂದು ವ್ಯಾಖ್ಯಾನಿಸಲಾಗುತ್ತದೆ.

ಕುತೂಹಲ ಕೆರಳಿಸಿತ್ತು: 2016ರಲ್ಲಿ ಬಹಿರಂಗವಾದ ಪನಾಮಾ ದಾಖಲೆಗಳಲ್ಲಿ ಷರೀಫ್, ಅವರ ಕುಟುಂಬಸ್ಥರು ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದರು ಎಂದು ಹೇಳಲಾಗಿತ್ತು. ಅದಕ್ಕೆ ಪೂರಕವಾಗಿ ಮೇನಲ್ಲಿ  ಸುಪ್ರೀಂ ಕೋರ್ಟ್‌ನ ಐವರು ಸದಸ್ಯರಿಂದ ನ್ಯಾಯಪೀಠ 3-2 ಅಂತರ ತೀರ್ಪು ನೀಡಿ, ಆರೋಪಗಳಿದ್ದಲ್ಲಿ ತನಿಖೆ ನಡೆಸುವಂತೆ ಜಂಟಿ ತನಿಖಾ ತಂಡ ರಚಿಸಿತ್ತು. ಅದು ಜು.10ರಂದು ವರದಿ ಸಲ್ಲಿಸಿತ್ತು. ಜು. 21ರಂದು ಸು.ಕೋ. ತೀರ್ಪನ್ನು ಕಾಯ್ದಿರಿಸಿತ್ತು.

ನ್ಯಾ| ಇಜಾಜ್‌ ಅಫ‌^ಲ್‌ ಖಾನ್‌ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ‘ಪಾಕಿಸ್ಥಾನದ ಸಂವಿಧಾನದ 62 ಮತ್ತು 63ನೇ ವಿಧಿಯನ್ವಯ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಅವರು ಸಂಸತ್‌ ಮತ್ತು ನ್ಯಾಯಾಂಗಕ್ಕೆ ಅಗೌರವ ತೋರಿದ್ದಾರೆ. ವಿಧಿಯ ಪ್ರಕಾರ ಸಂಸತ್‌ ಸದಸ್ಯನಾದವನು ಸತ್ಯವಂತನಾಗಿರಬೇಕು ಮತ್ತು ಸದಾಚಾರವಂತನಾಗಿರಬೇಕು. ಅವೆರಡರಲ್ಲಿ ಷರೀಫ್ ವಿಫ‌ಲರಾಗಿದ್ದಾರೆ. ಹೀಗಾಗಿ ಅವರು ಸದಸ್ಯರಾಗಲು ಅನರ್ಹರು. ಹೀಗಾಗಿ ಹುದ್ದೆಯಲ್ಲಿ ಮುಂದುವರಿಯಲೂ ಸಾಧ್ಯವಿಲ್ಲ’  ಎಂದು ನ್ಯಾಯಪೀಠ ಹೇಳಿತು.

Advertisement

6 ತಿಂಗಳಲ್ಲಿ ಮುಗಿಸಿ: ಪ್ರಕರಣವನ್ನು ರಾಷ್ಟ್ರೀಯ ಉತ್ತರದಾಯಿತ್ವ ಕೇಂದ್ರಕ್ಕೆ  ವರ್ಗಾಯಿಸಿದ ನ್ಯಾಯಪೀಠ ಷರೀಫ್ ಪುತ್ರ- ಪುತ್ರಿಯರಾದ ಮರ್ಯಾಮ್‌, ಹುಸೈನ್‌ ಮತ್ತು ಹಸನ್‌ ವಿರುದ್ಧ ಕೇಸು ದಾಖಲಿಸುವಂತೆ ಆದೇಶಿಸಿತು. ಜತೆಗೆ ಆರು ತಿಂಗಳಲ್ಲಿ ಪ್ರಕರಣ ಮುಕ್ತಾಯಗೊಳಿಸಬೇಕು ಎಂದು ಆದೇಶ ನೀಡಿದೆ. ಮಾಜಿ ಪ್ರಧಾನಿ ಷರೀಫ್ ಜತೆಗೆ ಹಣಕಾಸು ಸಚಿವ ಮತ್ತು ಅವರ ನಂಬಿಕಸ್ಥ ಇಶಾಕ್‌ ದರ್‌ ಮತ್ತು ಅಳಿಯ ನ್ಯಾಷನಲ್‌ ಅಸೆಂಬ್ಲಿ ಸದಸ್ಯ ಕ್ಯಾ| ಮುಹಮ್ಮದ್‌ ಸಫ‌ªರ್‌ ಅವರನ್ನು ಸದಸ್ಯತ್ವ ದಿಂದ ಅನರ್ಹಗೊಳಿಸಿದೆ. ಸು. ಕೋರ್ಟ್‌ ತೀರ್ಪು ಪ್ರಕಟವಾದ ಕೆಲವೇ ಗಂಟೆಗಳಲ್ಲಿ ನೆರೆಯ ರಾಷ್ಟ್ರದ ಚುನಾವಣಾ ಆಯೋಗ ಷರೀಫ್ರ ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿದೆ.

