ಒಂದೆಡೆಯಿಂದ ರಷ್ಯಾ-ಉಕ್ರೇನ್ ಯುದ್ಧ, ಮತ್ತೂಂದೆಡೆಯಿಂದ ಇಸ್ರೇಲ್-ಹಮಾಸ್ ಉಗ್ರರ ಕಾದಾಟದಿಂದಾಗಿ ಸೃಷ್ಟಿಯಾಗಿರುವ ಅನಿಶ್ಚಿತತೆ ಮತ್ತು ಸಂದಿಗ್ಧ ವಾತಾವರಣದಿಂದಾಗಿ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರ ನಡುವೆಯೇ ಇರಾನ್ ಬೆಂಬಲಿತ ಹೌತಿ ಬಂಡು ಕೋರರು ಮತ್ತು ಸೊಮಾಲಿಯಾದ ಕಡಲ್ಗಳ್ಳರು ಸರಕು ಸಾಗಣೆ ನೌಕೆಗಳನ್ನು ಗುರಿಯಾಗಿಸಿ ನಿರಂತರ ವಾಗಿ ದಾಳಿಗಳನ್ನು ನಡೆಸುತ್ತಿರುವುದರಿಂದಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಇದರಿಂದಾಗಿ ಜಾಗತಿಕ ಸಮುದಾಯ ಅದರಲ್ಲೂ ಮುಖ್ಯವಾಗಿ ಬಡ ಮತ್ತು ಮಧ್ಯಮ ವರ್ಗದ ದೇಶಗಳು ಸಂಕಷ್ಟದಲ್ಲಿ ಸಿಲುಕಿದ್ದು ಆಹಾರಧಾನ್ಯಗಳು, ತೈಲೋತ್ಪನ್ನಗಳ ಸಹಿತ ಪ್ರಾಥಮಿಕ ಅಗತ್ಯಗಳ ಕೊರತೆ ಎದುರಿಸಲಾರಂಭಿಸಿದ್ದವು.
ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಏಡನ್‌ನಲ್ಲಿ ಹೌತಿ ಬಂಡುಕೋರರು ಮತ್ತು ಕಡಲ್ಗಳ್ಳರ ಅಟ್ಟಹಾಸ ಮೇರೆ ಮೀರುತ್ತಿರುತ್ತಿದ್ದಂತೆಯೇ ಕಾರ್ಯಾಚರಣೆಗಿಳಿದ ಭಾರತೀಯ ನೌಕಾಪಡೆ, ಬಂಡುಕೋರರು ಮತ್ತು ಕಡಲ್ಗಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಕ್ರೂರರ ಕೈಗೆ ಸಿಕ್ಕ ಸರಕು ಸಾಗಣೆ ಹಡಗುಗಳು ಮತ್ತದರಲ್ಲಿದ್ದ ಸಿಬಂದಿಯನ್ನು ನೌಕಾಪಡೆ ಯೋಧರು ರಕ್ಷಿಸುವ ಮೂಲಕ ಅಪ್ರತಿಮ ಶೌರ್ಯ ಮೆರೆದಿದ್ದಾರೆ.
ಕಳೆದೊಂದು ತಿಂಗಳ ಅವಧಿಯಲ್ಲಿ ಹೌತಿ ಬಂಡುಕೋರರು ಮತ್ತು ಸೊಮಾಲಿಯಾ ಕಡಲ್ಗಳ್ಳರ ದಾಳಿಗೆ ಸಿಲುಕಿ ಅಪಾಯದ ಭೀತಿಯಲ್ಲಿದ್ದ ವಿವಿಧ ದೇಶಗಳ ಸರಕು ಸಾಗಣೆ ಮತ್ತು ಮೀನುಗಾರಿಕ ನೌಕೆಗಳ ಸಹಿತ 8 ನೌಕೆಗಳನ್ನು ಭಾರತೀಯ ನೌಕಾಪಡೆಯ ರಕ್ಷಣ ಹಡಗುಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಸಫಲವಾಗಿವೆ.
