- ವಿಮಾನಗಳ ಪಥ ಬದಲು; ಸಂಚಾರ ವ್ಯತ್ಯಯ
ಮಂಗಳೂರು: ನೌಕಾಪಡೆಗೆ ಸೇರಿದ ಯುದ್ಧ ವಿಮಾನ ತಾಂತ್ರಿಕ ಕಾರಣಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತುರ್ತು ಭೂ ಸ್ಪರ್ಶ ಮಾಡಿದೆ. ಅದೇ ವೇಳೆಗೆ ವಿಮಾನದ ಚಕ್ರ ಸ್ಫೋಟಗೊಂಡಿದ್ದರಿಂದ ರನ್‌ವೇಯಲ್ಲೇ ಬಾಕಿಯಾಗಿ ಇತರ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಯಿತು.
Advertisement
ರಕ್ಷಣಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಸಾಗುತ್ತಿದ್ದ ನೌಕಾಪಡೆಯ ವಿಮಾನ (ಮಿಗ್-29ಕೆ) ಸಂಜೆ ಸುಮಾರು 5 ಗಂಟೆಗೆ ತಾಂತ್ರಿಕ ಕಾರಣಗಳಿಂದ ರನ್‌ವೇಯಲ್ಲಿ ಇಳಿಯುತ್ತಿದ್ದಂತೆ ಇದರ ಹಿಂದಿನ ಚಕ್ರ ಸ್ಫೋಟಗೊಂಡು ಆತಂಕ ಸೃಷ್ಟಿಯಾಯಿತು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ವಿಮಾನವನ್ನು ಹತೋಟಿಗೆ ತರುವಲ್ಲಿ ಪೈಲಟ್‌ಗಳು ಸಫಲರಾಗಿದ್ದರು. ಚಕ್ರ ಸ್ಫೋಟಗೊಂಡು ವಿಮಾನ ರನ್‌ವೇಯಲ್ಲಿ ಬಾಕಿಯಾಗಿದ್ದರಿಂದ ಇತರ ಪ್ರಯಾಣಿಕ ವಿಮಾನಗಳು ಇಳಿಯಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ವಿಮಾನಗಳ ದಿಕ್ಕು ಬದಲಾಯಿಸಿ, ಇನ್ನೂ ಕೆಲವು ವಿಮಾನಗಳ ಸಮಯದಲ್ಲಿ ವ್ಯತ್ಯಯ ಮಾಡಲು ಸೂಚಿಸಲಾಯಿತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಜೆ 5 ಗಂಟೆಯ ವೇಳೆಗೆ ಇಳಿಯಬೇಕಿದ್ದ ದುಬಾೖಯಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರಸ್ಸನ್ನು ಕೊಚ್ಚಿಗೆ ಕಳುಹಿಸಿದ್ದು, 5.15ಕ್ಕೆ ದಿಲ್ಲಿಯಿಂದ ಬಂದ ಜೆಟ್ ಏರ್‌ವೆàಸ್ ವಿಮಾನ ಹಾಗೂ 5.30ಕ್ಕೆ ದುಬಾೖಯಿಂದ ಬಂದ ಸ್ಪೈಸ್ ಜೆಟ್ ವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು.
ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿವಿಧ ಸಮಯಕ್ಕೆ ಅನುಗುಣವಾಗಿ ಬರಬೇಕಿದ್ದ ವಿಮಾನಗಳನ್ನು ತಡವಾಗಿ ಬರುಧಿವಂತೆ ಸೂಚಿಸಲಾಗಿದ್ದರಿಂದ, ಕೆಲವು ವಿಮಾನಧಿಗಳ ಸಮಯದಲ್ಲಿ ವ್ಯತ್ಯಯವಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಅವರು ತಿಳಿಸಿದ್ದಾರೆ.
Related Articles
ನೌಕಾಪಡೆಗೆ ಸೇರಿದ ಮಿಗ್ 29 ಕೆ. ಫೈಟರ್ ಜೆಟ್‌ನಲ್ಲಿ ಹೈಡ್ರಾಲಿಕ್ ಸಮಸ್ಯೆ ಕಾಣಿಸಿದ್ದರಿಂದ ಪೈಲಟ್ ಪಥ ಬದಲಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ನಿರ್ಧರಿಸಿದರು. ಈ ಯುದ್ಧ ವಿಮಾನ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಿಂದ ಹೊರಟಿತ್ತು.
Advertisement
2ನೇ ದಿನವೂ ತುರ್ತು ಭೂಸ್ಪರ್ಶ!ಮುಂಬಯಿಯಿಂದ ಕೊಚ್ಚಿಯತ್ತ 58 ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತಿದ್ದ ಏರ್‌ಇಂಡಿಯಾ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಸೋಮವಾರ ರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ರಾತ್ರಿ 7.30ರ ವೇಳೆಗೆ ಇಳಿದ ವಿಮಾನದ ಸಮಸ್ಯೆ ಬಗೆಹರಿಸಲು ರಾತ್ರಿ ವರೆಗೂ ಪ್ರಯತ್ನ ನಡೆಸಲಾಗಿತ್ತು. ಬಳಿಕ ರಾತ್ರಿ 11.30ಕ್ಕೆ ಕೊಚ್ಚಿಯಿಂದ ಏರ್‌ಇಂಡಿಯಾ ವಿಮಾನವೊಂದು ಬಂದು 12 ಗಂಟೆಯ ವೇಳೆಗೆ ಪ್ರಯಾಣಿಕರೊಂದಿಗೆ ತೆರಳಿತ್ತು. ತಾಂತ್ರಿಕ ತೊಂದರೆಗೊಳಗಾಗಿದ್ದ ಈ ವಿಮಾನವೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ ಎನ್ನಲಾಗಿದ್ದು, ಬುಧವಾರ ಹಾರಾಟ ನಡೆಸಲಿದೆ.