ರಾಜೀನಾಮೆ: ತೀರ್ಪು ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಪಿಎಂಎಲ್‌-ಎನ್‌ ಹೇಳಿಕೆ ನೀಡಿ ಪ್ರಧಾನಿ ಹುದ್ದೆಗೆ ನವಾಜ್‌ ಷರೀಫ್ ರಾಜೀನಾಮೆ ನೀಡಿದ್ದಾರೆ. ಪನಾಮಾ ದಾಖಲೆಗಳ ತನಿಖೆಯ ಬಗ್ಗೆ ಅವರಿಗೆ ಅತೃಪ್ತಿ ಇದ್ದರೂ ಸುಪ್ರೀಂ ಕೋರ್ಟ್‌ ತೀರ್ಪಿಗೆ ಗೌರವ ನೀಡಿ ಅದನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಹೊಸ ಪದ್ಧತಿ ಅಳವಡಿಸಲಾಗಿತ್ತು. ಅಂಥ ವ್ಯವಸ್ಥೆ ಪಾಕ್‌ ಚರಿತ್ರೆಯಲ್ಲೇ ನಡೆದಿಲ್ಲ ಎಂದು ಪಕ್ಷದ ವಕ್ತಾರ ಹೇಳಿದ್ದಾರೆ.

ಬಿಗಿ ಬಂದೋಬಸ್ತ್: ಪಾಕ್‌ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಸೇನಾಪಡೆ ರಾವಲ್ಪಿಂಡಿ, ಲಾಹೋರ್‌, ಇಸ್ಲಾಮಾಬಾದ್‌, ಕರಾಚಿ ಸಹಿತ ಪ್ರಮುಖ ಪಟ್ಟಣಗಳಲ್ಲಿ ಭದ್ರತೆಯ ನೇರ ಉಸ್ತುವಾರಿ ವಹಿಸಿಕೊಂಡಿದೆ.

ಮುಂದಿನ ಪ್ರಧಾನಿಯಾಗಿ ಷರೀಫ್ ಸಹೋದರ


ಮಾಜಿ ಪ್ರಧಾನಿ ನವಾಜ್‌ ಷರೀಫ್ರ ಸಹೋದರ ಶಾಭಾಜ್‌ ಷರೀಫ್ ಪ್ರಧಾನಿಯಾಗಲಿದ್ದಾರೆ. 2013ರಿಂದ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ. ನೆರೆಯ ರಾಷ್ಟ್ರದ ಮಾಧ್ಯಮಗಳಲ್ಲಿಯೂ ಅವರೇ ದೇಶದ ಮುಂದಿನ ಪ್ರಧಾನಿಯಾಗುವ ಬಗ್ಗೆ ವರದಿಗಳು ಪ್ರಕಟವಾಗಿವೆ. ವಾರದ ಹಿಂದೆ ಕೂಡ ಸುಪ್ರೀಂ ಕೋರ್ಟಲ್ಲಿ ಪ್ರತಿಕೂಲವಾಗಿ ತೀರ್ಪು ಬಂದರೆ ಖ್ವಾಜಾ ಆಸಿಫ್ರನ್ನೇ ಷರೀಫ್ ಸ್ಥಾನಕ್ಕೆ ನೇಮಿಸುವ ಪ್ರಸ್ತಾವಗಳು ಕೇಳಿ ಬಂದಿದ್ದವು. 1951ರಲ್ಲಿ ಜನಿಸಿರುವ ಅವರು 1997ರ ಫೆಬ್ರವರಿಯಿಂದ 1999ರ ಅಕ್ಟೋಬರ್‌ ವರೆಗೆ ಮತ್ತು 2008ರ ಜೂನ್‌ನಿಂದ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾರೆ. ಲಾಹೋರ್‌ನ ಪ್ರತಿಷ್ಠಿತ ಉದ್ಯಮಿಗಳ ಕುಟುಂಬಕ್ಕೆ ಸೇರಿದ ಅವರು ವ್ಯಾಪಾರಿಯಾಗಿಯೇ ವೃತ್ತಿ ಆರಂಭಿಸಿದ್ದರು. 1988-1990ರ ಅವಧಿಯಲ್ಲಿ ಪಂಜಾಬ್‌ ಪ್ರಾಂತ್ಯದ ಶಾಸಕ, 1990-93ರವರೆಗೆ ನ್ಯಾಷನಲ್‌ ಅಸೆಂಬ್ಲಿ ಸದಸ್ಯರಾಗಿದ್ದರು.