ಹಮಾಸ್ ಉಗ್ರರನ್ನು ಗುರಿಯಾಗಿಸಿ, ಇಸ್ರೇಲ್ ಸೇನೆ ಗಾಜಾಪಟ್ಟಿಯಲ್ಲಿ ನಿರಂತರವಾಗಿ ನಡೆಸುತ್ತಿರುವ ದಾಳಿಗಳಿಂದಾಗಿ ಅಮಾಯಕ ನಾಗರಿಕರು ಸಾವನ್ನಪ್ಪುತ್ತಿರುವುದನ್ನು ವಿರೋಧಿಸಿ, ಗಾಜಾಪಟ್ಟಿಯ ನಾಗರಿಕರನ್ನು ಬೆಂಬಲಿಸಿ ಹೌತಿ ಬಂಡುಕೋರರು ಗಲ್ಫ್ ಆಫ್ ಏಡನ್ ಮತ್ತು ಸೊಮಾಲಿಯಾ ಕರಾವಳಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ದಾಳಿಗಳನ್ನು ನಡೆಸುತ್ತಿದೆ. ಹೌತಿ ಬಂಡುಕೋರರ ಈ ದಾಳಿಗಳಿಗೆ ಇರಾನ್ ಬೆಂಬಲ ನೀಡುತ್ತಿರುವುದರಿಂದಾಗಿ ಅಮೆ ರಿಕ ಪದೇ ಪದೆ ಎಚ್ಚರಿಕೆ ನೀಡುತ್ತಾ ಬಂದಿತ್ತು. ಇದರಿಂದ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಣ ಯುದ್ಧ ಮತ್ತೂಂದು ತಿರುವು ಪಡೆದುಕೊಳ್ಳುವ ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು.
ಹೌತಿ ಬಂಡುಕೋರರು ಮತ್ತು ಕಡಲ್ಗಳ್ಳರ ಈ ಅಟ್ಟಹಾಸದಿಂದಾಗಿ ಜಾಗತಿಕವಾಗಿ ಸರಕು ಸಾಗಣೆ ಕಷ್ಟಸಾಧ್ಯ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿ, ಜಾಗತಿಕ ಪೂರೈಕೆ ಸರಪಳಿಯ ಮೇಲೆ ಭಾರೀ ಪರಿಣಾಮವನ್ನುಂಟು ಮಾಡಿದರೂ ಯಾವೊಂದೂ ರಾಷ್ಟ್ರವೂ ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಸವಾಲಿನ ಕಾರ್ಯಕ್ಕೆ ಮುಂದಾಗದೆ ಅಂತರ ಕಾಯ್ದುಕೊಂಡಿದ್ದವು. ಆದರೆ ಭಾರತೀಯ ನೌಕಾಪಡೆ ಸರಕು ಸಾಗಣೆ ಮತ್ತು ಮೀನುಗಾರಿಕ ನೌಕೆಗಳ ರಕ್ಷಣೆಗೆ ಮುಂದಾಗಿ ತನ್ನ ರಕ್ಷಣ ಮತ್ತು ಸಮರ ನೌಕೆಗಳನ್ನು ಈ ಕಾರ್ಯಾಚರಣೆಗೆ ನಿಯೋಜಿಸಿ, ಹೌತಿ ಬಂಡುಕೋರರು ಮತ್ತು ಕಡಲ್ಗ ಞಳ್ಳರಿಂದ ನೌಕೆಗಳು ಮತ್ತು ಸಿಬಂದಿಯನ್ನು ರಕ್ಷಿಸಿದೆ. ಭಾರತೀಯ ನೌಕಾಪಡೆಯ ನೌಕೆಗಳು ನಡೆಸಿದ ಕ್ಷಿಪ್ರ ಕಾರ್ಯಾಚರಣೆಗೆ ದಾಳಿಕೋರರು ನಲುಗಿಹೋಗಿದ್ದಾರೆ.
ಭಾರತೀಯ ನೌಕಾಪಡೆಯ ಈ ಸಾಹಸಕ್ಕೆ ಜಾಗತಿಕ ಮಾಧ್ಯಮಗಳು ಮತ್ತು ವಿಶ್ಲೇಷಣಕಾರರು ಭಾರತೀಯ ನೌಕಾಪಡೆ ಸಾಗರ ಪ್ರದೇಶದಲ್ಲಿ ತೋರು ತ್ತಿರುವ ಸ್ಥೈರ್ಯ ಮತ್ತು ನಡೆಸುತ್ತಿರುವ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಭಾರತೀಯ ನೌಕಾಪಡೆ ಯೋಧರ ಈ ಕೆಚ್ಚದೆಯ ಸಾಹಸ ಮತ್ತು ಸಾಮರ್ಥ್ಯ ವಿಶ್ವವ್ಯಾಪಿ ಪ್ರಶಂಸೆಗೆ ಪಾತ್ರವಾಗಿರುವುದು ಭಾರತದ ರಕ್ಷಣ ಸಾಮರ್ಥ್ಯಕ್ಕೆ ಸಂದ ಗೌರವವೇ ಸರಿ.