ಸುಪ್ರೀಂಕೋರ್ಟ್‌ ಹೇಳಿದ್ದೇನು?
ಪ್ರಧಾನಿ ಸಂಸತ್‌ ಮತ್ತು ಕೋರ್ಟ್‌ಗೆ ಅಗೌರವ ತೋರಿದ್ದಾರೆ. ಹೀಗಾಗಿ ಅವರು ಹುದ್ದೆಯಲ್ಲಿ ಮುಂದುವರಿಯಲು ಅನರ್ಹರು.

ಪಾಕಿಸ್ಥಾನದ ಸಂವಿಧಾನದ 62 ಮತ್ತು 63ನೇ ವಿಧಿಯ ಅನ್ವಯ ಈ ತೀರ್ಮಾನ. ಅದರ ಪ್ರಕಾರ ಸಂಸತ್‌ನ ಸದಸ್ಯರಾಗಿ ಮುಂದುವರಿಯಲೂ ಯೋಗ್ಯರಲ್ಲ

ನವಾಜ್‌ ಷರೀಫ್ ಮತ್ತು ಅವರ ಕುಟುಂಬದವರ ವಿರುದ್ಧ ರಾಷ್ಟ್ರೀಯ ಉತ್ತರದಾಯಿತ್ವ ಕೇಂದ್ರ ಕೇಸು ದಾಖಲಿಸಬೇಕು. ಆರು ತಿಂಗಳಲ್ಲಿ ಪ್ರಕರಣ ಮುಕ್ತಾಯಗೊಳಿಸಬೇಕು.

ಆರೋಪಗಳೇನು?
ಹಿಂದಿನ ಎರಡು ಸಂದರ್ಭಗಳಲ್ಲಿ ಪ್ರಧಾನಿಯಾಗಿದ್ದ ವೇಳೆ ಲಂಡನ್‌ನಲ್ಲಿ ಅಕ್ರಮವಾಗಿ ಆಸ್ತಿ ಖರೀದಿ.

ಕುಟುಂಬ ಸದಸ್ಯರಿಂದ ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿ ಆ ಮೂಲಕ ಅದರ ನಿರ್ವಹಣೆ

ದೇಶದಲ್ಲಿನ ಗಾಡ್‌ಫಾದರ್‌ ಆಡಳಿತಕ್ಕೆ ಮುಕ್ತಾಯ ಸಿಕ್ಕಿದೆ. ನವಾಜ್‌ ಷರೀಫ್ ವಿರುದ್ಧ ವೈಯಕ್ತಿಕ ಅಜೆಂಡಾ ಹೊಂದಿಲ್ಲ. 40 ವರ್ಷಗಳಿಂದ ಅವರು ಮತ್ತು ಕುಟುಂಬದ ಪರಿಚಯ ಇದೆ. ದೇಶಕ್ಕೆ ಮತ್ತು ಜನರಿಗೆ ಅವರು ಅನ್ಯಾಯ ಮಾಡಿದ್ದಾರೆ. ಇದು ಅಂತ್ಯವಲ್ಲ ಆರಂಭ.
– ಇಮ್ರಾನ್‌ ಖಾನ್‌, ಪಾಕಿಸ್ಥಾನ್‌ ತೆಹ್ರೀಕ್‌-ಇ- ಇನ್ಸಾಫ್ ಪಕ್ಷದ ಅಧ್ಯಕ್ಷ

ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನಿಂದ ಪಾಕಿಸ್ಥಾನಕ್ಕೇ ಸಂತೋಷವಾಗಿದೆ. ಇದೊಂದು ಅತ್ಯುತ್ತಮ ತೀರ್ಮಾನ. ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದದ್ದು.
– ಜ| ಪರ್ವೇಜ್‌ ಮುಷರ್ರೀಫ್, ಪಾಕಿಸ್ಥಾನದ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next